ಆಪರೇಷನ್ ಸಿಂದೂರ ಭಾರತದ ಮೈಲುಗಲ್ಲು

| Published : May 18 2025, 01:58 AM IST

ಆಪರೇಷನ್ ಸಿಂದೂರ ಭಾರತದ ಮೈಲುಗಲ್ಲು
Share this Article
  • FB
  • TW
  • Linkdin
  • Email

ಸಾರಾಂಶ

ಪಹಲ್ಗಾಂವ್‌ನಲ್ಲಿ 26 ಅಮಾಯಕ ಪ್ರವಾಸಿಗರನ್ನು ಉಗ್ರರು ಹತ್ಯೆಗೈದ ನಂತರ ಪಾಕ್ ವಿರುದ್ಧ ಭಾರತವು ಧರ್ಮಯುದ್ಧ ಮಾಡಿದ್ದು, ಆಪರೇಷನ್ ಸಿಂದೂರದ ಮೂಲಕ ಪ್ರಧಾನಿ ನರೇಂದ್ರ ಮೋದಿ ದೇಶದ ರಕ್ಷಣಾ ಇತಿಹಾಸದಲ್ಲೇ ಹೊಸ ಮೈಲುಗಲ್ಲು ಸ್ಥಾಪಿಸಿದ್ದಾರೆ ಎಂದು ರಾಷ್ಟ್ರೀಯವಾದಿ ಚಿಂತಕಿ, ಹಿರಿಯ ಚಿತ್ರನಟಿ ಮಾಳವಿಕಾ ಅವಿನಾಶ್‌ ಹೇಳಿದರು.

ಚಿತ್ರನಟಿ ಮಾಳವಿಕಾ ಅವಿನಾಶ್ ಅಭಿಮತ । ತಿರಂಗಾ ಯಾತ್ರೆ ಬಗ್ಗೆ ಸಾರ್ವಜನಿಕ ಸಭೆ । ಮಳೆಯಲ್ಲೇ ನೆರೆದ ಅಪಾರ ಜನ

ಕನ್ನಡಪ್ರಭ ವಾರ್ತೆ ದಾವಣಗೆರೆ

ಪಹಲ್ಗಾಂವ್‌ನಲ್ಲಿ 26 ಅಮಾಯಕ ಪ್ರವಾಸಿಗರನ್ನು ಉಗ್ರರು ಹತ್ಯೆಗೈದ ನಂತರ ಪಾಕ್ ವಿರುದ್ಧ ಭಾರತವು ಧರ್ಮಯುದ್ಧ ಮಾಡಿದ್ದು, ಆಪರೇಷನ್ ಸಿಂದೂರದ ಮೂಲಕ ಪ್ರಧಾನಿ ನರೇಂದ್ರ ಮೋದಿ ದೇಶದ ರಕ್ಷಣಾ ಇತಿಹಾಸದಲ್ಲೇ ಹೊಸ ಮೈಲುಗಲ್ಲು ಸ್ಥಾಪಿಸಿದ್ದಾರೆ ಎಂದು ರಾಷ್ಟ್ರೀಯವಾದಿ ಚಿಂತಕಿ, ಹಿರಿಯ ಚಿತ್ರನಟಿ ಮಾಳವಿಕಾ ಅವಿನಾಶ್‌ ಹೇಳಿದರು.

ನಗರದ ಎಸ್.ನಿಜಲಿಂಗಪ್ಪ ಬಡಾವಣೆಯ ಅಮರ್ ಜವಾನ್ ಉದ್ಯಾನದಲ್ಲಿ ಶನಿವಾರ ಸಂಜೆ ಆಪರೇಷನ್ ಸಿಂದೂರ ಹಿನ್ನೆಲೆಯಲ್ಲಿ ಭಾರತ ಸೇನೆಯೊಂದಿಗೆ ರಾಷ್ಟ್ರರಕ್ಷಣೆಗಾಗಿ ದಾವಣಗೆರೆ ಜನತೆ ಹಮ್ಮಿಕೊಂಡಿದ್ದ ತಿರಂಗಾ ಯಾತ್ರೆಯ ಬೃಹತ್ ಸಾರ್ವಜನಿಕ ಸಭೆಯಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಮಾತನಾಡಿ, ಭಾರತದೊಂದಿಗೆ ನೇರ ಯುದ್ಧ ಮಾಡಿ, ಗೆಲ್ಲುವ ಶಕ್ತಿ ಇಲ್ಲದ ಪಾಕಿಸ್ತಾನ ಉಗ್ರರ ದುಷ್ಕೃತ್ಯ ಎಸಗುತ್ತಿದೆ ಎಂದರು.

