ಮುಂಡರಗಿಯಲ್ಲಿ ಶೌಚಕ್ಕೆ ಬಯಲೇ ಆಸರೆ!

| Published : Oct 21 2025, 01:00 AM IST

ಸಾರಾಂಶ

ಮುಂಡರಗಿ ಪುರಸಭೆಯಿಂದ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳುವುದಕ್ಕಾಗಿ ಲಕ್ಷಾಂತರ ರು. ಅನುದಾನ ನೀಡಿದ್ದಾರಾದರೂ ಇದುವರೆಗೂ ಬಯಲು ಬಹಿರ್ದೆಸೆ ಮಾತ್ರ ನಿಂತಿಲ್ಲ.

ಶರಣು ಸೊಲಗಿ

ಮುಂಡರಗಿ: ಮುಂಡರಗಿ ಪಟ್ಟಣವನ್ನು ಬಯಲು ಬಹಿರ್ದೆಸೆ ಮುಕ್ತ ಮಾಡಬೇಕೆಂದು ಸರ್ಕಾರ ಸ್ವಚ್ಛ ಭಾರತ ಯೋಜನೆಯಡಿ ಕೋಟ್ಯಂತರ ರು.ಗಳನ್ನು ಖರ್ಚು ಮಾಡಿ ಶೌಚಾಲಯಗಳನ್ನು ನಿರ್ಮಿಸುತ್ತಿದ್ದರೂ ಪಟ್ಟಣದಲ್ಲಿ ಬಹಿರ್ದೆಸೆಗೆ ಇನ್ನೂ ಬಯಲು ಗತಿ ಎನ್ನುವಂತಾಗಿದೆ!

ಪಟ್ಟಣದ ಗದಗ- ಮುಂಡರಗಿ ರಸ್ತೆ, ಘಟ್ಟಿರಡ್ಡಿಹಾಳ ರಸ್ತೆ, ರಾಮೇನಹಳ್ಳಿ ರಸ್ತೆ, ಶಿರೋಳ ರಸ್ತೆ, ಬ್ಯಾಲವಾಡಗಿ ರಸ್ತೆ, ಎಸ್.ಎಸ್. ಪಾಟೀಲ ನಗರ, ಹೆಸರೂರು ರಸ್ತೆ ಆಶ್ರಯ ಕಾಲನಿ, ಹೊಸ ಎಪಿಎಂಸಿ ರಸ್ತೆ, ಹಳೆ ಎಪಿಎಂಸಿ ಆವರಣ, ತುಂಗಭದ್ರಾ ನಗರ, ಕೊಪ್ಪಳ ರಸ್ತೆ ಸೇರಿದಂತೆ ಪಟ್ಟಣದ ವಿವಿಧ ಭಾಗಗಳಲ್ಲಿನ ರಸ್ತೆಗಳಲ್ಲಿ ಬೆಳಗಿನ ಜಾವ ತೆರಳಿದರೆ ಮಹಿಳೆಯರು, ಪುರುಷರು ಹಾಗೂ ಮಕ್ಕಳು ರಸ್ತೆಗಳ ಅಕ್ಕಪಕ್ಕ, ಜಮೀನುಗಳಲ್ಲಿ, ಮುಳ್ಳಿನ ಕಂಟಿಗಳ ಮರೆಯಲ್ಲಿ ಬಹಿರ್ದೆಸೆಗೆ ಹೋಗುತ್ತಾರೆ.

ಪಟ್ಟಣದ ಎಸ್.ಎಸ್. ಪಾಟೀಲ ನಗರದ ಸಮೀಪದಲ್ಲಿ ಖಾಸಗಿ ಶಾಲೆ ಇದ್ದು, ಶಾಲೆಯ ಮುಂದೆಯೇ ಬಹಿರ್ದೆಸೆ ಮಾಡಿರುವುದು ಕಂಡುಬರುತ್ತಿದೆ. ರುದ್ರಭೂಮಿ ಎಂದರೆ ದೇವಸ್ಥಾನ ಎನ್ನುತ್ತಾರೆ. ದುರಂತವೆಂದರೆ ಅನ್ನದಾನೀಶ್ವರ ರುದ್ರಭೂಮಿಯಲ್ಲಿಯೇ ನಿತ್ಯ ಅನೇಕರು ಬಹಿರ್ದೆಸೆಗೆ ತೆರಳುತ್ತಾರೆ. ಜಲಮಂಡಳಿ ಆವರಣ, ತೋಟಗಾರಿಕೆ ಕಚೇರಿ ಹಾಗೂ ಕೃಷಿ ಇಲಾಖೆ ಕಚೇರಿ ಅಕ್ಕಪಕ್ಕ ಬಯಲು ಬಹಿರ್ದೆಸೆ ಮಾಡುತ್ತಾರೆ.

