ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ಬೊಂಬೆನಾಡಿನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಸುರೇಶ್ ಅಪರೇಷನ್ ಹಸ್ತ ಕಾರ್ಯಾಚರಣೆ ತೀವ್ರಗೊಳಿಸಿದ ಬೆನ್ನಲ್ಲೇ ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಚುನಾವಣಾ ಕಣಕ್ಕೆ ಇಳಿದಿದ್ದು, ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಸಮ್ಮಿಲನ ಸಭೆಗಳನ್ನು ನಡೆಸುವ ಜತೆಗೆ ಕಾರ್ಯಕರ್ತರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ನಡೆಸಿದ್ದಾರೆ.ಶನಿವಾರದಿಂದ ಚುನಾವಣಾ ಅಖಾಡಕ್ಕೆ ಇಳಿದಿರುವ ಸಿ.ಪಿ.ಯೋಗೇಶ್ವರ್, ವಿವಿಧ ಗ್ರಾಮಗಳಿಗೆ ತೆರಳಿ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರನ್ನು ಒಂದುಗೂಡಿಸುವ ನಿಟ್ಟಿನಲ್ಲಿ ಸಮ್ಮಿಲನ ಸಭೆಗಳನ್ನು ನಡೆಸುವ ಜತೆಗೆ ಕಾರ್ಯಕರ್ತರನ್ನು ಒಗ್ಗೂಡಿಸುವ ಕೆಲಸ ಆರಂಭಿಸಿದ್ದಾರೆ.
ಶನಿವಾರ ಬೇವೂರು ಜಿಪಂ ವ್ಯಾಪ್ತಿಯಲ್ಲಿ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ್ದ ಯೋಗೇಶ್ವರ್, ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರನ್ನು ಭೇಟಿ ಮಾಡಿ ಹೊಂದಾಣಿಕೆ ಮಾಡುವ ಪ್ರಯತ್ನ ನಡೆಸಿದ್ದರು. ಭಾನುವಾರ ತಾಲೂಕಿನ ವಿರುಪಾಕ್ಷಿಪುರ, ಮಂಗಾಡಹಳ್ಳಿ, ಕೋಡಂಬಳ್ಳಿ, ಹುಣಸನಹಳ್ಳಿ, ಶ್ಯಾನಬೋಗನಹಳ್ಳಿ, ಬಲ್ಲಾಪಟ್ಟಣ ಗ್ರಾಮಗಳಲ್ಲಿ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಸಮ್ಮಿಲನ ಸಭೆಗಳನ್ನು ನಡೆಸಿದ್ದಾರೆ.ಇದೇ ವೇಳೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಡಾ.ಮಂಜುನಾಥ್ ಅವರ ಪರ ಮತಯಾಚನೆ ಸಹ ನಡೆಸಿದ್ದಾರೆ. ಎರಡೂ ಪಕ್ಷಗಳ ಮುಖಂಡರು ತಮ್ಮ ಮಧ್ಯದಲ್ಲಿನ ಭಿನ್ನಾಭಿಪ್ರಾಯ ಮರೆತು ಈ ಬಾರಿಯ ಚುನಾವಣೆಯಲ್ಲಿ ಮಂಜುನಾಥ್ ಅವರನ್ನು ಗೆಲ್ಲಿಸುವಂತೆ ಮನವಿ ಮಾಡುತ್ತಿದ್ದಾರೆ.
ಚನ್ನಪಟ್ಟಣ ಟಾರ್ಗೆಟ್ ಮಾಡಿದ ಡಿಕೆಸು:ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚನ್ನಪಟ್ಟಣ ಕ್ಷೇತ್ರವನ್ನು ಗಂಭೀರವಾಗಿ ಪರಿಗಣಿಸಿರುವ ಸಂಸದ ಡಿ.ಕೆ.ಸುರೇಶ್ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಆಪರೇಷನ್ ಹಸ್ತ ಚುರುಕುಗೊಳಿಸಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿ ಹಿನ್ನೆಲೆಯಲ್ಲಿ ಚನ್ನಪಟ್ಟಣದಲ್ಲಿ ಮತ ಹೆಚ್ಚಳಕ್ಕೆ ಬೇರೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಸೆಳೆಯುವ ಜತೆಗೆ ಪಕ್ಷ ಸಂಘಟನೆ ಚುರುಕುಗೊಳಿಸಿದ್ದಾರೆ.
