ಆಪರೇಷನ್ ಕಮಲ ಎನ್ನುವುದು ಬಿಜೆಪಿಯ ಹಿಡನ್ ಅಜೆಂಡಾ. ಅವರ ಬುದ್ಧಿಯೇ ಅದು ಎಂದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ವಾಗ್ದಾಳಿ ನಡೆಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಡಿಕೇರಿ ಆಪರೇಷನ್ ಕಮಲ ಎನ್ನುವುದು ಬಿಜೆಪಿಯ ಹಿಡನ್ ಅಜೆಂಡಾ. ಅವರ ಬುದ್ಧಿಯೇ ಅದು ಎಂದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಬೇರೆ ಪಕ್ಷಗಳಿಂದ ಅಧಿಕಾರ ನಡೆಯುತ್ತಿರುವುದನ್ನು ಬೀಳಿಸಿ ಬಿಜೆಪಿ ಸರ್ಕಾರ ರಚನೆ ಮಾಡಿದ ನಿದರ್ಶನ ನಮ್ಮ ಮುಂದಿದೆ. ಅವರು ನಮ್ಮ ಶಾಸಕರನ್ನು ಮಾತನಾಡಿಸಿರುವುದು ಸತ್ಯ. ಅದಕ್ಕೆ ಮಂಡ್ಯ ಎಂಎಲ್ಎ ರವಿಕುಮಾರ್ ಗಣಿಗ ಅವರ ಬಳಿ ದಾಖಲೆ ಇವೆ. ಅದನ್ನು ಸಿಎಂ ಅವರಿಗೆ ಕೊಡಲಾಗುತ್ತದೆ. ಇದನ್ನು ತನಿಖೆ ಮಾಡಿಸಲಾಗುವುದು ಎಂದರು. ರಾಜ್ಯದಲ್ಲಿ ಜನರು ಕಾಂಗ್ರೆಸ್ ಪಕ್ಷಕ್ಕೆ 136 ಸೀಟು ಕೊಟ್ಟಿದ್ದಾರೆ. ಬಿಜೆಪಿ- ಜೆಡಿಎಸ್ ನವರು ಬಾಯಿ ಮುಚ್ಚಿಕೊಂಡು ಸುಮ್ಮನಿರಬೇಕು. ನಮ್ಮ ಸರ್ಕಾರದ ಜನಪ್ರಿಯತೆಯನ್ನು ಬಿಜೆಪಿ ಜೆಡಿಎಸ್‌ಗೆ ತಡೆದುಕೊಳ್ಳಲು ಆಗುತ್ತಿಲ್ಲ. ಹೀಗೆ ಆದರೆ ರಾಜ್ಯದಲ್ಲಿ 25 ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಹೀಗಾಗಿ ಜನರನ್ನು ದಿಕ್ಕುತಪ್ಪಿಸುವುದಕ್ಕಾಗಿ ಹೀಗೆಲ್ಲಾ ಮಾಡುತ್ತಿದ್ದಾರೆ ಎಂದು ಲಕ್ಷ್ಮಣ್ ಹೇಳಿದರು. ಮುಖ್ಯಮಂತ್ರಿ ಬದಲಾಗುತ್ತಾರೆ ಎಂಬ ಶಾಸಕ ರವಿಕುಮಾರ್ ಗಣಿಗ ಹೇಳಿಕೆಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ವಕ್ತಾರ ಲಕ್ಷ್ಮಣ್, ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಎನ್ನುವುದು ಇದೆ. ಡೆಮಾಕ್ರಸಿಯ ಆಧಾರದಲ್ಲಿ ಯಾರು ಎಷ್ಟುದಿನ ಮುಖ್ಯಮಂತ್ರಿ ಆಗಿರಬೇಕು. ಯಾರು ಮಂತ್ರಿ ಆಗಿರಬೇಕು. ಯಾರು ಆಗಿರಬಾರದು ಯಾರಿಗೆ ಅವಕಾಶ ಕೊಡಬೇಕು ಎನ್ನುವ ವ್ಯವಸ್ಥೆ ಇದ್ದರೆ ಅದು ಕಾಂಗ್ರೆಸ್‌ನಲ್ಲಿ ಮಾತ್ರ. ಅದನ್ನೆಲ್ಲ ಹೈಕಮಾಂಡ್ ನಿರ್ಧರಿಸುತ್ತದೆ. ಎಲ್ಲೂ ಲಿಖಿತ ಒಪ್ಪಂದಗಳು ನಮ್ಮಲ್ಲಿ ಆಗುವುದಿಲ್ಲ. ನಮ್ಮಲ್ಲಿ ಸಿಎಂ, ಡಿಸಿಎಂ ಯಾರಾಗಬೇಕು ಎನ್ನುವುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಹಾಗಾಗಿ ಪಕ್ಷದ ವಕ್ತಾರನಾಗಿ ನನ್ನ ಹತ್ತಿರ ಏನಿಲ್ಲ ಎಂದು ಹೇಳಿದರು. ಎಚ್‌ಡಿಕೆ ಆರೋಪ ಆಧಾರ ರಹಿತ: ಕಮಿಷನ್‌ಗಾಗಿ ಸುಳ್ಳು ವಿದ್ಯುತ್ ಅಭಾವ ಸೃಷ್ಟಿಸುತ್ತಿದ್ದಾರೆ ಎನ್ನುವ ಕುಮಾರಸ್ವಾಮಿಗೆ ನಾಚಿಕೆ ಆಗಬೇಕು. ಅವರು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದವರು. ಆಧಾರ ರಹಿತವಾಗಿ ಸುಮ್ಮನೆ ಆರೋಪ ಮಾಡುತ್ತಾರೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯದಲ್ಲಿ ವಿದ್ಯುತ್ ಕೊರತೆ ಆಗಿದೆ. ಆದ್ದರಿಂದ ಸೆಂಟ್ರಲ್ ಪವರ್ ಗ್ರಿಡ್ ಮೂಲಕ 1 ಸಾವಿರ ಮೆಗಾವ್ಯಾಟ್ ವಿದ್ಯುತ್ ಖರೀದಿಸುತ್ತಿದ್ದೇವೆ. ಸೆಂಟ್ರಲ್ ಪವರ್ ಗ್ರಿಡ್‌ನವರು ನಮಗೆ ಕಮಿಷನ್ ಕೊಡುತ್ತಾರಾ? ಮಾನ ಮರ್ಯಾದೆ ಏನು ಇಲ್ವಾ ನಿಮಗೆ ಮಾತನಾಡುವುದಕ್ಕೆ. ಕುಮಾರಸ್ವಾಮಿ ಅದನ್ನು ಸ್ಪಷ್ಟಪಡಿಸಬೇಕು. ಕುಮಾರಸ್ವಾಮಿ ಬಿಜೆಪಿಯಿಂದ ಸುಪಾರಿ ತೆಗೆದುಕೊಂಡಿದ್ದಾರೆ. ಹೀಗಾಗಿ ನಿರಂತರವಾಗಿ ಸಿದ್ದರಾಮಯ್ಯ ಮತ್ತು ಡಿಕೆಶಿ ಅವರ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಲಕ್ಷ್ಮಣ್ ಏಕ ವಚನದಲ್ಲೇ ತರಾಟೆಗೆ ತೆಗೆದುಕೊಂಡರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.