ಸಾರಾಂಶ
ಶಿರಸಿ: ಪಾಕಿಸ್ತಾನ ಸರ್ಕಾರ ಎಲ್ಲಿಯವರೆಗೆ ಭಯೋತ್ಪಾದಕರ ಮೇಲೆ ಕ್ರಮ ತೆಗೆದುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಆತಂಕವಾದಿಗಳು ತಮ್ಮ ನೀಚಕೃತ್ಯ ನಿಲ್ಲಿಸುವುದಿಲ್ಲ. ಅದನ್ನು ಮಟ್ಟ ಹಾಕುವವರೆಗೂ ಆಪರೇಷನ್ ಸಿಂದೂರ ನಡೆಸಬೇಕಿದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.
ಅವರು ಗುರುವಾರ ಶಿರಸಿಯಲ್ಲಿ ಮಾಧ್ಯಮದವರ ಜತೆ ಮಾತನಾಡಿ, ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಪಾಕಿಸ್ತಾನಿ ಉಗ್ರವಾದಿಗಳ ತಂಡ ಹತ್ಯೆಗೈದಿತ್ತು. ಅವರ ಬಲಿದಾನ ವ್ಯರ್ಥವಾಗಬಾರದು. ಬಹಳ ಮಹಿಳೆಯರ ಸೌಭಾಗ್ಯ ಕಸಿದುಕೊಂಡಿದ್ದರು. ಅವರಿಗೆ ತಕ್ಕ ಶಿಕ್ಷೆ ಆಗಬೇಕಾಗಿದೆ. ಕೇಂದ್ರ ಸರ್ಕಾರ ಆಪರೇಷನ್ ಸಿಂದೂರ ನಡೆಸಿರುವ ಉದ್ದೇಶ ನಮ್ಮ ಅಕ್ಕ, ತಂಗಿಯರು ಪಹಲ್ಗಾಮ್‌ನಲ್ಲಿ ವಿಧವೆಯರಾಗಿದ್ದಾರೆ. ಅವರಿಗೆ ನ್ಯಾಯ ಕೊಡಿಸಲು ಮಾಡಿರುವುದು. ಪಾಕಿಸ್ತಾನಕ್ಕೆ ಶಾಂತಿ, ಸೌಹಾರ್ದ, ಪ್ರೀತಿ, ವಿಶ್ವಾಸ ಇಲ್ಲ. ಭಾರತೀಯ ಸೇನೆ ಇಡೀ ದೇಶಕ್ಕೆ ಗೌರವ ಹೆಮ್ಮೆ ತಂದಿದೆ. ನಾವೆಲ್ಲರೂ ಪ್ರಶಂಸೆ ಮಾಡಬೇಕಾಗಿದೆ. ಎಲ್ಲ ಭಾರತೀಯರು ಧರ್ಮ, ಜಾತಿ, ಪಕ್ಷಬೇಧ ಬಿಟ್ಟು, ಬೆಂಬಲ ಮಾಡಬೇಕು ಎಂದರು.
ಶಿರಸಿ-ಕುಮಟಾ ರಸ್ತೆ ಕಾಮಗಾರಿ ಆರಂಭವಾಗಿ ಸಾಕಷ್ಟು ವರ್ಷ ಕಳೆದು ಇನ್ನೂ ಮುಗಿದಿಲ್ಲ. ರಸ್ತೆ ಬಂದ್ ಮಾಡಿ ಇಷ್ಟು ದಿನವಾದರೂ ಸೇತುವೆ, ರಸ್ತೆ ಯಾವುದೂ ಆಗಿಲ್ಲ. ಇದರಿಂದ ಪ್ರವಾಸಿಗರು ಮತ್ತು ಶ್ರೀಸಾಮಾನ್ಯನಿಗೆ ಸಮಸ್ಯೆ ಆಗುತ್ತಿದೆ. ಕಾಮಗಾರಿ ಸಮಯದ ಮಿತಿಯಲ್ಲಿ ಮುಗಿಸಬೇಕು. ಜಿಲ್ಲಾಧಿಕಾರಿ, ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಶೀಘ್ರ ಕಾಮಗಾರಿ ಮುಗಿಸುವಂತೆ ಕ್ರಮಕ್ಕೆ ಆಗ್ರಹಿಸುತ್ತೇನೆ. ಭೂಸ್ವಾಧೀನ ಪ್ರಕ್ರಿಯೆ ಬಗ್ಗೆ ಕುಮಟಾ ಉಪವಿಭಾಗಾಧಿಕಾರಿ ಸ್ವಲ್ಪ ಜಾಗೃತರಾಗಿ ಯುದ್ಧೊಪಾದಿಯಲ್ಲಿ ಕೆಲಸ ಮಾಡಬೇಕು. ವಿಳಂಬ ಆಗಿದ್ದು ಸರಿಯಲ್ಲ. ಉಪವಿಭಾಗಾಧಿಕಾರಿ ಕ್ರಿಯಾಶೀಲರಿದ್ದರೆ ಕೆಲಸ ಆಗುತ್ತದೆ. ಪರಿಹಾರ ನೀಡಿ ಕಾಮಗಾರಿ ಸಮರ್ಪಕವಾಗಿ ಮಾಡಬೇಕು. ಈ ಗುತ್ತಿಗೆದಾರರು, ಅಧಿಕಾರಿಗಳಿಗೆ ಹಿಡಿತ ಇಲ್ಲದಂತಾಗಿದೆ ಎಂದರು.