ಮೂರು ದಿನಗಳ ಹಿಂದೆಯಷ್ಟೇ ಜೆಡಿಎಸ್‌ನ ೯ ನಗರಸಭೆ ಸದಸ್ಯರು ಹಾಗೂ ಒಬ್ಬರು ಪಕ್ಷೇತರ ಸದಸ್ಯೆಯನ್ನು ಆಪರೇಷನ್ ಹಸ್ತದ ಮೂಲ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಇದಲ್ಲದೇ ಸಂಸದ ಡಿ.ಕೆ.ಸುರೇಶ್ ಚನ್ನಪಟ್ಟಣದಲ್ಲಿ ಆಪರೇಷನ್ ಹಸ್ತ ತೀವ್ರಗೊಳಿಸಿದ್ದು, ವಿವಿಧ ಗ್ರಾಮಗಳಿಂದ ಈಗಾಗಲೇ ಸಾಕಷ್ಟು ಸಂಖ್ಯೆಯಲ್ಲಿ ಬೇರೆ ಪಕ್ಷಗಳ ಕಾರ್ಯಕರ್ತರು ಹಾಗೂ ಮುಖಂಡರನ್ನು ಕಾಂಗ್ರೆಸ್‌ಗೆ ಸೆಳೆಯುವ ಕಾರ್ಯತಂತ್ರ ನಡೆಸಿದ್ದಾರೆ ಎನ್ನಲಾಗಿದೆ.ಇದಿಷ್ಟೇ ಅಲ್ಲದೇ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಪ್ರತಿನಿತ್ಯ ಬಿಜೆಪಿ-ಜೆಡಿಎಸ್ ಕಾರ್ಯಕರ್ತರನ್ನು ಸೆಳೆಯುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದು, ಇನ್ನಷ್ಟು ಕಾರ್ಯಕರ್ತರನ್ನು ಕಾಂಗ್ರೆಸ್ ತೆಕ್ಕೆಗೆ ಸೆಳೆಯಲು ಯತ್ನಿಸಿದ್ದಾರೆ. ಇದಕ್ಕಾಗಿಯೇ ಟೀಂಗಳನ್ನು ಮಾಡಿಕೊಂಡು ಪ್ರತಿನಿತ್ಯ ಗ್ರಾಮಗಳಿಗೆ ಭೇಟಿ ನೀಡುತ್ತಿದ್ದು, ಬಿಜೆಪಿ-ಜೆಡಿಎಸ್ ಕಾರ್ಯಕರ್ತರಿಗೆ ಗಾಳ ಹಾಕುವ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕರ್ತರನ್ನು ಸೇರ್ಪಡೆ ಮಾಡಿಕೊಳ್ಳಲು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ.
ಅಲರ್ಟ್ ಆದ ಸೈನಿಕ:ಕ್ಷೇತ್ರದಲ್ಲಿ ಕಾಂಗ್ರೆಸ್ ಆಪರೇಷನ್ ತೀವ್ರಗೊಳ್ಳುತ್ತಿದ್ದಂತೆಯೇ ಸೈನಿಕ ಯೋಗೇಶ್ವರ್ ಅಲರ್ಟ್ ಆಗಿದ್ದಾರೆ. ಜೆಡಿಎಸ್ ಹಾಗೂ ಬಿಜೆಪಿ ಮುಖಂಡರೊಡನೆ ವಿವಿಧ ಗ್ರಾಮಗಳಿಗೆ ಭೇಟಿ ನೀಡುತ್ತಿದ್ದು, ಕಾರ್ಯಕರ್ತರೊಡನೆ ಸಮ್ಮಿಲನ ಸಭೆ ಹೆಸರಿನಲ್ಲಿ ಸಮಾಲೋಚನೆ ನಡೆಸುತ್ತಿದ್ದಾರೆ. ಎರಡೂ ಪಕ್ಷಗಳ ಕಾರ್ಯಕರ್ತರು ಕಾಂಗ್ರೆಸ್‌ನತ್ತ ಚದುರದಂತೆ ಎಚ್ಚರಿಕೆ ವಹಿಸುತ್ತಿರುವ ಅವರು, ಕಾರ್ಯಕರ್ತರಲ್ಲಿ ಒಮ್ಮತ ಮೂಡಿಸುವ ಜತೆಗೆ ಅವರನ್ನು ಹಿಡಿದಿಟ್ಟುಕೊಳ್ಳುವ ಯತ್ನ ನಡೆಸಿದ್ದಾರೆ.