ಪಾಕಿಸ್ತಾನ ಪ್ರೇರಿತ ಉಗ್ರರು ಹಿಂದೆಲ್ಲಾ ಭಾರತಕ್ಕೆ ಬಂದು, ದುಷ್ಕೃತ್ಯ ಎಸಗಿ ಹೋಗುತ್ತಿದ್ದರು. ಆದರೆ, ಈಗ ಪಹಲ್ಗಾಂನ ಉಗ್ರರ ದಾಳಿಗೆ ಪ್ರತೀಕಾರವಾಗಿ ಪ್ರಧಾನಿ ಮೋದಿ ಆಪರೇಷನ್ ಸಿಂದೂರ ಕೈಗೊಳ್ಳುವ ಮೂಲಕ ಪಾಕಿಸ್ತಾನ, ಉಗ್ರರಿಗೆ ತಕ್ಕ ಉತ್ತರ ನೀಡಿದ್ದಾರೆ. ಸರ್ಜಿಕಲ್‌ ಸ್ಟ್ರೈಕ್, ಏರ್‌ಸ್ಟ್ರೈಕ್‌ ಟೀಸರ್ ತೋರಿಸಿದ್ದ ಮೋದಿ ಆಪರೇಷನ್‌ ಸಿಂದೂರದ ಟ್ರೈಲರ್‌ನ್ನಷ್ಟೇ ಬಿಡುಗಡೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಒಂದು ಗುಂಡು ಹಾರಿದರೂ ಪೂರ್ತಿ ಸಿನಿಮಾ ಬಿಡುಗಡೆಯಾಗುತ್ತದೆಂಬ ಎಚ್ಚರಿಕೆಯನ್ನೂ ಪಾಕಿಸ್ತಾನಕ್ಕೆ ಮೋದಿ ರವಾನಿಸಿದ್ದಾರೆ ಎಂದು ತಿಳಿಸಿದರು.

ಮಹಾಭಾರತದಲ್ಲಿ ಕೌರವರು ದ್ರೌಪದಿಯ ಮಾನಹರಣ ಮಾಡಿದ್ದ ರೀತಿಯಲ್ಲೇ ಪಾಕಿಸ್ತಾನವು ಕಾಶ್ಮೀರವನ್ನು ಅತಿಕ್ರಮಿಸಿದೆ. ಇದೇ ಹಿನ್ನೆಲೆಯಲ್ಲಿ ಪಾಕ್ ವಿರುದ್ಧ ಭಾರತದ್ದು ಧರ್ಮಯುದ್ಧವಾಗಿದೆ. ನೇರ ಯುದ್ಧದಲ್ಲಿ ಗೆಲ್ಲುವ ಶಕ್ತಿಯೇ ಇಲ್ಲದ ಪಾಕಿಸ್ತಾನಕ್ಕೆ ತನ್ನದೇ ದೇಶದ ಬಗ್ಗೆ ಕಾಳಜಿ ಇಲ್ಲ. ಜಾತ್ಯತೀತ ಭಾರತದಲ್ಲಿ ನಾವೆಲ್ಲರನ್ನೂ ಸಮಾನವಾಗಿ ಕಾಣುತ್ತವೆ. ಆದರೆ, ಪಾಕಿಸ್ತಾನಿಯರಲ್ಲಿ ಮತೀಯ ಭಾವನೆ ತೀವ್ರವಾಗಿದೆ. ಹಾಗಾಗಿಯೇ 90ರ ದಶಕದಲ್ಲಿ ಕಾಶ್ಮೀರದಿಂದ ಅಲ್ಲಿನ ಮೂಲ ನಿವಾಸಿಗಳಾದ ಹಿಂದೂ ಪಂಡಿತರನ್ನು (ಕಾಶ್ಮೀರಿ ಪಂಡಿತ) ಬಲವಂತದಿಂದ ಹೊರ ಹಾಕಿದ್ದರು ಎಂದು ದೂರಿದರು.

