ಕನ್ನಡಪ್ರಭ ವಾರ್ತೆ ಕುಶಾಲನಗರಇಲ್ಲಿ ಇವರು ಆನೆಯನ್ನು ನೋಡಬಹುದು... ಹುಲಿಯನ್ನು ಸನಿಹದಿಂದ ನೋಡುವ ಭಾಗ್ಯ ಇವರಿಗೆ ಕರುಣಿಸುತ್ತಾರೆ.. ಅರಣ್ಯದಲ್ಲಿರುವ ಎಲ್ಲಾ ವನ್ಯಜೀವಿಗಳನ್ನು ಕೈಗೆ ಎಟಕುವ ಸನಿಹದಿಂದ ವೀಕ್ಷಿಸುವ ಭಾಗ್ಯ ಇವರದ್ದು.. ಇಲ್ಲಿನ ಐಷಾರಾಮಿ ಕಾಟೇಜ್ ಗಳಲ್ಲಿ ಉಳಿದುಕೊಳ್ಳುವ ಪ್ರವಾಸಿಗರಿಗೆ ರಾಜ್ಯ ಸರ್ಕಾರದ ಯಾವುದೇ ಆದೇಶಗಳು ಲೆಕ್ಕಕ್ಕಿಲ್ಲ.. ಇದು ಕುಶಾಲನಗರ ಸಮೀಪದ ದುಬಾರೆ ಆನೆ ಶಿಬಿರದ ಕೂಗಳತೆಯ ದೂರದ ಜಂಗಲ್ ಲಾಡ್ಜ್ ನಲ್ಲಿ ಕಂಡು ಬರುತ್ತಿರುವ ದೃಶ್ಯ..

ಇತ್ತೀಚೆಗೆ ಎರಡು ಆನೆಗಳ ಕಾದಾಟದಲ್ಲಿ ಪ್ರವಾಸಿ ಮಹಿಳೆ ಮೃತಪಟ್ಟ ಘಟನೆಯ ಬೆನ್ನಲ್ಲೇ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಪ್ರವಾಸಿಗರ ಸುರಕ್ಷತೆಗೆ ಹಲವು ಮಹತ್ವದ ಆದೇಶ ಹೊರಡಿಸಿದ್ದಾರೆ.ಪ್ರವಾಸಿಗರ ಸುರಕ್ಷತೆಗೆ ಎಸ್ಓಪಿ ನಿಯಮಗಳು ಜಾರಿಗೆ ಬರುವ ತನಕ ದುಬಾರೆ ಆನೆ ಶಿಬಿರ ಸೇರಿದಂತೆ ರಾಜ್ಯದ ಎಲ್ಲಾ ಆನೆ ಶಿಬಿರಗಳಿಗೆ ಪ್ರವಾಸಿಗರಿಗೆ ನಿರ್ಬಂಧ ಹೇರಿದ್ದಾರೆ. ಜೊತೆಗೆ ತೆರೆದ ವಾಹನ ಸಫಾರಿ ಕಾರ್ಯಕ್ರಮಗಳನ್ನು ಕೂಡ ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಆದರೆ ದುಬಾರೆ ಶಿಬಿರದ ಕೂಗಳತೆ ದೂರದಲ್ಲಿರುವ ಜಂಗಲ್ ಲಾಡ್ಜಸ್ ಅಧಿಕಾರಿಗಳು ಮಾತ್ರ ಈ ಬಗ್ಗೆ ತಲೆ ಕೆಡಿಸಿಕೊಳ್ಳದೆ ಅಲ್ಲಿ ಬರುವ ಪ್ರವಾಸಿಗರನ್ನು ತೆರೆದ ವಾಹನಗಳಲ್ಲಿ ಸಫಾರಿ ಕರೆದುಕೊಂಡು ಹೋಗುತ್ತಿರುವುದು ನೋಡುಗರಲ್ಲಿ ಅಚ್ಚರಿ ಮೂಡಿಸಿದೆ.ದುಬಾರೆಯ ಜಂಗಲ್ ರೆಸಾರ್ಟ್ ನಲ್ಲಿ ಒಟ್ಟು 18 ಕೊಠಡಿಗಳಿದ್ದು ವಾರಾಂತ್ಯ ಹಿನ್ನೆಲೆಯಲ್ಲಿ ಎಲ್ಲಾ ಕೊಠಡಿಗಳು ಅತಿಥಿಗಳಿಂದ ಭರ್ತಿಗೊಂಡು ಇವರನ್ನು ತೆರೆದ ಜೀಪಿನಲ್ಲಿ ಕರೆದುಕೊಂಡು ಹೋಗಿ ಅರಣ್ಯದಲ್ಲಿ ಆನೆಗಳು, ಹುಲಿ ಚಿರತೆ ಸೇರಿದಂತೆ ವನ್ಯಜೀವಿಗಳನ್ನು ನೋಡುವ ಅವಕಾಶ ಕಲ್ಪಿಸುತ್ತಿದ್ದಾರೆ.