ಹುಬ್ಬಳ್ಳಿ:

ಹುಬ್ಬಳ್ಳಿ-ಧಾರವಾಡದಲ್ಲಿ ಶನಿವಾರ ಬೆಳಂಬೆಳಿಗ್ಗೆಯೇ ಜೆಸಿಬಿಗಳು ಸದ್ದು ಮಾಡಿವೆ. ಬೆಳಗ್ಗೆ 6ರಿಂದಲೇ ಆಪರೇಷನ್‌ ಫುಟ್‌ಪಾತ್‌ ಕಾರ್ಯಾಚರಣೆ ನಡೆಸಲಾಗಿದೆ. ಜತೆಗೆ ಪ್ರತಿ ವಾರಕ್ಕೊಮ್ಮೆ ಅತಿಕ್ರಮ ತೆರವು ಕಾರ್ಯಾಚರಣೆ ನಡೆಸಲು ಪಾಲಿಕೆ ನಿರ್ಧರಿಸಿದೆ.

ಮಾರುಕಟ್ಟೆ ಪ್ರದೇಶ, ಪ್ರಮುಖ ರಸ್ತೆ ಅಕ್ಕ-ಪಕ್ಕ ಪಾದಚಾರಿ ಮಾರ್ಗಗಳನ್ನು ಅತಿಕ್ರಮಿಸಿಕೊಂಡಿರುವ ಡಬ್ಬಾ ಅಂಗಡಿ ತೆರವುಗೊಳಿಸಲಾಗಿದೆ. ಈ ವೇಳೆ ಕೆಲವೆಡೆ ವಿರೋಧವೂ ವ್ಯಕ್ತವಾಗಿದೆ. ಆದರೆ ಪೊಲೀಸರ ನೆರವಿನೊಂದಿಗೆ 12 ವಲಯಗಳಲ್ಲೂ ಆಪರೇಷನ್‌ ಫುಟ್‌ಪಾತ್‌ ನಡೆದಿದೆ.

ಕಳೆದ ತಿಂಗಳು ನಡೆದಿದ್ದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಫುಟ್‌ಪಾತ್‌ ಅತಿಕ್ರಮಣದಿಂದಾಗಿ ಪಾದಚಾರಿಗಳ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಇದರಿಂದ ಅಪಘಾತಗಳು ಹೆಚ್ಚಾಗುತ್ತಿವೆ. ಅತಿಕ್ರಮಣ ತೆರವುಗೊಳಿಸಬೇಕೆಂದು ಸರ್ವ ಸದಸ್ಯರು ಒತ್ತಾಯಿಸಿದ್ದರು. ಬಳಿಕ ಪುಟ್‌ಪಾತ್‌ ತೆರವಿಗೆ ಠರಾವು ಪಾಸ್‌ ಮಾಡಲಾಗಿತ್ತು.

ಅದರಂತೆ ಶನಿವಾರ ಬೆಳಗ್ಗೆ 6ರಿಂದ 12 ವಲಯಗಳಲ್ಲಿ ಫುಟ್‌ಪಾತ್‌ ಕಾರ್ಯಾಚರಣೆ ನಡೆಸಲಾಯಿತು. ಕೊಪ್ಪಿಕರ್ ರಸ್ತೆ, ಗೋಕುಲ ರಸ್ತೆ, ಬ್ರಾಡವೇ, ಮರಾಠಗಲ್ಲಿ, ದುರ್ಗದ ಬೈಲ್, ಶಹಾ ಬಜಾರ, ಸಿಬಿಟಿ, ನವನಗರ, ಧಾರವಾಡ, ಸತ್ತೂರ ಸೇರಿದಂತೆ 12 ವಲಯ ಕಚೇರಿ ವ್ಯಾಪ್ತಿಗಳಲ್ಲೂ ಪಾದಚಾರಿ ಮಾರ್ಗದಲ್ಲಿ ಒತ್ತುವರಿ ತೆರವುಗೊಳಿಸಲಾಗಿದೆ.


ವಿರೋಧ:ಏಕಾಏಕಿ ಬಂದು ಅಂಗಡಿ ತೆರವುಗೊಳಿಸಿದರೆ ಹೇಗೆ. ಇದರಿಂದಲೇ ನಾವು ಜೀವನ ಕಟ್ಟಿಕೊಂಡಿದ್ದೇವೆ ಎಂದು ಕೆಲವೆಡೆ ವಿರೋಧ ವ್ಯಕ್ತವಾಗಿದೆ. ಆದರೆ, ಪಾಲಿಕೆ ಸಿಬ್ಬಂದಿ ಮಾತ್ರ ಪೊಲೀಸರ ನೆರವಿನೊಂದಿಗೆ ಯಶಸ್ವಿ ಕಾರ್ಯಾಚರಣೆ ನಡೆಸಿ ಫುಟ್‌ಪಾತ್‌ ಅತಿಕ್ರಮಣ ತೆರವುಗೊಳಿಸಿದ್ದಾರೆ. ಪಾದಚಾರಿ ಮಾರ್ಗದಲ್ಲಿದ್ದ ಬಟ್ಟೆ, ಅಲಂಕಾರಿಕ ವಸ್ತು, ಚಪ್ಪಲಿ ಹಾಗೂ ಇನ್ನಿತರ ವಸ್ತುಗಳ ಮಾರಾಟಕ್ಕೆ ಇಟ್ಟಿದ್ದ ಗೂಡಂಗಡಿ ತೆರವು ಮಾಡಲಾಗಿದೆ. ಯುರೇಕಾ ಟವರ್ ಎದುರಿನ ಪಾದಚಾರಿ ಮಾರ್ಗದಲ್ಲಿ ವ್ಯಾಪಾರಿಯೊಬ್ಬರು ಸಿಮೆಂಟ್, ಸರಳು ಬಳಸಿ ನಿರ್ಮಿಸಿಕೊಂಡಿದ್ದ ಅಕ್ರಮ ಅಂಗಡಿಯನ್ನು ಸಹ ಅಧಿಕಾರಿಗಳು ತೆರವುಗೊಳಿಸಿದರು.