ಕೆಲವರು ದೇಶದ ವಿಚಾರದಲ್ಲೇ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಪ್ರಧಾನಿಯವರು ದೇಶವನ್ನುದ್ದೇಶಿಸಿ, ಆಡಿದ ಮಾತುಗಳನ್ನು ಅರ್ಥ ಮಾಡಿಕೊಂಡರೆ ಎಲ್ಲಾ ಸಂದೇಹ ನಿವಾರಣೆಯಾಗಲಿದೆ. ಯುದ್ಧ ಮುಗಿದಿದೆ ಎಂದು ಹೇಳಿಯೇ ಇಲ್ಲ. ಮುಂದೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭಯೋತ್ಪಾದಕರ ಹುಟ್ಟಡಗಿಸಲು ಪರಿಣಾಮಕಾರಿ ಕ್ರಮಗಳನ್ನೂ ಕೈಗೊಳ್ಳಲಿದೆ ಎಂದರು.

ಇದಕ್ಕೂ ಮುನ್ನ ಶ್ರೀ ಬೀರಲಿಂಗೇಶ್ವರ ಮೈದಾನದ ಬಳಿಯಿಂದ ರಾಷ್ಟ್ರ ರಕ್ಷಣೆಗಾಗಿ ನಾಗರಿಕರು ತಿರಂಗಾ ಯಾತ್ರೆಯಲ್ಲಿ ಜೋರಾಗಿ ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೇ ಅಪಾರ ಸಂಖ್ಯೆಯಲ್ಲಿ ತ್ರಿವರ್ಣ ಧ್ವಜ ಹಿಡಿದು ಸಮಾರಂಭ ಸ್ಥಳಕ್ಕೆ ಎಲ್ಲರೂ ತಲುಪಿಸಿದರು.

ಮಾಜಿ ಸೈನಿಕರು, ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು, ಕುಟುಂಬ ವರ್ಗ, ಪಕ್ಷದ ಮುಖಂಡರಾದ ಗಾಯತ್ರಿ ಸಿದ್ದೇಶ್ವರ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಲೋಕಿಕೆರೆ ನಾಗರಾಜ, ಮಾಡಾಳ ಮಲ್ಲಿಕಾರ್ಜುನ, ಬಿ.ಜಿ.ಅಜಯಕುಮಾರ, ಪಿ.ಸಿ.ಶ್ರೀನಿವಾಸ ಭಟ್‌, ಧನಂಜಯ ಕಡ್ಲೇಬಾಳು, ಧನುಷ ರೆಡ್ಡಿ, ಗೌತಮ್ ಜೈನ್‌, ಜಿ.ಎಸ್.ಅಶ್ವಿನಿ, ಮಂಜುಳಾ ಮಹೇಶ, ಪುಷ್ಪಾ ವಾಲಿ, ಭಾಗ್ಯ ಪಿಸಾಳೆ, ಎಚ್.ಸಿ.ಜಯಮ್ಮ, ಬಿ.ಎಂ.ಸತೀಶ ಕೊಳೇನಹಳ್ಳಿ, ಐರಣಿ ಅಣ್ಣೇಶ, ಬಿ.ಆನಂದ ಕೆಟಿಜೆ ನಗರ, ಮಕ್ಕಳು, ವಿದ್ಯಾರ್ಥಿ, ಯುವಜನರು, ಇತರರು ಇದ್ದರು.