ಕಡೂರು ಪುರಸಭೆ ಚುನಾವಣೆಗೆ ತೆರೆಮರೆ ಕಸರತ್ತು

| Published : Aug 10 2024, 01:34 AM IST

ಸಾರಾಂಶ

ಕಡೂರುಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಗಾದಿಯ ಮೀಸಲಾತಿ ಪ್ರಕಟವಾಗುತ್ತಿರುವ ಬೆನ್ನಲ್ಲೇ ಕಡೂರು ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಕುರಿತಂತೆ ಕಡೂರು ರಾಜಕೀಯ ಮೊಗಸಾಲೆಯಲ್ಲಿ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಪಕ್ಷಗಳಲ್ಲಿ ಮಿಂಚಿನ ಸಂಚಾರ ಆರಂಭವಾಗಿದೆ.

ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳು ಸಾಮಾನ್ಯ ವರ್ಗಕ್ಕೆ ಮೀಸಲು

ಕಡೂರು ಕೃಷ್ಣಮೂರ್ತಿ.

ಕನ್ನಡಪ್ರಭ ವಾರ್ತೆ, ಕಡೂರು

ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಗಾದಿಯ ಮೀಸಲಾತಿ ಪ್ರಕಟವಾಗುತ್ತಿರುವ ಬೆನ್ನಲ್ಲೇ ಕಡೂರು ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಕುರಿತಂತೆ ಕಡೂರು ರಾಜಕೀಯ ಮೊಗಸಾಲೆಯಲ್ಲಿ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಪಕ್ಷಗಳಲ್ಲಿ ಮಿಂಚಿನ ಸಂಚಾರ ಆರಂಭವಾಗಿದೆ.

ಸುಮಾರು ಹದಿನೈದು ತಿಂಗಳ ಬಳಿಕ ವಿಧಾನಸಭಾ, ಲೋಕಸಭಾ ಮತ್ತು ವಿಧಾನ ಪರಿಷತ್ ಚುನಾವಣೆ ನಂತರ ರಾಜ್ಯ ಸರ್ಕಾರ ಮೀಸಲಾತಿ ಪ್ರಕಟಿಸಿದೆ. ಕಡೂರು ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳು ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಕಾರಣ ನಿರೀಕ್ಷೆಯಂತೆಯೇ ತೆರೆಮರೆಯಲ್ಲಿ ತೀವ್ರ ಕಸರತ್ತು ನಡೆಯುತ್ತಿದೆ.

ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಇಲ್ಲದ ಕಡೂರು ಪುರಸಭೆಯಲ್ಲಿ 23 ಸದಸ್ಯರಲ್ಲಿ ಕಾಂಗ್ರೆಸ್ 7, ಬಿಜೆಪಿ 6, ಜೆಡಿಎಸ್ 6 ಮತ್ತು 4 ಪಕ್ಷೇತರ ಸದಸ್ಯರು ಆಯ್ಕೆ ಆಗಿದ್ದಾರೆ. ಕಳೆದ ಅವಧಿಯ ಪುರಸಭೆ ಅಧ್ಯಕ್ಷ -ಉಪಾಧ್ಯಕ್ಷರ ಚುನಾವಣೆಯಲ್ಲಿ ಅಂದಿನ ಶಾಸಕರಾಗಿದ್ದ ಬೆಳ್ಳಿ ಪ್ರಕಾಶ್ ರವರ 1 ಮತವೂ ಸೇರಿದಂತೆ ಅವರ ನೇತೃತ್ವದಲ್ಲಿ ಕಡೂರು ಪುರಸಭೆಯಲ್ಲಿ ತಲಾ 6 ಸದಸ್ಯ ಬಲದ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಿಂದ ಜೆಡಿಎಸ್ ನ ಭಂಡಾರಿ ಶ್ರೀನಿವಾಸ್ ಅಧ್ಯಕ್ಷರಾಗಿ, ಬಿಜೆಪಿ ಸದಸ್ಯರಾದ ವಿಜಯ ಚಿನ್ನರಾಜು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಇದೀಗ 2 ನೇ ಹಂತದ ಅಧ್ಯಕ್ಷ -ಉಪಾಧ್ಯಕ್ಷ ಗಾದಿಗೆ ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ನ ಮೂರು ಪಕ್ಷಗಳಲ್ಲೂ ಪೈಪೋಟಿ ಆರಂಭವಾಗಿದೆ.