ಮುಂಡರಗಿ ಪುರಸಭೆಯಿಂದ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳುವುದಕ್ಕಾಗಿ ಲಕ್ಷಾಂತರ ರು. ಅನುದಾನ ನೀಡಿದ್ದಾರಾದರೂ ಇದುವರೆಗೂ ಬಯಲು ಬಹಿರ್ದೆಸೆ ಮಾತ್ರ ನಿಂತಿಲ್ಲ. ಈ ಕುರಿತು ಜನಜಾಗೃತಿ ಮೂಡಿಸುವ ಕಾರ್ಯ ಪುರಸಭೆಯಿಂದ ನಡೆಯುತ್ತಿಲ್ಲ. ಅನೇಕ ಕಡೆ ಪುರಸಭೆಯಿಂದ ಅನುದಾನ ಪಡೆದು ಶೌಚಾಲಯ ನಿರ್ಮಿಸಿಕೊಂಡಿದ್ದರೂ ಅದನ್ನು ಬಳಕೆ ಮಾಡಿಕೊಳ್ಳದೇ ಬಯಲಿಗೆ ಹೋಗುವುದು ಕಂಡುಬರುತ್ತಿದೆ.

ಪಟ್ಟಣದ ಎಲ್ಲ ಪ್ರಮುಖ ರಸ್ತೆಗಳಲ್ಲಿ ನಿತ್ಯವೂ ಬಯಲು ಬಹಿರ್ದೆಸೆ ಮಾಡುತ್ತಿರುವುದರಿಂದ ಗಬ್ಬುವಾಸನೆ ಹರಡಿ ನಿತ್ಯ ಆ ರಸ್ತೆಯಲ್ಲಿ ಸಂಚರಿಸುವವರು ಸಾಂಕ್ರಾಮಿಕ ರೋಗಕ್ಕೆ ಹೆದರಿ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ತಪ್ಪಿಸಲು ಪಟ್ಟಣದಲ್ಲಿ ಇನ್ನಷ್ಟು ಸಮುದಾಯ ಶೌಚಾಲಯಗಳ ನಿರ್ಮಾಣವಾಗಬೇಕಿದೆ. ಪುರಸಭೆ ಆಡಳಿತ ಮಂಡಳಿ ಮತ್ತು ಪುರಸಭೆ ಅಧಿಕಾರಿಗಳು ಈ ಕುರಿತು ಯಾವ ಕ್ರಮ ಕೈಗೊಳ್ಳುವರೋ ಕಾದು ನೋಡಬೇಕಿದೆ.

ಜನರಿಗೆ ತೊಂದರೆ: ರುದ್ರಭೂಮಿಯಿಂದ ಪ್ರಾರಂಭವಾಗಿ ಜಲ ಮಂಡಳಿ ಆವರಣ, ತೋಟಗಾರಿ, ಕೃಷಿ ಇಲಾಖೆ ಸೇರಿದಂತೆ ವಿವಿದೆ ನಿತ್ಯವೂ ಬಯಲು ಮಲವಿಸರ್ಜನೆ ಯಾವುದೇ ಅಡೆತಡೆ ಇಲ್ಲದೇ ನಡೆಯುತ್ತಿದ್ದು, ಬೇರೆಡೆಯಿಂದ ಪಟ್ಟಣಕ್ಕೆ ಬರುವವರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವರ್ತಕ ಕೊಟ್ರೇಶ ಅಂಗಡಿ ತಿಳಿಸಿದರು.