ಸಾರಾಂಶ
ವಿಘ್ನೇಶ್ ಎಂ. ಭೂತನಕಾಡು
ಕನ್ನಡಪ್ರಭ ವಾರ್ತೆ ಮಡಿಕೇರಿಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವಕ್ಕೆ ಅ.3ರಂದು ನಗರದಲ್ಲಿ ನಾಲ್ಕು ಶಕ್ತಿ ದೇವತೆಗಳ ಕರಗಗಳು ನಗರ ಸಂಚಾರ ಆರಂಭಿಸುವ ಮೂಲಕ ದಸರೆ ಆರಂಭವಾಗಲಿದೆ.
ಆದರೆ ರಾಜ್ಯ ಸರ್ಕಾರದಿಂದ ಬಿಡುಗಡೆಯಾಗದ ಅನುದಾನ, ನಗರದಲ್ಲಿ ದುರಸ್ತಿಗೊಳ್ಳದ ರಸ್ತೆಗಳು ನಡುವೆ ಈ ಬಾರಿಯ ಮಡಿಕೇರಿ ದಸರಾ ಕತೆ ಏನಪ್ಪಾ ಎಂಬ ಬೇಸರದ ಭಾವನೆ ಜನಸಾಮಾನ್ಯರಲ್ಲಿ ಮೂಡಿಸಿದೆ.ಮಡಿಕೇರಿಯ ಪಂಪಿನ ಕೆರೆಯಿಂದ ಅ.3ರಂದು ಸಂಜೆ ನಗರದ ನಾಲ್ಕು ಶಕ್ತಿ ದೇವತೆಗಳಾದ ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ, ಕೋಟೆ ಮಾರಿಯಮ್ಮ, ದಂಡಿನ ಮಾರಿಯಮ್ಮ, ಕಂಚಿ ಕಾಮಾಕ್ಷಿ ದೇವರ ಕರಗಗಳು ನಗರ ಸಂಚಾರ ಆರಂಭಿಸುವ ಮೂಲಕ ಮಡಿಕೇರಿ ದಸರಾ ಆರಂಭಗೊಳ್ಳಲಿದೆ. ಈಗಾಗಲೇ ಪಂಪಿನಕೆರೆಯ ಬಳಿ ಸ್ವಚ್ಛತಾ ಕಾರ್ಯ ನಡೆದಿದ್ದು, ಕರಗ ಉತ್ಸವಕ್ಕೆ ತಯಾರಾಗಿದೆ. ಇದಕ್ಕೆ ದೇವಾಲಯದ ಸಮಿತಿಗಳು ಕೂಡ ಸಿದ್ಧತೆ ಮಾಡಿಕೊಂಡಿದ್ದಾರೆ.
ಬಿಡುಗಡೆಯಾಗದ ಅನುದಾನ: ಮಡಿಕೇರಿ ದಸರಾಗೆ ಸರ್ಕಾರದಿಂದ ಪ್ರತಿ ವರ್ಷ ಅನುದಾನವನ್ನು ಬಿಡುಗಡೆ ಮಾಡಿ ದಸರಾಗೆ ಉತ್ತೇಜನ ನೀಡಲಾಗುತ್ತದೆ. ಆದರೆ ಇನ್ನೂ ಕೂಡ ಅನುದಾನ ಘೋಷಣೆಯಾಗದಿರುವುದು ದಸರಾ ಸಮಿತಿಯಲ್ಲಿ ತೀವ್ರ ಬೇಸರ ಮೂಡಿಸಿದೆ. ಜಿಲ್ಲಾ ಉಸ್ತುವಾರಿ ಸಚಿವರು ಇತ್ತೀಚೆಗೆ ಕೊಡಗಿಗೆ ಭೇಟಿ ನೀಡಿ ದಸರಾ ಸಭೆ ನಡೆಸಿದ್ದ ಸಂದರ್ಭ ಮಡಿಕೇರಿ ಹಾಗೂ ಗೋಣಿಕೊಪ್ಪ ದಸರಾಗೆ ಹೆಚ್ಚಿನ ಅನುದಾನವನ್ನು ಸರ್ಕಾರದಿಂದ ಬಿಡುಗಡೆ ಮಾಡಿಸುವುದಾಗಿ ಭರವಸೆ ನೀಡಿದ್ದರು. ಆದರೆ ಸಭೆ ಆಗಿ ಹಲವು ದಿನಗಳು ಕಳೆದರೂ ಅನುದಾನ ಘೋಷಣೆಯಾಗಿಲ್ಲ. ಇದರಿಂದ ಈ ಬಾರಿಯ ದಸರಾ ಬಜೆಟ್ ಮಾಡಿಕೊಳ್ಳಲು ಕೂಡ ಸಮಸ್ಯೆಯಾಗಿದೆ.