ಸಾರಾಂಶ
ಹುಬ್ಬಳ್ಳಿ:
ಆಪರೇಶನ್ ಸಿಂದೂರ ಹಿನ್ನೆಲೆಯಲ್ಲಿ ನಗರದ ಚೆನ್ನಮ್ಮ ವೃತ್ತದಲ್ಲಿ ಶ್ರೀರಾಮಸೇನೆ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು. ಸಂಗೊಳ್ಳಿ ರಾಯಣ್ಣ ವೃತ್ತದಿಂದ ಚೆನ್ನಮ್ಮ ವೃತ್ತದ ವರೆಗೆ ತ್ರಿವರ್ಣ ಧ್ವಜ, ವಿವಿಧ ಬ್ಯಾನರ್ ಹಿಡಿದು, ಕೇಂದ್ರ ಸರ್ಕಾರ ಮತ್ತು ಸೈನಿಕರ ಪರವಾಗಿ ಘೋಷಣೆ ಕೂಗಿದರು. ಮೂವರು ಮಾಜಿ ಸೈನಿಕರಿಗೆ ಸಿಂದೂರ ಹಚ್ಚುವ ಮೂಲಕ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಖುಷಿ ವ್ಯಕ್ತಪಡಿಸಿದರು.ಈ ವೇಳೆ ಮಾತನಾಡಿದ ಮುತಾಲಿಕ್, ನರೇಂದ್ರ ಮೋದಿ ನೇತೃತ್ವದಲ್ಲಿ ಆಪರೇಶನ್ ಸಿಂದೂರ ಮೂಲಕ ಯುದ್ಧ ಪ್ರಾರಂಭ ಮಾಡಿದ್ದಾರೆ. ರಾತ್ರಿ ವೇಳೆ ಪಾಕಿಸ್ತಾನ ಜನ, ಸೈನಿಕರು ಮಲಗಿದ ವೇಳೆ ಸೈನ್ಯ ಸರಿಯಾಗಿ ಉತ್ತರ ಕೊಟ್ಟಿದೆ. ಇತ್ತೀಚಿಗೆ 26 ಮಹಿಳೆಯರ ಸಿಂಧೂರ ಅಳಿಸಿದ್ದರು. ಅದಕ್ಕಿಂತ ಮೊದಲು ಅಂದರೆ ಕಳೆದ 3-4 ದಶಕಗಳಿಂದ ಲಕ್ಷಾಂತರ ಮಹಿಳೆಯರು ಸಿಂದೂರ ಅಳಿಸಿದ್ದಾರೆ. ಇವರೆಲ್ಲರ ಪ್ರತಿಕಾರವೆಂಬಂತೆ ಪ್ರಧಾನಿ ಮೋದಿ ಅವರು ಆಪರೇಷನ್ ಸಿಂದೂರ್ ಮೂಲಕ ಉತ್ತರ ನೀಡಿದ್ದಾರೆ. ಇಷ್ಟಕ್ಕೆ ನಿಲ್ಲಿಸದೇ ಐಎಸ್ಐ, ಪಾಕಿಸ್ತಾನದ ಸೈನಿಕರ ಕೇಂದ್ರ ಮತ್ತು ಆಯುಧ ಹೊಂದಿದ ಕೇಂದ್ರಗಳನ್ನು ಧ್ವಂಸಗೊಳಿಸಲು ಆಗ್ರಹಿಸಿದರು.
ಸಂಭ್ರಮಾಚರಣೆಯಲ್ಲಿ ನಿವೃತ್ತ ಯೋಧರಾದ ಅಣ್ಣಪ್ಪ ದಿವಟಗಿ, ಮಂಜು ಕಾಟಕರ್, ಬಸು ದುರ್ಗದ, ಬಸು ಗೌಡರ, ಮಾಂತೇಶ ತೊಂಗಳಿ, ಪ್ರವೀಣ ಮಾಳಾದಕರ, ವೀರಯ್ಯ ಸಾಲಿಮಠ, ವಿಜಯ ದೇವರಮನಿ, ನಾಗರಾಜ ಹುರಕಡ್ಲಿ ಸೇರಿದಂತೆ ಅನೇಕರಿದ್ದರು.ಕಾಂಗ್ರೆಸ್ಸಿನವರ ಬಟ್ಟೆ ಮೇಲೆ ಹಿಂದೂಗಳ ರಕ್ತದ ಕಲೆ ಇದೆ: ಮುತಾಲಿಕ್
ಹುಬ್ಬಳ್ಳಿ: ಭಯೋತ್ಪಾದನೆ ಹುಟ್ಟು ಹಾಕಿದ್ದೇ ಕಾಂಗ್ರೆಸ್ಸಿನವರು. ನಮ್ಮ ದೇಶದ ನಾಗರಿಕರು, ಸೈನಿಕರನ್ನು ಕೊಂದಹಾಕಿದವರೇ ನೀವು. ಕಾಂಗ್ರೆಸ್ಸಿನವರ ಬಟ್ಟೆ ಮೇಲೆ ಹಿಂದೂಗಳ ರಕ್ತದ ಕಲೆ ಇದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದರು.ಕಾಶ್ಮೀರದ ಪಹಲ್ಗಾಂನಲ್ಲಿ ಹಿಂದೂ ಪ್ರವಾಸಿಗರ ಕೊಲೆ ಮಾಡಿರುವುದಕ್ಕೆ ಪ್ರತಿಯಾಗಿ ಭಾರತ ನಡೆಸಿದ ಆಪ್‌ರೇಷನ್ ಸಿಂದೂರ್ ಹಿನ್ನೆಲೆಯಲ್ಲಿ ಶ್ರೀರಾಮಸೇನೆ ಸಂಘಟನೆ ಹುಬ್ಬಳ್ಳಿಯ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ನಡೆಸಿದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಮೋದಿ ಅವರು ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆಗೆ ಹೊಡೆಸಿಕೊಳ್ಳುವ ಮಾನಸಿಕತೆ ಹೊಂದಿಲ್ಲ. ಹೊಡೆಯುವುಕ್ಕಿಂತ ಮೊದಲೇ ಉತ್ತರ ಕೊಡುತ್ತಾರೆ. ಗಾಂಧಿವಾದದಿಂದಲೇ ನಾವು ಲಕ್ಷಾಂತರ ಜನರನ್ನು ಕಳೆದುಕೊಂಡಿದ್ದೇವೆ. ಈ ಸಮಯದಲ್ಲಿ ಗಾಂಧೀಜಿಯಲ್ಲ, ಸುಭಾಶ್ಚಂದ್ರ ಬೋಸ್ ಆಗಿ ಉಗ್ರರಿಗೆ ಪಾಠ ಕಲಿಸುತ್ತೇವೆ ಎಂದರು.