ಮಂಗಳೂರು ರಥಬೀದಿಯ ಡಾ.ಪಿ. ದಯಾನಂದ ಪೈ- ಪಿ.ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ, ಗ್ರಂಥಾಲಯ ಹಾಗೂ ಕನ್ನಡ ವಿಭಾಗ ಸಂಯುಕ್ತವಾಗಿ ಇತ್ತೀಚೆಗೆ ರಾಷ್ಟ್ರೀಯ ಗ್ರಂಥಾಲಯ ದಿನಾಚರಣೆ ಏರ್ಪಡಿಸಿತ್ತು.

ಕನ್ನಡಪ್ರಭ ವಾರ್ತೆ ಮಂಗಳೂರುಕಾಲೇಜುಗಳಲ್ಲಿ ಮುಕ್ತ ವಾಚನಾಲಯ ಎನ್ನುವ ನೂತನ ಪರಿಕಲ್ಪನೆ ಅನುಕರಣಾರ್ಹ. ಪ್ರತಿನಿತ್ಯ ಗ್ರಂಥಾಲಯದ ಸದ್ಬಳಕೆ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಜ್ಞಾನದ ಜತೆಗೆ ಶಿಸ್ತು ಕೂಡ ಲಭ್ಯವಾಗುತ್ತದೆ ಎಂದು ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ ಹೇಳಿದ್ದಾರೆ.ನಗರದ ರಥಬೀದಿಯ ಡಾ.ಪಿ. ದಯಾನಂದ ಪೈ- ಪಿ.ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ, ಗ್ರಂಥಾಲಯ ಹಾಗೂ ಕನ್ನಡ ವಿಭಾಗ ಸಂಯುಕ್ತವಾಗಿ ಏರ್ಪಡಿಸಿದ ರಾಷ್ಟ್ರೀಯ ಗ್ರಂಥಾಲಯ ದಿನಾಚರಣೆ ಮತ್ತು ಹೊಸದಾಗಿ ಪ್ರಾರಂಭಿಸಲಾದ ಮುಕ್ತ ವಾಚನಾಲಯ ಉದ್ಘಾಟಿಸಿ ಅವರು ಮಾತನಾಡಿದರು.

ಇಂಟರ್ನೆಟ್ ಇಲ್ಲದ ಸಂದರ್ಭದಲ್ಲಿ ಎಲ್ಲರೂ ಹೆಚ್ಚಾಗಿ ಗ್ರಂಥಾಲಯವನ್ನು ಅವಲಂಬಿಸುತ್ತಿದ್ದುದರಿಂದ ನಮ್ಮ ಜ್ಞಾನ, ಕೌಶಲ್ಯ ವೃದ್ಧಿಗೆ ಗ್ರಂಥಾಲಯ ಬಹಳ ಮುಖ್ಯ ಪಾತ್ರ ವಹಿಸುತ್ತಿತ್ತು. ನಾವು ಅತಿಯಾಗಿ ಪುಸ್ತಕವನ್ನು ಉಪಯೋಗಿಸಿಕೊಂಡಾಗ ನಮ್ಮ ಜ್ಞಾನ ಮತ್ತೊಂದು ಸ್ತರಕ್ಕೆ ಏರಲು ಸಾಧ್ಯ ಎಂದು ಅವರು ಹೇಳಿದರು.

ವಿಶ್ರಾಂತ ಪ್ರಾಧ್ಯಾಪಕ ಹಾಗೂ ಲೇಖಕ ಡಾ. ನರೇಂದ್ರ ರೈ ದೇರ್ಲ ಮಾತನಾಡಿ, ಓದು ನಮ್ಮಲ್ಲಿ ಸೂಕ್ಷ್ಮತೆ, ಸಹನೆ, ಸೃಜನಶೀಲತೆ ಮತ್ತು ಬಹುತ್ವದ ಬಗ್ಗೆ ಅರಿವನ್ನು ಮೂಡಿಸುತ್ತದೆ. ಈ ಗುಣಗಳಿಲ್ಲದ ಯುವ ಜನತೆಯ ಭವಿಷ್ಯದ ಬಗ್ಗೆ ನಾವು ಭಯಪಡಬೇಕಿದೆ ಎಂದರು.

ವಿಶ್ವವಿದ್ಯಾನಿಲಯ ಕಾಲೇಜಿನ ಗ್ರಂಥಪಾಲಕಿ ಡಾ.ವನಜಾ ಅವರು ಗ್ರಂಥಾಲಯ ವಿಜ್ಞಾನ ಪಿತಾಮಹ ಎಸ್.ಆರ್. ರಂಗನಾಥನ್ ಅವರ ಜೀವನ ಮತ್ತು ಸಾಧನೆಗಳ ಬಗ್ಗೆ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಡಾ. ಜಯಕರ ಭಂಡಾರಿ ಎಂ. ಅಧ್ಯಕ್ಷತೆ ವಹಿಸಿದ್ದರು. ಮುಕ್ತ ವಾಚನಾಲಯದಲ್ಲಿ ಸುಮಾರು 15 ವಿವಿಧ ಭಾಷೆಗಳ ದಿನಪತ್ರಿಕೆಗಳು, 25ಕ್ಕೂ ಹೆಚ್ಚು ನಿಯತಕಾಲಿಕೆಗಳು ಲಭ್ಯವಿದ್ದು, ವಿದ್ಯಾರ್ಥಿಗಳು ಬಿಡುವಿನ ವೇಳೆಯಲ್ಲಿ ಬಳಸಬಹುದಾಗಿರುತ್ತದೆ ಎಂದು ಹೇಳಿದರು.

ಐಕ್ಯೂಎಸಿ ಸಂಯೋಜಕ ದೇವಿಪ್ರಸಾದ್, ಸಹ ಸಂಯೋಜಕಿ ಡಾ.ಜ್ಯೋತಿಪ್ರಿಯಾ, ಕಾಲೇಜಿನ ಗ್ರಂಥಪಾಲಕಿ ಉಮಾ ಎ.ಬಿ. ಮತ್ತಿತರರು ಇದ್ದರು.