ಗುಂಡಿಬಿದ್ದಿರುವ ರಸ್ತೆಗಳು: ದಸರಾ ಆರಂಭಕ್ಕೆ ಎರಡು ದಿನ ಮಾತ್ರ ಬಾಕಿ ಇದ್ದು, ಇನ್ನೂ ಕೂಡ ಮಡಿಕೇರಿ ನಗರದ ರಸ್ತೆಗಳ ದುರಸ್ತಿ ಕಾರ್ಯ ನಡೆದಿಲ್ಲ. ಪ್ರಮುಖವಾಗಿ ರಾಜಾಸೀಟಿಗೆ ತೆರಳುವ ರಸ್ತೆ ಕೂಡ ಹದಗೆಟ್ಟಿದೆ. ಈ ಬಗ್ಗೆ ತಿಂಗಳ ಹಿಂದೆಯೇ ಮಡಿಕೇರಿ ದಸರಾ ದಶಮಂಟಪ ಸಮಿತಿಯ ಪ್ರಮುಖರು ಶಾಸಕರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಆದರೆ ಮಳೆ ಕಾರಣದಿಂದಾಗಿ ರಸ್ತೆ ದುರಸ್ತಿ ಕಾಮಗಾರಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಕಾರಣ ನೀಡಲಾಗುತ್ತಿದೆ. ಇನ್ನೂ ದಸರಾ ಆರಂಭ ಆದ ಬಳಿಕ ರಸ್ತೆ ದುರಸ್ತಿ ಮಾಡಲಾಗುತ್ತದೆ ಎಂದು ಪ್ರಮುಖರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಡಿಕೇರಿಯ ದಸರಾ ಹಿನ್ನೆಲೆಯಲ್ಲಿ ನಗರದ ಗಾಂಧಿ ಮೈದಾನದಲ್ಲಿ ಅ.4ರಿಂದ 9 ದಿನಗಳ ಕಾಲ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಗಾಂಧಿ ಮೈದಾನದಲ್ಲಿ ಸೋಮವಾರದಿಂದ ವೇದಿಕೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.ಮಂಟಪ ಕಾರ್ಯ ಬಿರುಸು: ಮಡಿಕೇರಿ ದಸರಾ ಹಿನ್ನೆಲೆಯಲ್ಲಿ ದಸರಾದ ಕೊನೆಯ ದಿನ ಶೋಭಾಯಾತ್ರೆ ಜರುಗಲಿದೆ. ಇದು ಮಡಿಕೇರಿ ದಸರಾದ ಪ್ರಮುಖ ಆಕರ್ಷಣೆಯಾಗಿದೆ. ನಗರದ ಹತ್ತು ದೇವಾಲಯಗಳ ಹತ್ತು ಮಂಟಪಗಳ ಕೆಲಸ ಬಿರುಸಿನಿಂದ ಸಾಗಿದೆ. ಈಗಾಗಲೇ ದೇವಾಲಯ ಸಮಿತಿಯವರು ತಮ್ಮ ಮಂಟಪದಲ್ಲಿ ಪ್ರದರ್ಶನ ಮಾಡಲು ಕಥಾ ಸಾರಾಂಶವನ್ನು ಆಯ್ಕೆ ಮಾಡಿಕೊಂಡಿದ್ದು, ಮಂಟಪದ ಕಲಾಕೃತಿಗಳ ಕೆಲಸ ನಡೆಯುತ್ತಿದೆ. ಈ ಬಾರಿಯೂ ಕೂಡ ಮಂಟಪಗಳು ಪ್ರಶಸ್ತಿ ಪಡೆಯುವ ನಿಟ್ಟಿನಲ್ಲಿ ವಿಭಿನ್ನವಾಗಿ ಕೆಲಸ ಮಾಡುತ್ತಿವೆ.
ಇತಿಹಾಸ ಪ್ರಸಿದ್ಧ ಮಡಿಕೇರಿ ದಸರಾ ಉತ್ಸವಕ್ಕೆ ಈ ಬಾರಿ ಹೆಚ್ಚಿನ ಅನುದಾನ ದೊರಕುವ ವಿಶ್ವಾಸವಿದೆ. ಈ ಬಗ್ಗೆ ಸಚಿವರು ಹಾಗೂ ಶಾಸಕರು ಈಗಾಗಲೇ ಭರವಸೆ ನೀಡಿದ್ದಾರೆ. ದಸರಾ ಹಿನ್ನೆಲೆಯಲ್ಲಿ ಅ.3ರಂದು ಕರಗ ಉತ್ಸವ ಜರುಗಲಿದೆ. ಅ.4ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಗಾಂಧಿ ಮೈದಾನದಲ್ಲಿ ವೇದಿಕೆ ನಿರ್ಮಾಣ ಕಾರ್ಯ ಆರಂಭವಾಗಿದೆ. ನಗರ ಅಲಂಕಾರ ಸಿದ್ಧತೆಗಳು ಭರದಿಂದ ಸಾಗಿದೆ ಎಂದು ಮಡಿಕೇರಿ ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ ಹೇಳಿದರು.