ಕೆಣಕಿದರೆ ಸುಮ್ಮನೆ ಬಿಡಲ್ಲ ಎಂಬುದಕ್ಕೆ ಆಪರೇಷನ್‌ ಸಿಂದೂರ ಸಾಕ್ಷಿ: ಡಾ. ಶಶಿಧರ ನರೇಂದ್ರ

| Published : May 14 2025, 02:01 AM IST

ಕೆಣಕಿದರೆ ಸುಮ್ಮನೆ ಬಿಡಲ್ಲ ಎಂಬುದಕ್ಕೆ ಆಪರೇಷನ್‌ ಸಿಂದೂರ ಸಾಕ್ಷಿ: ಡಾ. ಶಶಿಧರ ನರೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಸೋಫಿಯಾ ಖುರೇಷಿ, ವ್ಯೂಮಿಕಾ, ವೈಭವ ಸೂರ್ಯವಂಶಿ, ಡಿ. ಗುಕೇಶ ಅವರ ಸಾಧನೆಗೆ ಇಡೀ ವಿಶ್ವವೇ ಶ್ಲಾಘಿಸುತ್ತಿದೆ. ಮನಸ್ಸು ಮಾಡಿದರೆ ಯಾವುದೇ ಸಾಧನೆ ಅಸಾಧ್ಯವಲ್ಲ. ನಮ್ಮ ಬದುಕನ್ನು ಸುಸಂಸ್ಕೃತ ವಾತಾವರಣದಲ್ಲಿ ನಿರ್ಮಾಣ ಮಾಡಿಕೊಳ್ಳಬೇಕು. ಉತ್ತಮ ಸಂಸ್ಕಾರಗಳನ್ನು ಮೈಗೂಡಿಸಿಕೊಳ್ಳಬೇಕು. ಇಂತಹ ಸಂಸ್ಕಾರ ಕಲಿಯಲು ಯುವಜನೋತ್ಸವ ಸಹಾಯಕವಾಗಲಿದೆ. ಸಾಂಸ್ಕೃತಿಕತೆಯಲ್ಲಿ ಭಾರತ ವಿಶ್ವದಲ್ಲೇ ಅಗ್ರಗಣ್ಯ ಸ್ಥಾನದಲ್ಲಿದೆ

ಹುಬ್ಬಳ್ಳಿ: ಭಾರತ ಕಲೆಯನ್ನು ಪೋಷಿಸುವ ರಾಷ್ಟ್ರವಾಗಿದೆ. ವಿಶ್ವಕ್ಕೆ ಸಂಸ್ಕೃತಿ ಪಾಠ ಹೇಳಿಕೊಟ್ಟ ದೇಶ ನಮ್ಮದು. ನಾವು ಪ್ರೀತಿ, ಸಹನೆ, ವಾತ್ಸಲ್ಯ ಕರುಣೆಯುಳ್ಳ‍ವರು. ಶಾಂತಿಪ್ರಿಯರು, ಹಾಗಂತ ಕೆಣಕಿದರೆ ಸುಮ್ಮನೆ ಬಿಡುವುದಿಲ್ಲ ಎನ್ನುವುದಕ್ಕೆ ಆಪರೇಶನ್‌ ಸಿಂದೂರ ಸಾಕ್ಷಿಯಾಗಿದೆ ಎಂದು ಅಖಿಲ ಭಾರತ ಆಕಾಶವಾಣಿಯ ಎ ಗ್ರೇಡ್ ನಾಟಕ ಕಲಾವಿದ ಡಾ. ಶಶಿಧರ ನರೇಂದ್ರ ಹೇಳಿದರು.

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಅಂತರ ವಲಯ ಯುವಜನೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ಸೋಫಿಯಾ ಖುರೇಷಿ, ವ್ಯೂಮಿಕಾ, ವೈಭವ ಸೂರ್ಯವಂಶಿ, ಡಿ. ಗುಕೇಶ ಅವರ ಸಾಧನೆಗೆ ಇಡೀ ವಿಶ್ವವೇ ಶ್ಲಾಘಿಸುತ್ತಿದೆ. ಮನಸ್ಸು ಮಾಡಿದರೆ ಯಾವುದೇ ಸಾಧನೆ ಅಸಾಧ್ಯವಲ್ಲ. ನಮ್ಮ ಬದುಕನ್ನು ಸುಸಂಸ್ಕೃತ ವಾತಾವರಣದಲ್ಲಿ ನಿರ್ಮಾಣ ಮಾಡಿಕೊಳ್ಳಬೇಕು. ಉತ್ತಮ ಸಂಸ್ಕಾರಗಳನ್ನು ಮೈಗೂಡಿಸಿಕೊಳ್ಳಬೇಕು. ಇಂತಹ ಸಂಸ್ಕಾರ ಕಲಿಯಲು ಯುವಜನೋತ್ಸವ ಸಹಾಯಕವಾಗಲಿದೆ. ಸಾಂಸ್ಕೃತಿಕತೆಯಲ್ಲಿ ಭಾರತ ವಿಶ್ವದಲ್ಲೇ ಅಗ್ರಗಣ್ಯ ಸ್ಥಾನದಲ್ಲಿದೆ ಎಂದರು.

ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ, ಸಹನೆ, ತಾಳ್ಮೆಯನ್ನು ಮನೆಯಲ್ಲಿ ಹೇಳಿಕೊಡಬೇಕು. ಸಂಸ್ಕಾರ ಕಲಿಸದೇ ಹೋದರೆ ದುರ್ಘಟನೆಗಳು ಸಂಭವಿಸುತ್ತವೆ. ಸಾಧನೆ ಮಾಡಲು ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳು ದೊರೆಯುತ್ತವೆ. ಅವುಗಳನ್ನು ರಿಯಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು

ಅಧ್ಯಕ್ಷತೆ ವಹಿಸಿದ್ದ ಕಾನೂನು ವಿವಿ ಕುಲಪತಿ ಡಾ. ಸಿ. ಬಸವರಾಜು ಮಾತನಾಡಿ, ಇಂದು ಸಮಾಜ ಒಡೆದು ಹೋಗುತ್ತಿದೆ. ಉತ್ತಮ ಸಮಾಜ ನಿರ್ಮಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಭಾರತೀಯ ಸಂಸ್ಕೃತಿಯನ್ನು ಬೇರೆ ಬೇರೆ ರಾಷ್ಟ್ರಗಳು ಪಾಲಿಸುತ್ತಿವೆ. ಭರತನಾಟ್ಯ, ಸುಗಮ ಸಂಗೀತ, ನಾಟಕಗಳನ್ನು ಬೇರೆ ರಾಷ್ಟ್ರಗಳು ಅಳವಡಿಸಿಕೊಂಡಿವೆ. ಭಾರತದ ಕಲೆ ವಿಶ್ವದೆಲ್ಲೆಡೆ ವ್ಯಾಪಿಸಿದೆ ಎಂದು ಹೇಳಿದರು.

ಬುದ್ಧನ ತತ್ವಗಳು ಇಂದಿಗೂ ಅನ್ವಯವಾಗುತ್ತವೆ. ಬುದ್ಧನ ಸಂಕೇತ ಜ್ಞಾನವಾಗಿದೆ. ನಾವು ಬುದ್ಧನ ನೆನೆಯುತ್ತಿದ್ದೇವೆ ಎಂದರೆ ಅಜ್ಞಾನದಿಂದ ಜ್ಞಾನದ ಕಡೆಗೆ ಸಾಗುತ್ತಿದ್ದೇವೆ ಎಂದರ್ಥ. ಕಲೆ, ಸಾಹಿತ್ಯ, ಸಂಸ್ಕೃತಿ ಕ್ಷೇತ್ರಗಳಲ್ಲಿ ಸಾಧನೆಗೈಯಲು ಪ್ರೀತಿ, ವಾತ್ಸಲ್ಯ ಮುಖ್ಯ. ಪ್ರೀತಿ, ಕರುಣೆಯುಳ್ಳವರು ಭಾರತೀಯರಾಗಿದ್ದಾರೆ. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳನ್ನು ಪ್ರೋತ್ಸಾಹಿಸಬೇಕು. ಸಾಂಸ್ಕೃತಿಕ ಚಟುವಟಿಕೆಗಳು ಮನುಷ್ಯನ ಪರಿವರ್ತನೆಗೆ ಪೂರಕವಾಗಿವೆ. ವ್ಯಕ್ತಿ ಸಂಸ್ಕಾರವಂತನಾಗಬೇಕು. ಮೌಲ್ಯಾಧಾರಿತ ಶಿಕ್ಷಣವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಅವರು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದಲ್ಲಿ ವಿವಿ ಆಡಳಿತಾಂಗ ಕುಲಸಚಿವೆ ಗೀತಾ ಈ. ಕೌಲಗಿ, ಹಣಕಾಸು ಅಧಿಕಾರಿ ಸಂಜೀವಕುಮಾರ ಸಿಂಗ್, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ವಿಭಾಗದ ನಿರ್ದೇಶಕ ಡಾ. ಗಿರೀಶ್ ಕೆ.ಸಿ, ಪ್ರಾಧ್ಯಾಪಕರು, ಸಿಬ್ಬಂದಿ, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಚನ್ನಮ್ಮ ಮಠದ ನಿರೂಪಿಸಿದರು. ಪ್ರಮತಿ ಪ್ರಾರ್ಥಿಸಿದರು‌. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನಾಡಗೀತೆಯನ್ನು ಹಾಡಿದರು. ರೀಮಾ ಎಂ. ಸ್ವಾಗತಿಸಿದರು. ಭೂಮಿಕಾ ತಂಡಗಳನ್ನು ಪರಿಚಯಿಸಿದರು. ಹರ್ಷಿತಾ ವಂದಿಸಿದರು.