ಹಾಲಿ ಕಾಂಗ್ರೆಸ್ ಶಾಸಕ ಕೆ.ಎಸ್.ಆನಂದ್ ಮತ್ತು ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಅವರಿಗೆ ಪ್ರತಿಷ್ಠೆ ಚುನಾವಣೆ ಇದಾಗಿದ್ದು, ಮಾಜಿ ಶಾಸಕ ವೈ.ಎಸ್ ವಿ.ದತ್ತರವರ ನಡೆ ಕೂಡ ಪರಿಗಣಿಸಬೇಕಿದೆ.

ಮೊದಲ ಅವಧಿಯಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿಯಿಂದ ಪುರಸಭೆ ಆಡಳಿತ ನಡೆದಿತ್ತು. ಇದೀಗ 2ನೇ ಅ‍ವಧಿಯಲ್ಲೂ ಜೆಡಿಎಸ್- ಬಿಜೆಪಿ ಮೈತ್ರಿ ಮುಂದುವರಿಯುತ್ತದೆಯೇ ಅಥವಾ 7 ಸದಸ್ಯ ಬಲದ ಕಾಂಗ್ರೆಸ್ ಪಕ್ಷ ಪ್ರತಿ ತಂತ್ರಗಳನ್ನು ರೂಪಿಸುತ್ತದೆಯೇ ನೋಡಬೇಕು. ಕಾಂಗ್ರೆಸ್ ನಲ್ಲೂ ಅಧ್ಯಕ್ಷ ಉಪಾಧ್ಯಕ್ಷ ಗಾದಿಗೆ ಹೆಚ್ಚಿನ ಆಕಾಂಕ್ಷಿಗಳಿದ್ದು, ಹಾಲಿ ಶಾಸಕ ರಾದ ಕೆ.ಎಸ್. ಆನಂದ್ ಯಾವ ರೀತಿಯ ತಂತ್ರ ಹೆಣೆಯುವರೋ ನೋಡಬೇಕಿದೆ.

ಇನ್ನು ನಾಲ್ವರು ಪಕ್ಷೇತರ ಸದಸ್ಯರಲ್ಲಿ ಮೂವರು ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದು, ಓರ್ವ ಸದಸ್ಯ ಕಾಂಗ್ರೆಸ್‌ ನಲ್ಲಿ ಗುರುತಿಸಿಕೊಂಡಿದ್ದಾರೆ. ಒಟ್ಟಾರೆ ಹಿಂದಿನ ತಿರ್ಮಾನದಂತೆ ಮುಂದಿನ ಅಧ್ಯಕ್ಷಗಾದಿ ಬಿಜೆಪಿಗೆ ಉಪಾಧ್ಯಕ್ಷಗಾದಿ ಜೆಡಿಎಸ್ ಗೆ ಎಂಬ ತೀರ್ಮಾನವಾಗಿತ್ತು ಎಂದು ತಿಳಿದು ಬಂದಿದೆ.

ಒಟ್ಟಾರೆ ಕಡೂರು ಪುರಸಭೆ ಎರಡನೇ ಅ‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍ವಧಿ ಅಧಿಕಾರ ಗದ್ದುಗೆ ಬಿಜೆಪಿ- ಜೆಡಿಎಸ್ ಮೈತ್ರಿಗೋ ಅಥವಾ ಕಾಂಗ್ರೆಸ್‌ ನಿಂದ ಹೊಸ ಬೆಳವಣಿಗೆಯೋ ಎಂಬುದನ್ನು ನೋಡಬೇಕಾಗಿದೆ.