ಸಾರಾಂಶ
ರಾಮನಗರ : ಭಯೋತ್ಪಾದಕರು ಭಾರತೀಯರನ್ನು ಕೊಲ್ಲುವ ಮುಖಾಂತರ ಮಹಿಳೆಯರ ಸಿಂದೂರ ಅಳಿಸಿದ್ದರು.
ಸಿಂಧೂರ ಅನ್ನುವ ಹೆಸರಿನಲ್ಲೇ ಈಗ ಭಾರತ ಏರ್ ಸ್ಟ್ರೈಕ್ ಮಾಡಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಅಶ್ವತ್ಥ್ ನಾರಾಯಣಗೌಡ ಪ್ರತಿಕ್ರಿಯೆ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಯೋತ್ಪಾದಕರ ಮೇಲೆ ದಾಳಿ ಮಾಡಿ ನಮ್ಮ ಯೋಧರು ಭಯೋತ್ಪಾದಕರನ್ನು ಕೊಂದಿದ್ದಾರೆ. ಈಗ ಯುದ್ಧ ಪ್ರಾರಂಭ ಆಗಿದ್ದು, ಇದೇ ರೀತಿ ಪ್ರಧಾನಿ ನರೇಂದ್ರ ಮೋದಿ ದಿಟ್ಟ ಕ್ರಮ ತೆಗೆದುಕೊಳ್ಳಬೇಕು ಎಂದರು.
ಪಾಕಿಸ್ತಾನಕ್ಕೆ ನಮ್ಮ ಯೋಧರು ತಕ್ಕ ಪಾಠ ಕಲಿಸಿದ್ದು, ಇನ್ನು ಮುಂದೆಯೂ ದಾಳಿ ಮುಂದುವರಿಯುತ್ತದೆ. ಈ ದೇಶದ ಜನ ಕೂಡ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತಾರೆ. 26 ಜನರನ್ನು ಕೊಂದಿರುವಾಗ ಶಾಂತಿ ಹುಡುಕಲು ಸಾಧ್ಯವಿಲ್ಲ. ಶಾಂತಿ ಒಪ್ಪಂದಗಳು ಸಾಕಷ್ಟು ಸಲ ಆಗಿವೆ. ಯಾವ ಶಾಂತಿ ಒಪ್ಪಂದಗಳನ್ನೂ ನಡೆಸದೇ ಪಾಕಿಸ್ತಾನದವರು ಸಾಕಷ್ಟು ಸಲ ಮುರಿದಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಶಾಂತಿ ಪರವಾಗಿ ಲಾಹೋರ್ ಗೆ ಬಸ್ ಅನ್ನು ಬಿಟ್ಟಿದ್ದರು. ಆ ಶಾಂತಿ ಒಪ್ಪಂದವನ್ನು ಪಾಕಿಸ್ತಾನ ಮುರಿದಿದೆ. ಪಾಕಿಸ್ತಾನಕ್ಕೆ ಹಾಗೂ ಅಲ್ಲಿನ ಉಗ್ರರಿಗೆ ಏನು ಬುದ್ಧಿ ಕಲಿಸಬೇಕೋ, ಅದನ್ನು ಭಾರತೀಯ ಸೇನೆ ಕಲಿಸಿದೆ ಎಂದು ಹೇಳಿದರು.
ಯೋಧರು ಮಾಡಿರುವ ಈ ಸಾಹಸವನ್ನು ಭಾರತೀಯ ಜನತಾ ಪಾರ್ಟಿ ಆತ್ಮೀಯವಾಗಿ ಸ್ವಾಗತಿಸುತ್ತದೆ. ಆದರೆ, ಎಡಬಿಡಂಗಿ ಕಾಂಗ್ರೆಸ್ ಗೆ ಇದನ್ನು ಸ್ವಾಗತ ಮಾಡಿಕೊಳ್ಳಬೇಕೋ, ಟೀಕೆ ಮಾಡಬೇಕೋ ಎಂಬುದು ಗೊತ್ತಾಗುತ್ತಿಲ್ಲ. ಭಾರತದ ರಕ್ಷಣಾ ವಿಚಾರ ಮತ್ತು ಭಯೋತ್ಪಾದನೆ ವಿಚಾರದಲ್ಲಿ ಎಡಬಿಡಂಗಿ ತರಹ ಹೇಳಿಕೆ ಕೊಡುತ್ತಿದ್ದಾರೆ. ಕೇಂದ್ರ ಸರ್ಕಾರ ಮಾಡಿರುವ ಸಾಧನೆಯನ್ನು ಒಪ್ಪಿಕೊಳ್ಳಲು ಕಾಂಗ್ರೆಸ್ ಗೆ ಆಗುತ್ತಿಲ್ಲ ಎಂದು ಅಶ್ವತ್ಥ್ ನಾರಾಯಣಗೊಡ ಟೀಕಿಸಿದರು.