ಬಡವರು ಅರಣ್ಯ ಅತಿಕ್ರಮಣ ನಂಬಿ ಜೀವನ ಮಾಡುತ್ತಿದ್ದಾರೆ. 1978 ಕ್ಕಿಂತ ಮೊದಲು ಅತಿಕ್ರಮಣ ಮಾಡಿದ್ದರೋ ಅವರಿಗೆ ಸಂರಕ್ಷಣೆ ಕೊಡಲು ಆದೇಶ ಇತ್ತು. ಆದರೆ ಕೆಲ ಅರಣ್ಯ ಅಧಿಕಾರಿಗಳು ಕಾನೂನು ಕೈಗೆ ತೆಗೆದುಕೊಂಡು ಬಸವಳ್ಳಿ, ಹಳಿಯಾಳದಲ್ಲಿ ಅಡಿಕೆ, ತೆಂಗು ಇತರ ಮರಗಿಡಗಳನ್ನು ತೆಗೆಯಲು ಹೋಗಿದ್ದಾರೆ. ಈ ತರದ ವರ್ತನೆ ಅರಣ್ಯ ಸಿಬ್ಬಂದಿ ಮಾಡಿದರೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ಹೊಸ ಅತಿಕ್ರಮಣಕ್ಕೆ ಅವಕಾಶ ಇಲ್ಲ. ಅರಣ್ಯ ಸಂರಕ್ಷಣೆ ಆಗಬೇಕು. ಮಾನವ ಸುಖವಾಗಿ ಬಾಳಲು ಅರಣ್ಯ ಸಂಪತ್ತು ಬೆಳೆಯಬೇಕು. ಆದರೆ 40 - 50 ವರ್ಷದ ಅತಿಕ್ರಮಣಕ್ಕೆ ತೊಂದರೆ ಆಗಬಾರದು. ಅರಣ್ಯ ಸಂರಕ್ಷಣಾ ಕಾಯ್ದೆ 1980 ರಲ್ಲಿ ಸರಿಯಾಗಿಲ್ಲ. ಸಮಸ್ಯೆ ಆಗಿದೆ.
ಐಆರ್‌ಬಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ತೃಪ್ತಿ ತರುವಂತಹ ಕೆಲಸ ಮಾಡಿಲ್ಲ. ಶಿರೂರು ಘಟನೆ ನಡೆದಾಗ ಅಲ್ಲಿ ಹೋಗಿದ್ದೆ. ಗುತ್ತಿಗೆದಾರರು ಮತ್ತು ರಾಷ್ಟ್ರೀಯ ಹೆದ್ದಾರಿ ಇಲಾಖೆ ಆಶ್ವಾಸನೆ ನೀಡಿ, ತಾತ್ಕಾಲಿಕ ಪರಿಹಾರ ನೀಡಿ ಮುಗಿಸಿದ್ದಾರೆ. ಸಮಯಕ್ಕೆ ರಸ್ತೆ ಕಾಮಗಾರಿ ಮುಗಿದಿಲ್ಲ. ಜಿಲ್ಲಾಧಿಕಾರಿ ಐಆರ್‌ಬಿ ಕಂಪನಿಯ ಅಧಿಕಾರಿಗಳನ್ನು ಕರೆಸಿ ಸಭೆ ಮಾಡಿ ಕ್ರಮ ಕೈಗೊಳ್ಳಬೇಕು ಎಂದರು.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳೊಡನೆ ದೂರವಾಣಿ ಮೂಲಕ ಮಾತನಾಡಿ ಜಿಲ್ಲೆಯ ಕೃಷಿಕರ ಬೆಳೆ ರಕ್ಷಣಾ ಬಂದೂಕುಗಳ ನವೀಕರಣವನ್ನು ಶೀಘ್ರ ಮಾಡಿ, ರೈತರಿಗೆ ಅಗತ್ಯವಾಗಿರುವ ಬೆಳೆ ಸಂರಕ್ಷಣಾ ವ್ಯವಸ್ಥೆ ಒದಗಿಸುವಂತೆ ದೇಶಪಾಂಡೆ ಸೂಚನೆ ನೀಡಿದರು.