ಸಾರಾಂಶ
ಧಾರವಾಡ: ಬಾಹ್ಯ ದಾಳಿ ಹಾಗೂ ಮಾನವ ನಿರ್ಮಿತ ವಿಪತ್ತುಗಳಿಂದ ಸಾರ್ವಜನಿಕರ ರಕ್ಷಣೆಗೆ ಜಿಲ್ಲಾಡಳಿತವು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಮುಂಜಾಗ್ರತಾ ಕ್ರಮವಾಗಿ ಇಲ್ಲಿಯ ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ಶುಕ್ರವಾರ ನಡೆಸಿದ ಆಪರೇಷನ್ ಅಭ್ಯಾಸ್ ಯಶಸ್ವಿಯಾಯಿತು.
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಜಿಲ್ಲಾಡಳಿತ ಹಾಗೂ ಬೇಲೂರಿನಲ್ಲಿರುವ ಎಚ್.ಪಿ.ಸಿ.ಎಲ್, ಎಲ್.ಪಿ.ಜಿ ಕಂಪನಿ ಸಹಯೋಗದಲ್ಲಿ ಸಾರ್ವಜನಿಕರ ತಿಳುವಳಿಕೆಗಾಗಿ “ಆಪರೇಶನ್ ಅಭ್ಯಾಸ್” ಹೆಸರಿನಲ್ಲಿ ಅಣುಕು ಪ್ರದರ್ಶನ ನಡೆಯಿತು.ಸೋರಿಕೆಯಾದ ಅನಿಲ: ಒಂದೆಡೆ ಅನಿಲ ಸೋರಿಕೆ, ಇನ್ನೊಂದೆಡೆ ಬೆಂಕಿ ಅನಾಹುತದ ಸಂದರ್ಭವನ್ನು ಸೃಷ್ಟಿಸಿ, ಆಫರೇಶನ್ ಅಭ್ಯಾಸ ಮೂಲಕ ಕಾಲ್ಪನಿಕ ತುರ್ತು ಪರಿಸ್ಥಿತಿ ಸೃಷ್ಟಿಸಿ, ಎಲ್ಲ ಸಿಬ್ಬಂದಿಗಳು ಸೇರಿ ತಾಲೀಮು ನಡೆಸಿದರು. ಹಿಂದೂಸ್ಥಾನ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್‌ನಲ್ಲಿ ಅನಿಲ ಸೋರಿಕೆ ಸನ್ನಿವೇಶ ಸೃಷ್ಟಿಮಾಡಲಾಗಿತ್ತು. ಸೋರಿಕೆ ಆದ ತಕ್ಷಣ ಸೈರನ್ ಕೂಗಲು ಪ್ರಾರಂಭವಾಯಿತು. ತಕ್ಷಣ ಎಲ್ಲ ಕೆಲಸಗಾರರು ಓಡೋಡಿ ಬಂದು ಸುರಕ್ಷಿತವಾದ ಸ್ಥಳಕ್ಕೆ ಆಗಮಿಸಿದರು. ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಸಿಲುಕಿಕೊಂಡವರ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಬಳಿಕ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಯಿತು.