ಹುರುಪು ತುಂಬುತ್ತಿರುವ ಸಿಪಿವೈ:ತಮ್ಮ ಭೇಟಿಯ ವೇಳೆ ಕಾರ್ಯಕರ್ತರೊಡನೆ ಮುಕ್ತವಾಗಿ ಮಾತನಾಡುತ್ತಿರುವ ಯೋಗೇಶ್ವರ್, ಕಾರ್ಯಕರ್ತರಲ್ಲಿ ಹುರುಪು ತುಂಬುವ ಕೆಲಸ ಮಾಡುತ್ತಿದ್ದಾರೆ. ಜೆಡಿಎಸ್-ಬಿಜೆಪಿ ಮೈತ್ರಿ ಹಿನ್ನೆಲೆ, ಅದರ ಅನಿವಾರ್ಯತೆಗಳ ಕುರಿತು ಕಾರ್ಯಕರ್ತರಿಗೆ ಅರಿವು ಮೂಡಿಸುತ್ತಿರುವ ಅವರು, ಎಲ್ಲ ಭಿನ್ನಾಭಿಪ್ರಾಯ ಮರೆತು ಚುನಾವಣೆಯಲ್ಲಿ ಒಟ್ಟಾಗಿ ಎದುರಿಸುವಂತೆ ಮನವಿ ಮಾಡುತ್ತಿದ್ದಾರೆ.
ಅಂದು ಸ್ವಾಭಿಮಾನಿ ನಡಿಗೆ, ಇಂದು ಸಮ್ಮಿಲನ ಸಭೆ!:ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆ ವೇಳೆ ಕ್ಷೇತ್ರದಲ್ಲಿ ಯೋಗೇಶ್ವರ್ ಸ್ವಾಭಿಮಾನ ಸಂಕಲ್ಪ ನಡಿಗೆ ಮೂಲಕ ಕ್ಷೇತ್ರದ ಬಹುತೇಕ ಎಲ್ಲ ಗ್ರಾಮಗಳಿಗೆ ಭೇಟಿ ನೀಡಿದ್ದರು. ಈ ಬಾರಿ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಸಮ್ಮಿಲನ ಸಭೆ ನಡೆಸಲು ಗ್ರಾಮಗಳಿಗೆ ಭೇಟಿ ನೀಡುತ್ತಿದ್ದಾರೆ.
ಕಳೆದ ವರ್ಷ ಸ್ವಾಭಿಮಾನ ಸಂಕಲ್ಪ ನಡಿಗೆ ವೇಳೆ ಮತಯಾಚನೆ ನಡೆಸುವ ಜತೆಗೆ ಅನ್ಯಪಕ್ಷಗಳ ಮುಖಂಡರನ್ನು ಸೆಳೆಯುವ ಕೆಲಸ ಮಾಡಿದ್ದರು. ಈ ಬಾರಿ ಲೋಕಸಭೆ ಚುನಾವಣೆಗೆ ಮತಯಾಚನೆ ನಡೆಸುವ ಜತೆಗೆ ಜೆಡಿಎಸ್-ಬಿಜೆಪಿ ಕಾರ್ಯಕರ್ತರಲ್ಲಿ ಸಮನ್ವಯತೆ ಮೂಡಿಸುವ ಹಾಗೂ ಕಾರ್ಯಕರ್ತರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ನಡೆಸಿದ್ದು, ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.