ಈ ಪ್ರವಾಸಿ ಕೇಂದ್ರದಲ್ಲಿ ಸಫಾರಿ ತೆರಳಲು ಒಟ್ಟು 8 ಓಪನ್ ಜೀಪುಗಳು ಲಭ್ಯವಿದ್ದು ದಿನನಿತ್ಯ ಬೆಳಗ್ಗೆ ಒಂದು ಗಂಟೆಗಳ ಕಾಲ ಮತ್ತು ಸಂಜೆ ವೇಳೆ 2 ಗಂಟೆಗಳ ಅವಧಿ ಸಫಾರಿ ವಾಹನಗಳ ಮೂಲಕ ಅಂದಾಜು 25 ಕಿಲೋಮೀಟರ್ ದೂರದವರೆಗೆ ವನ್ಯಜೀವಿಗಳ ವೀಕ್ಷಣೆಗಾಗಿ ಜಂಗಲ್ ಲಾಡ್ಜ್ ನಲ್ಲಿ ಉಳಿದುಕೊಂಡಿರುವ ಪ್ರವಾಸಿಗರನ್ನು ಕರೆದೊಯ್ಯಲಾಗುತ್ತಿದೆ. ಈ ಸಂದರ್ಭ ದುಬಾರೆ ಮೀಸಲು ಅರಣ್ಯದಲ್ಲಿ ಹುಲಿ ಚಿರತೆ ಕಾಡಾನೆಗಳು ಸೇರಿದಂತೆ ಎಲ್ಲಾ ರೀತಿಯ ವನ್ಯ ಮೃಗಗಳು ಸಂಚರಿಸುವುದು ವಾಡಿಕೆ. ನಾಗರಹೊಳೆ ಬಂಡಿಪುರ ಅರಣ್ಯಗಳಲ್ಲಿ ಇರುವಂತೆ ಈ ಅರಣ್ಯದಲ್ಲಿ ಕೂಡ ಹುಲಿ ಆನೆ ಚಿರತೆ ಸೇರಿದಂತೆ ಹಲವು ಅಪಾಯಕಾರಿ ವನ್ಯಜೀವಿಗಳ ಓಡಾಟ ನಿರಂತರವಾಗಿ ಗೋಚರಿಸುತ್ತಿದೆ ಎನ್ನುವುದು ಅರಣ್ಯ ಅಧಿಕಾರಿಗಳ ಮಾಹಿತಿಯಾಗಿದೆ.ಸ್ಥಳೀಯರಲ್ಲಿ ಅಚ್ಚರಿ ಉಂಟು ಮಾಡಿದೆ:

ಸಫಾರಿ ವಾಹನಗಳಿಗೆ ಸರಳು ಅಥವಾ ಗಟ್ಟಿ ಗಾಜು ಕಡ್ಡಾಯ ಎನ್ನುವ ಆದೇಶವನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಹೊರಡಿಸಿದ್ದರೂ ದುಬಾರೆಯ ಜಂಗಲ್ ಲಾಡ್ಜ್ ಅಧಿಕಾರಿ ಸಿಬ್ಬಂದಿಗಳು ಮಾತ್ರ ಯಾವುದೇ ಸ್ಪಂದನೆ ಮುನ್ನೆಚ್ಚರಿಕೆ ವಹಿಸದೆ ದಿವ್ಯ ಮೌನ ವಹಿಸಿರುವುದು ಸ್ಥಳೀಯರಲ್ಲಿ ಅಚ್ಚರಿ ಉಂಟು ಮಾಡಿದೆ.ಈ ಬಗ್ಗೆ ದುಬಾರೆ ಜಂಗಲ್ ಲಾಡ್ಜಸ್ ಅಧಿಕಾರಿಗಳನ್ನು ಸಂಪರ್ಕಿಸಿದ ಸಂದರ್ಭ ತಮಗೆ ಯಾವುದೇ ರೀತಿಯ ಆದೇಶ ಬಂದಿರುವುದಿಲ್ಲ. ನಮ್ಮಲ್ಲಿ ಪ್ರವಾಸಿಗರು ಬೆಳಗ್ಗೆ ಮತ್ತು ಸಂಜೆ ವೇಳೆ ದುಬಾರೆ ಮೀಸಲು ಅರಣ್ಯದಲ್ಲಿ ಎಂದಿನಂತೆ ತೆರೆದ ಜೀಪು ಗಳಲ್ಲಿ ಸಫಾರಿ ತೆರಳುವ ಕಾಯಕ ಮುಂದುವರಿದಿದೆ ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಯಾವುದೇ ಪ್ರವಾಸಿಗರು ಅರಣ್ಯದೊಳಗೆ ಇಳಿಯಲು ಅವಕಾಶ ನೀಡದಂತೆ ಮತ್ತು ಸಫಾರಿ ವಾಹನದಲ್ಲಿ ಪ್ರಥಮ ಚಿಕಿತ್ಸೆಯ ಕಿಟ್ ಹಾಗೂ ಸಫಾರಿ ಕೇಂದ್ರಗಳಲ್ಲಿ ಆಂಬುಲೆನ್ಸ್ ಇರಿಸುವುದನ್ನು ಖಾತ್ರಿಪಡಿಸುವಂತೆ ಸಚಿವರು ಇತ್ತೀಚೆಗೆ ಆದೇಶದಲ್ಲಿ ಸೂಚಿಸಿರುವುದನ್ನು ಹಾಗೂ ಈ ಬಗ್ಗೆ ಸಚಿವರು ಈಗಾಗಲೇ ಮುಖ್ಯ ವನ್ಯಜೀವಿ ಪರಿಪಾಲಕರಿಗೆ ನಿರ್ದೇಶನ ನೀಡಿದ್ದು ರಾಜ್ಯದ ವಿವಿಧ ವನ್ಯಜೀವಿಧಾಮ ಮತ್ತು ಕಾನನಗಳಲ್ಲಿ ನಡೆಸುತ್ತಿರುವ ಸಫಾರಿಗೆ ಸಂಪೂರ್ಣ ರಕ್ಷಣೆ ಒದಗಿಸುವಂತೆ ಸೂಚಿಸಿದ್ದಾರೆ.