ಸಾರಾಂಶ
ಕನ್ನಡಪ್ರಭ ವಾರ್ತೆ ರಾಯಚೂರು
ರಾಜ್ಯದಲ್ಲಿ ಆಪರೇಶನ್ ಕಮಲ ಆನ್ ಆಗಿದ್ದು. ಆದರೆ, ಯಾವ ಶಾಸಕರು ಅದಕ್ಕೆ ಅವಕಾಶ ನೀಡಿಲ್ಲ ಅದಕ್ಕಾಗಿಯೇ ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರ ನಡೆಸಲಾಗಿದೆ ಎಂದು ಸಣ್ಣ ನೀರಾವರಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ತಿಳಿಸಿದರು.ಸ್ಥಳೀಯ ನಗರಸಭೆ ಆವರಣದಲ್ಲಿ ಬುಧವಾರ ಮಾತನಾಡಿದ ಅವರು, ರಾಜ್ಯದಲ್ಲಿ ಮತ್ತೆ ಆಪರೇಶನ್ ಕಮಲ ಬಗ್ಗೆ ಶಾಸಕ ರವಿ ಗಣಿಗ ಹೇಳಿಕೆ ನೀಡಿದ್ದು ಆ ಬಗ್ಗೆ ಅವರೇ ಹೆಚ್ಚಾಗಿ ಹೇಳಬೇಕು. ಆಪರೇಶನ ಕಮಲದ ಬಗ್ಗೆ ನಮ್ಮ ಗಮನಕ್ಕಿದ್ದು, ಯಾರನ್ನು ಸಂಪರ್ಕ ಮಾಡಿದ್ದಾರೆ ಎನ್ನುವುದು ಗೊತ್ತಿದೆ. ಆದರೆ ಯಾವ ಶಾಸಕ ಅದಕ್ಕೆ ಅವಕಾಶ ಕೊಡದ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ಅವರ ಹೆಸರಿಗೆ ಮಸಿ ಬಳೆದು ಖುರ್ಚಿಯಿಂದ ಕೆಳಗಿಳಿಸುವ ಯತ್ನಿಸುತ್ತಿದ್ದಾರೆ ಎಂದರು.
ಕೇಂದ್ರ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೆಚ್ಚಾಗಿ ಸಿರಿಯಸ್ ಆಗಿ ತೆಗೆದುಕೊಳ್ಳಬೇಕಾಗಿಲ್ಲ, ಅವರೊಬ್ಬ ಹಿಟ್ ಆಂಡ್ ರನ್ ಕೇಸಾಗಿದ್ದಾರೆ. ಹತ್ತಾರು ಸುಳ್ಳುಗಳನ್ನ ಹೇಳುತ್ತಾರೆ, ಕೇಂದ್ರಮಂತ್ರಿಯಾಗಿದ್ದರು ಆ ಸ್ಥಾನಕ್ಕೆ ತಕ್ಕಂತೆ ಗೌರವದಿಂದ ನಡೆದುಕೊಳ್ಳಬೇಕು. ತಂದೆ-ಮಗ ದ್ವೇಷದ ರಾಜಕೀಯ ಮಾಡುತ್ತಾರೆ. ಆರು ತಿಂಗಳಲ್ಲಿ ರಾಜ್ಯ ಸರ್ಕಾರವನ್ನು ಕೆಡುವುದಾಗಿ ಮೋದಿ, ಅಮೀತ್ ಶಾ ಅವರಿಗೆ ಆಶ್ವಾಸನ ಕೊಟ್ಟಿದ್ದು ಅದಕ್ಕಾಗಿ ಸರ್ಕಾರವನ್ನು ತೆಗೆಯುವ ಪ್ರಯತ್ನದಡಿಯಲ್ಲಿ ಶಾಸಕರ ಖರೀದಿಗೆ ಯತ್ನಿಸಿದ್ದು ಅವೆಲ್ಲಾ ಫಲ ನೀಡದಕ್ಕೆ ಸಿಎಂ ಸಿದ್ದರಾಮಯ್ಯ ಅವರಿಗೆ ಮಸಿ ಬಳೆಯುತ್ತಿದ್ದಾರೆ. ಅವರು ಎಷ್ಟೇ ಕುತಂತ್ರ ನಡೆಸಿದರು ಎಲ್ಲ ಸಚಿವರು, ಶಾಸಕರು ಸಿಎಂ ಪರವಾಗಿದ್ದೇವೆ ಎಂದು ಹೇಳಿದರು.ನಟ ದರ್ಶನ ಅವರಿಗೆ ಜೈಲಿನಲ್ಲಿ ಸವಲತ್ತು ಕಲ್ಪಿಸಿದ ಪ್ರಕರಣ ಬೆಳಕಿಗೆ ಬಂದ ತಕ್ಷಣ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಕಾನೂನಿನ ಮುಂದೆ ದರ್ಶನ ಆದರೂ ಅಷ್ಟೇ ಬೇರೆ ಆದರೂ ಅಷ್ಟೇ ಕೈದಿಗಳು ಕೈದಿಗಳೇ ಎಂದ ಅವರು ಬಳ್ಳಾರಿ ಜೈಲ್‌ಗೆ ದರ್ಶನ್‌ರನ್ನು ವರ್ಗಾವಣೆಗೆ ಸಂಬಂಧಿಸಿದಂತೆ ಅಲ್ಲಿನ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಅವರ ಪ್ರಭಾವ ಇರುವುದಾಗಿ ಕೇಳಿಬಂದಿರುವ ಆರೋಪವನ್ನು ತಳ್ಳಿಹಾಕಿ ಪೊಲೀಸ್ ಇಲಾಖೆ ವರದಿಯನ್ನಾಧರಿಸಿ ಅಲ್ಲಿಗೆ ವರ್ಗಾಹಿಸಿದ್ದು, ಇದರಲ್ಲಿ ಯಾವುದೇ ರೀತಿಯ ರಾಜಕೀಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಖರ್ಗೆ ಕುಟುಂಬದ ಸಿದ್ಧಾರ್ಥ ಸಂಸ್ಥೆಗೆ ಜಮೀನು ಮಂಜೂರು ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು ಖರ್ಗೆ ಅವರು ಆಸ್ತಿ ಮಾಡಬೇಕಾಗಿದ್ದರೆ ಐದು ದಶಕಗಳಲ್ಲಿ ಏನಾದರು ಮಾಡಬಹುದಿತ್ತು. ಕಾನೂನಿನಲ್ಲಿ ಅವಕಾಶವಿರುವ ಕಾರಣಕ್ಕೆ ಜಮೀನು ನೀಡಿದ್ದು, ಕಾಂಗ್ರೆಸ್ ಮುಖಂಡರಿಗೆ ಮಸಿ ಬಳೆಯಲು ಇಂತಹ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದ್ದು, ಈ ಕುರಿತು ಇಲಾಖೆ ಸಚಿವರು ಈಗಾಗಲೇ ಸ್ಪಷ್ಟೀಕರಣ ನೀಡಿದ್ದಾರೆ ಎಂದರು.