ಕನ್ನಡಪ್ರಭ ವಾರ್ತೆ ಮೈಸೂರುದೀನದಯಾಳ ಉಪಾಧ್ಯಾಯರ ಏಕಾತ್ಮ ಮಾನವ ದರ್ಶನ ಕೇವಲ ದಾರ್ಶನಿಕ ಉದಾಹರಣೆ ಮಾತ್ರವಾಗಿರದೆ ಬದಲಾಗಿ ಭಾರತದ ಆತ್ಮ, ಸಂಸ್ಕೃತಿ, ಯೋಚನೆ ಮತ್ತು ಜೀವನ ಪದ್ಧತಿಯ ಮೂಲಾಧಾರವಾಗಿದೆ. ಈ ವಿಚಾರಧಾರೆಯು ಭಾರತೀಯ ಸಂಸ್ಕೃತಿ, ಆಧ್ಯಾತ್ಮಿಕತೆ ಮತ್ತು ಜೀವನ ಮೌಲ್ಯಗಳಾಧಾರಿತ ಸಮಗ್ರದೃಷ್ಟಿಕೋನ ಪ್ರಸ್ತುತಪಡಿಸುವ ಭಾರತೀಯ ಸಂಸ್ಕೃತಿಯ ಜೀವನದರ್ಶನವಾಗಿದೆ ಎಂದು ರಾಜ್ಯಪಾಲ ಥಾವರ್ ಚಾಂದ್ ಗೆಹ್ಲೋತ್ ಹೇಳಿದರು.ಪ್ರಜ್ಞಾ ಪ್ರವಾಹ ಕರ್ನಾಟಕದ ವತಿಯಿಂದ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಿದ್ದ ಏಕಾತ್ಮ ಮಾನವ ದರ್ಶನ : ಭಾರತದ ವಿಶ್ವದೃಷ್ಟಿ’ ವಿಷಯದ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.ಈ ದರ್ಶನದ ಅನುಸಾರ ಸಮಾಜವು ಒಂದು ಜೀವಂತ ಘಟಕ. ಶರೀರದ ಎಲ್ಲಾ ಅಂಗಗಳು ಸೇರಿ ಹೇಗೆ ಕಾರ್ಯನಿರ್ವಹಿಸುತ್ತದೆಯೋ, ಹಾಗೆಯೇ ಸಮಾಜದ ವಿಭಿನ್ನ ವರ್ಗಗಳು ಜೊತೆಯಾಗಿ ಒಂದು ಸಮಗ್ರ ವ್ಯವಸ್ಥೆಯನ್ನು ಮಾಡುತ್ತದೆ. ಆದ್ದರಿಂದ ಸಮಾಜದ ವಿಕಾಸಕ್ಕೆ ಎಲ್ಲಾ ವರ್ಗಗಳ ಸಮನ್ವಯ ಮತ್ತು ಸಹಯೋಗ ಅವಶ್ಯಕ ಎಂದು ಅವರು ಅಭಿಪ್ರಾಯಪಟ್ಟರು.ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ದೀನ ದಯಾಳ ಉಪಾಧ್ಯಾಯರ ಚಿಂತನೆಗಳನ್ನು ಸಾಮಾಜಿಕವಾಗಿ ಮತ್ತು ಶೈಕ್ಷಣಿಕ ಅನುಷ್ಠಾನಗೊಳಿಸುವುದಕ್ಕಾಗಿ ದೇಶದಾದ್ಯಂತ ಕಾರ್ಯಕ್ರಮ ನಡೆಯುತ್ತಿವೆ. ಅದರ ಭಾಗವಾಗಿ ಮೈಸೂರಿನಲ್ಲಿ ನಡೆಯುತ್ತಿರುವ ಕಾರ್ಯಕ್ರಮ ಶ್ಲಾಘನೀಯ. ಬಾಲ್ಯದಲ್ಲಿ ತಂದೆ ತಾಯಿಯನ್ನು ಕಳೆದುಕೊಂಡರೂ ಜೀವನೋತ್ಸಾಹವನ್ನು ಕಳೆದುಕೊಳ್ಳದೇ ತಮ್ಮ ಜೀವನವನ್ನು ಮುನ್ನಡೆಸಿದರು. ಅವರ ಕನಸು ಮತ್ತು ನನಸಿನಲ್ಲೂ ರಾಷ್ಟ್ರೀಯ ಪ್ರಜ್ಞೆ ಜಾಗೃತವಾಗಿತ್ತು ಎಂದರು.