ಇನ್ನು ಘಟನೆಯಲ್ಲಿ ಗಾಯಗೊಂಡವರನ್ನು ಸಿಬ್ಬಂದಿ ಅವರು ಸ್ಟ್ರೆಚರ್ ಮೂಲಕ ಆಂಬ್ಯುಲನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸಿದರು. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಯಿತು. ಒಟ್ಟಾರೆ, ಅಗ್ನಿ ಅವಘಡ ರೀತಿಯ ಅಣಕು ಸನ್ನಿವೇಶ ಸೃಷ್ಟಿ ಮಾಡಲಾಗಿತ್ತು. ಅದರಲ್ಲಿ ಗಾಯಗೊಂಡು ಬಿದ್ದಿದ್ದವರನ್ನು ರಕ್ಷಣಾ ಸಿಬ್ಬಂದಿ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿದರು. ಅಲ್ಲದೆ ಇದೇ ವೇಳೆ ಅಲ್ಲಿ ಇದ್ದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಪ್ರಕ್ರಿಯೆ ನಡೆಸಲಾಯಿತು. ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಪೊಲೀಸ್, ಅಗ್ನಿಶಾಮಕ ದಳ, ಕೈಗಾರಿಕಾ ಭದ್ರತಾ ಪಡೆ, ಆರೋಗ್ಯ, ಪಶುವಿದ್ಯಕೀಯ, ಹೆಸ್ಕಾಂ ಸೇರಿದಂತೆ ವಿವಿಧ ಇಲಾಖೆಯವರು ಭಾಗವಹಿಸಿದ್ದರು. ತುರ್ತು ಪರಿಸ್ಥಿತಿಯ ಬಂದಾಗ ಸಾರ್ವಜನಿಕರಿಗೆ ಮತ್ತು ಪ್ರಾಣಿ-ಪಕ್ಷಿಗಳಿಗೆ ಹಾನಿಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕೆಂದು ಅಣುಕು ಪ್ರದರ್ಶನದಲ್ಲಿ ತೋರಿಸಲಾಯಿತು.20 ಪ್ರಮುಖ ಸ್ಥಳಗಳು: ತದನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು, ಆಪರೇಷನ್ ಅಭ್ಯಾಸ ಯುದ್ಧದ ಸಂದರ್ಭದಲ್ಲಿ ತೊಂದರೆಯಾದಲ್ಲಿ ಮುಂಜಾಗ್ರತಾ ಕ್ರಮ ವಹಿಸಲು ಜನರಿಗೆ ಮತ್ತು ಜಾನುವಾರಗಳಿಗೆ ಯಾವುದೇ ಪ್ರಾಣ ಹಾನಿಯಾಗದಂತೆ ತಡೆಗಟ್ಟಲು ಈ ಅಣುಕು ಪ್ರದರ್ಶನ ಮಾಡಲಾಯಿತು. ಒಂದು ಕಿಲೋಮೀಟರ್ ದೂರ ವ್ಯಾಪ್ತಿಯಲ್ಲಿ ಆಸ್ಪತ್ರೆ ಸ್ಥಾಪಿಸಿ, ಪ್ರಾಣಿಗಳಿಗೆ ಆಶ್ರಯ ಕೇಂದ್ರವನ್ನು ಮಾಡಿ ಅಲ್ಲಿ ಜಾನುವಾರುಗಳಿಗೆ ಮತ್ತು ಸಾಕು ಪ್ರಾಣಿಗಳಿಗೆ ಹೇಗೆ ಚಿಕಿತ್ಸೆ ಕೊಡಲಾಗುತ್ತದೆ? ಆರೋಗ್ಯ ಇಲಾಖೆಯವರು ಸಿದ್ಧತೆಗಳನ್ನು ಮಾಡಿಕೊಂಡಿರುವ ಕ್ರಮವನ್ನು ಅಣುಕು ಪ್ರದರ್ಶನದ ಮೂಲಕ ಪ್ರದರ್ಶಿಸಲಾಯಿತು ಎಂದರು.
ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ಹೆಚ್ಚು ಕಂಪನಿಗಳಿದ್ದು, ಆ ಪ್ರದೇಶದಲ್ಲಿ ಅನಾಹುತಗಳು ಸಂಭವಿಸಿದ್ದಲ್ಲಿ ಜನರನ್ನು ರಕ್ಷಿಸಲು ಆ ಪ್ರದೇಶದಿಂದ ಸಂತ್ರಸ್ಥರನ್ನು ಬೇರೆ ಪ್ರದೇಶಕ್ಕೆ ಸ್ಥಳಾಂತರಿಸಲಾಗುತ್ತದೆ. ಆ ಸ್ಥಳದಲ್ಲಿ 60ಕ್ಕೂ ಹೆಚ್ಚು ಬೆಡ್‌ಗಳಿದ್ದು, ಪರಿಹಾರ ಕೇಂದ್ರಗಳನ್ನು ಮಾಡಿ, ಜನರನ್ನು ರಕ್ಷಿಸಲು ಪ್ರಯತ್ನ ಮಾಡುತ್ತೇವೆ ಎಂದ ಅವರು, ಜಿಲ್ಲೆಯಲ್ಲಿ 20ಕ್ಕೂ ಹೆಚ್ಚು ಪ್ರಮುಖ ಸ್ಥಳಗಳನ್ನು ಭದ್ರತೆ ದೃಷ್ಠಿಯಿಂದ ಗುರುತಿಸಲಾಗಿದೆ. ರೈಲು ನಿಲ್ದಾಣ, ಬಸ್‌ನಿಲ್ದಾಣ, ವಿಮಾನ ನಿಲ್ದಾಣ ಹಾಗೂ ಪೆಟ್ರೊಲಿಯಂ ದಾಸ್ತಾನು ಸಂಗ್ರಹಾರ (ಡಿಪೋ) ಗಳು ಇವೆ. ಯಾವುದೇ ಅವಘಡ ಸಂಭವಿಸಿದಾಗ ತುರ್ತು ಚಿಕಿತ್ಸೆಗೆ ಬೇಕಾದ ಆಸ್ಪತ್ರೆ ಸೇರಿದಂತೆ ಎಲ್ಲ ರೀತಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಮಾತನಾಡಿ, ಹುಬ್ಬಳ್ಳಿ- ಧಾರವಾಡ ಭಾಗಗಳಲ್ಲಿ 1947 ರಿಂದ ಹಿಡಿದು ಇಲ್ಲಿಯ ವರೆಗೆ ಯಾವುದೇ ರೀತಿಯ ಘಟನೆಗಳು ನಡೆದಿಲ್ಲ. ಆದರೆ, ಮುಂದೆ ಸಂಭವಿಸಿದರೆ ನಾವು ಯಾವ ರೀತಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದವರು ಸೂಚನೆ ನೀಡಿದ್ದರಿಂದ ಈ ಅಣಕು ಪ್ರದರ್ಶನ ಮಾಡುತ್ತಿದ್ದೇವೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ್ ಬ್ಯಾಕೋಡ ಮಾತನಾಡಿದರು. ಈ ಸಂದರ್ಭದಲ್ಲಿ ಉಪ ಪೊಲೀಸ್ ಆಯುಕ್ತ ಮಹಾನಿಂಗ ನಂದಗಾವಿ, ಎಎಸ್‌ಪಿ ನಾರಾಯಣ ಬರಮಣಿ, ಖಾರ್ಕಾನೆ ಮತ್ತು ಬೈಲರ್ ಇಲಾಖೆ ಜಂಟಿ ನಿರ್ದೇಶಕ ರವಿಂದ್ರ ರಾಠೋಡ, ಉಪನಿರ್ದೇಶಕ ವೆಂಕಟೇಶ ರಾಠೋಡ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಪಶುವೈದ್ಯಕೀಯ ಇಲಾಖೆಯ ರವಿ ಸಾಲಿಗೌಡರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ಆರೋಗ್ಯ ಅಧಿಕಾರಿ ಡಾ. ಎಸ್.ಎಂ. ಹೊನಕೇರಿ. ತಹಸೀಲ್ದಾರ್ ಡಾ. ಡಿ.ಎಚ್. ಹೂಗಾರ, ಎಚ್.ಪಿ.ಸಿ.ಎಲ್ ಪ್ಲಾಂಟ್ ಹೆಡ್ ರಾಜಕುಮಾರ, ಯುಪ್ಲೆಕ್ಸ್ ಕಂಪನಿಯ ಅರುಣ ಹೆಬ್ಲೀಕರ ಸೇರಿದಂತೆ ಹಲವರಿದ್ದರು.