ಗೋಕುಲ ರಸ್ತೆಯ ಬನ್ನಿಗಿಡ ಸ್ಟಾಪ್‌ನಿಂದ ಅಕ್ಷಯ ಪಾರ್ಕ್ ವೃತ್ತದ ವರೆಗೂ ಕಾರ್ಯಾಚರಣೆ ನಡೆಸಿ, ಎಳನೀರು, ಐಸ್‌ಕ್ರೀಮ್, ತಂಪು ಪಾನೀಯ, ಚಾಟ್ ಮಸಾಲ ಮತ್ತು ಬೇಲ್ ಪುರಿ, ಪಾನಿ ಪುರಿ ಅಂಗಡಿ ತೆರವು ಮಾಡಲಾಯಿತು. ಪಾಲಿಕೆ ವ್ಯಾಪ್ತಿಯಲ್ಲಿ ಮೊದಲ ದಿನ 263ಕ್ಕೂ ಹೆಚ್ಚು ಡಬ್ಬಾ ಅಂಗಡಿ, ಕೆಲ ಅಕ್ರಮ ಮಳಿಗೆ ತೆರವು ಮಾಡಲಾಗಿದೆ.

ಬರೀ ಒಂದೇ ದಿನಕ್ಕೆ ಸೀಮಿತವಾಗದೇ ಪ್ರತಿ ಓಣಿ, ಗಲ್ಲಿ, ಪ್ರಮುಖ ರಸ್ತೆಗಳಲ್ಲಿರುವ ಅತಿಕ್ರಮಣ ತೆರವುಗೊಳಿಸಬೇಕು. ಜತೆಗೆ ಕೆಲ ದೊಡ್ಡ ಕುಳಗಳು ಸಹ ದೊಡ್ಡ ಬಿಲ್ಡಿಂಗ್‌ಗಳನ್ನು ಅತಿಕ್ರಮಿಸಿ ನಿರ್ಮಿಸಿಕೊಂಡಿದ್ದಾರೆ. ಅವುಗಳನ್ನು ತೆರವುಗೊಳಿಸಬೇಕು ಎಂಬುದು ಸಾರ್ವಜನಿಕರ ಒಕ್ಕೊರಲಿನ ಆಗ್ರಹ.

ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದುದರಿಂದ ಸಂಚಾರ ದಟ್ಟಣೆ ಜತೆಗೆ, ಪಾದಚಾರಿಗಳು ಸಂಚರಿಸಲು ಕಷ್ಟವಾಗುತ್ತಿತ್ತು. ಈ ಹಿನ್ನೆಲೆ ಆಪರೇಷನ್ ಪುಟ್‌ಪಾತ್ ಕಾರ್ಯಾಚರಣೆಯಡಿ ಏಕಕಾಲಕ್ಕೆ 12 ವಲಯ ಕಚೇರಿಯಲ್ಲಿ ತೆರವು ಕಾರ್ಯಾಚರಣೆ ಮಾಡಲಾಗಿದೆ. ಪೊಲೀಸ್ ಸಿಬ್ಬಂದಿ ಸಹಕಾರದಿಂದ 263ಕ್ಕೂ ಹೆಚ್ಚು ಡಬ್ಬಾ ಅಂಗಡಿ ತೆರವು ಮಾಡಿ, ಪಾದಚಾರಿ ಮಾರ್ಗ ಮುಕ್ತಗೊಳಿಸಲಾಗಿದೆ ಎಂದು ಹೇಳಿದರು. ಆಪರೇಷನ್ ಪುಟ್‌ಪಾತ್ ಅಡಿ ಮುಂದಿನ ನಾಲ್ಕು ತಿಂಗಳು ಪ್ರತಿ ವಾರ ತೆರವು ಕಾರ್ಯಾಚರಣೆ ಮಾಡಲಾಗುವುದು.

ಡಾ. ರುದ್ರೇಶ ಘಾಳಿ ಆಯುಕ್ತ ಹು-ಧಾ ಮಹಾನಗರ ಪಾಲಿಕೆ