ಯೋಗದಿಂದ ಮಾತ್ರ ಒತ್ತಡ ನಿವಾರಣೆ ಸಾಧ್ಯ: ಸಿವಿಲ್ ನ್ಯಾಯಾಧೀಶ ಬಿ.ಸತೀಶ್

| Published : Jun 23 2024, 02:10 AM IST

ಯೋಗದಿಂದ ಮಾತ್ರ ಒತ್ತಡ ನಿವಾರಣೆ ಸಾಧ್ಯ: ಸಿವಿಲ್ ನ್ಯಾಯಾಧೀಶ ಬಿ.ಸತೀಶ್
Share this Article
  • FB
  • TW
  • Linkdin
  • Email

ಸಾರಾಂಶ

ಯೋಗ ಕೇವಲ ಯೋಗದಿನಕ್ಕೆ ಸೀಮಿತವಾಗದೇ ಪ್ರತಿ ದಿನ ಯೋಗಾಸನ ರೂಢಿಸಿಕೊಂಡರೆ ದೈಹಿಕ ಸಮತೋಲ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ ನಿತ್ಯ ಯೋಗದ ದೃಢ ಸಂಕಲ್ಪವನ್ನು ಪ್ರತಿಯೊಬ್ಬರೂ ಹೊತ್ತು ಯೋಗದಲ್ಲಿ ತೊಡಗಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಹೊಸಕೋಟೆ

ಮನುಷ್ಯ ನಿತ್ಯ ಜೀವನದ ಜಂಜಾಟದಲ್ಲಿ ಮನಸ್ಸನ್ನು ನಿಯಂತ್ರಣ ಮಾಡಿಕೊಳ್ಳುವುದು ಕಷ್ಟಕರವಾಗಿದ್ದು, ಒತ್ತಡದ ಬದುಕಿನಿಂದ ಹೊರಬರಲು ಯೋಗದಿಂದ ಮಾತ್ರ ಸಾಧ್ಯ ಎಂದು ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಸತೀಶ್ ತಿಳಿಸಿದರು.

ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಯೋಗ ಕೇವಲ ವ್ಯಾಯಾಮವಷ್ಟೇ ಅಲ್ಲ. ಬದಲಾಗಿ ಜೀವನ ಶೈಲಿಯನ್ನೇ ಬದಲಿಸುವ ಸಾಧನವಾಗಿರುವ ಪರಿಣಾಮ ನಿತ್ಯ ಜೀವನದಲ್ಲಿ ಯೋಗವನ್ನು ಒಂದು ಭಾಗವನ್ನಾಗಿ ಅಳವಡಿಸಿಕೊಳ್ಳಬೇಕು ಎಂದರು.

ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಚೈತ್ರ ವಿ.ಕುಲಕರ್ಣಿ ಮಾತನಾಡಿ, ಯೋಗ ಕೇವಲ ಯೋಗದಿನಕ್ಕೆ ಸೀಮಿತವಾಗದೇ ಪ್ರತಿ ದಿನ ಯೋಗಾಸನ ರೂಢಿಸಿಕೊಂಡರೆ ದೈಹಿಕ ಸಮತೋಲ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ ನಿತ್ಯ ಯೋಗದ ದೃಢ ಸಂಕಲ್ಪವನ್ನು ಪ್ರತಿಯೊಬ್ಬರೂ ಹೊತ್ತು ಯೋಗದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ವಕೀಲರ ಸಂಘದ ಅಧ್ಯಕ್ಷ ವೆಂಕಟಸ್ವಾಮಿ ಮಾತನಾಡಿ, 2014ರಲ್ಲಿ ದೇಶದ ಪ್ರಧಾನಮಂತ್ರಿ ನರೇಂದ್ರಮೋದಿ ವಿಶ್ವಾದ್ಯಂತ ಯೋಗದಿನವನ್ನು ಆಚರಿಸಲು ಕರೆಕೊಟ್ಟ ಸಂದರ್ಭದಲ್ಲಿ 173 ದೇಶಗಳು ಒಪ್ಪಿಗೆ ಸೂಚಿಸಿ ಪ್ರತಿ ವರ್ಷ ಜೂ.21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸುವಂತಾಯಿತು. ಯೋಗ ಮನಸ್ಸಿನ ಸ್ಥಿಮಿತತೆಯನ್ನು ಕಾಪಾಡಿಕೊಳ್ಳಲು ಪರಿಣಾಮಕಾರಿಯಾಗಿ ಕೆಲಸ ಮಾಡಲಿದ್ದು, ನಿತ್ಯ ಬದುಕಿನಲ್ಲಿ ಅರ್ಧಗಂಟೆ ಯೋಗಕ್ಕೆ ಸಮಯವನ್ನು ಮೀಸಲಿರಿಸಬೇಕು ಎಂದರು.

ಯೋಗ ಬಂಧು ಭಾಸ್ಕರ್, ವಕೀಲರ ಸಂಘದ ಅಧ್ಯಕ್ಷ ವೆಂಕಟಸ್ವಾಮಿ, ಉಪಾಧ್ಯಕ್ಷ ನಾಗರಾಜ್, ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್, ಖಜಾಂಚಿ ರವಿಕುಮಾರ್, ವಕೀಲರ ಸಂಘದ ಪದಾಧಿಕಾರಿಗಳು ಹಾಜರಿದ್ದರು.