ವರ್ಚುವಲ್‌ ಮೂಲಕ ಮಾತನಾಡಿದ ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್, ದೀನದಯಾಳ ಉಪಾಧ್ಯಾಯ ಅವರ ಏಕಾತ್ಮ ಮಾನವ ದರ್ಶನದ 60ನೇ ವರ್ಷದ ನಿಮಿತ್ತ ಆಯೋಜಿಸಿರುವ ಈ ಕಾರ್ಯಕ್ರಮ ಒತ್ತಡ ಮತ್ತು ನಂಬಿಕೆ ಕಳೆದುಕೊಳ್ಳುತ್ತಿರುವ ಇಂದಿನ ದಿನಮಾನಗಳಲ್ಲಿ ಧರ್ಮದ ಮೂಲಕ ಜೀವನ ಸಮೃದ್ಧಗೊಳಿಸುವ ಕುರಿತು ತಿಳಿಸುತ್ತದೆ.

ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ. ಶರಣಪ್ಪ ವಿ ಹಲಸೆ ಅಧ್ಯಕ್ಷತೆ ವಹಿಸಿದ್ದರು. ಪ್ರಜ್ಞಾಪ್ರವಾಹದ ಕರ್ನಾಟಕ ದಕ್ಷಿಣ ಸಂಯೋಜಕ ಡಾ. ಪ್ರದೀಪ ಭಾರದ್ವಾಜ ಇದ್ದರು.ಕಾರ್ಯಕ್ರಮದಲ್ಲಿ ಪ್ರಜ್ಞಾ ಪ್ರವಾಹದ ಅಖಿಲ ಭಾರತೀಯ ಟೋಳಿ ಸದಸ್ಯ ರಘುನಂದನ್, ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಸಚಿವ ಪ್ರೊ.ಎಸ್‌.ಕೆ. ನವೀನಕುಮಾರ, ನವದೆಹಲಿಯ ಡಾ.ಶ್ಯಾಮಪ್ರಸಾದ್ ಮುಖರ್ಜಿ ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕ ಡಾ. ಬಿನಯಕುಮಾರ್ ಸಿಂಗ್‌ ಇದ್ದರು.---ಬಾಕ್ಸ್‌ ಸುದ್ದಿ ಸರ್ಕಾರದ ತಡೆ ನಡುವೆಯೂ ಆಯೋಜನೆಕನ್ನಡಪ್ರಭ ವಾರ್ತೆ ಮೈಸೂರುರಾಜ್ಯ ಸರ್ಕಾರದ ಅನುಮತಿ ಪಡೆಯದೆ ಮತ್ತು ಗಮನಕ್ಕೆ ಬಾರದೆ ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ಏಕಾತ್ಮ ಕಾರ್ಯಕ್ರಮ ಆಯೋಜಿಸಿದೆ ಎಂದು ಆರೋಪಿಸಿ ರಾಜ್ಯ ಸರ್ಕಾರವು ಕಾರ್ಯಕ್ರಮ ರದ್ದುಪಡಿಸುವಂತೆ ಸೂಚಿಸಿತ್ತು.ಆದರೂ ಬುಧವಾರ ನಿಗದಿಯಂತೆ ಕಾರ್ಯಕ್ರಮ ಸಾಂಗವಾಗಿ ನಡೆಯಿತು. ರಾಜ್ಯಪಾಲ ಥಾವರ್‌ ಚಂದ್‌ ಹೆಗ್ಲೋತ್‌, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಮುಕ್ತವಿವಿ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ವಿವಿಧ ಹಿಂದೂಪರ ಸಂಘಟನೆ ಹಾಗೂ ದೀನ್‌ ದಯಾಳ್‌ ಉಪಾಧ್ಯಾಯ ಅವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.