ಸಾರಾಂಶ
ಶಿವಮೊಗ್ಗ: ಭಯೋತ್ಪಾದಕರ ಹುಟ್ಟಡಗಿಸಿದ ಭಾರತೀಯ ಸೈನಿಕರಿಗೆ ಆತ್ಮಬಲ ತುಂಬಲು ಬುಧವಾರ ರಾಷ್ಟ್ರ ಭಕ್ತರ ಬಳಗದಿಂದ ಇಲ್ಲಿನ ರವೀಂದ್ರ ನಗರ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಸಿ ಯೋಧರ ಆಯಸ್ಸು ವೃದ್ಧಿಗೆ ಮತ್ತು ವಿಜಯಕ್ಕಾಗಿ ಪ್ರಾರ್ಥಿಸಲಾಯಿತು.
ಇದೇ ವೇಳೆ ಸಿಹಿ ಹಂಚಿ, ಪಟಾಕಿಸಿಡಿಸಿ ಸಂಭ್ರಮಿಸಲಾಯಿತು. ಪ್ರಮುಖ ನಾಯಕರು ಮಾತನಾಡಿ, ಸೇನೆಯ ಕಾರ್ಯಾಚರಣೆಗೆ ಬೆಂಬಲ ಸೂಚಿಸಿದರು. ಇನ್ನೊಂದೆಡೆ ಯುದ್ಧದ ಸಮಯದಲ್ಲಿ ತೆಗೆದುಕೊಳ್ಳಬೇಕಾದ ರಕ್ಷಣಾ ಮುನ್ನೆಚ್ಚರಿಕೆಯ ಅಣಕು ಪ್ರದರ್ಶನವನ್ನು ಕೂಡ ನಡೆಸಲಾಯಿತು.ಪೂಜೆ ನಡೆಸಿದ ಬಳಿಕ ಮಾತನಾಡಿದ ರಾಷ್ಟ್ರ ಭಕ್ತರ ಬಳಗ ಪ್ರಮುಖ ಕೆ.ಇ.ಕಾಂತೇಶ್, ಭಯೋತ್ಪಾದಕ ತಾಣಗಳ ಮೇಲೆ ದಾಳಿ ಮಾಡಿ ಭಾರತದಲ್ಲಿ 26 ಸಹೋದರಿಯರ ಸಿಂಧೂರ ಅಳಿಸಿದ ಉಗ್ರರಿಗೆ ತಕ್ಕ ಪಾಠವನ್ನು ಭಾರತೀಯ ಸೇನೆ ಕಲಿಸಿದೆ. ಅಖಂಡ ಭಾರತದ ಕನಸು ನನಸಾಗುವ ಸಂದರ್ಭ ಬಂದಿದೆ ಎಂದರು.
ಈ ಸಂದರ್ಭದಲ್ಲಿ ರಾಷ್ಟ್ರ ಭಕ್ತರ ಬಳಗದ ಪ್ರಮುಖರಾದ ಈ.ವಿಶ್ವಾಸ್, ಉಮೇಶ್‌ಜಾಧವ್, ಆರಾಧ್ಯ, ಸತ್ಯನಾರಾಯಣ್, ಕುಬೇರಪ್ಪ, ಸಂತೋಷ್, ಶ್ರೀಕಾಂತ್, ಬಾಲು ಮೊದಲಾದವರಿದ್ದರು.ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ವಿಜಯೋತ್ಸವ:
ಆಪರೇಷನ್ ಸಿಂದೂರ ಹೆಸರಿನಲ್ಲಿ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ನಡೆದ ದಾಳಿಯನ್ನು ಸ್ವಾಗತಿಸಿ ಬಿಜೆಪಿಯಿಂದ ನಗರದ ಗಾಂಧಿ ಬಜಾರಿನ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ವಿಜಯೋತ್ಸವ ಆಚರಿಸಲಾಯಿತು. ಭಾರತ ಬಾವುಟ ಹಿಡಿದು ಭಾರತ ಮಾತೆ ಪರ ಘೊಷಣೆ ಹಾಕಿದ ಕಾರ್ಯಕರ್ತರು, ಗಡಿ ಕಾಯುವ ಸೈನಿಕರಿಗೆ ಪ್ರಧಾನಿ ಮೋದಿಗೆ ಹೆಚ್ಚಿನ ಶಕ್ತಿ ನೀಡಲಿ, ಉಗ್ರರನ್ನು ಧ್ವಂಸ ಮಾಡಲಿ ಎಂದು ವಿಶೇಷ ಪೂಜೆ ಸಲ್ಲಿಸಿದರು. ಶಾಸಕ ಎಸ್.ಎನ್.ಚನ್ನಬಸಪ್ಪ ಸೇರಿದಂತೆ ಮತ್ತಿತರರಿದ್ದರು.ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದಲ್ಲಿ ಮಾಕ್ ಡ್ರಿಲ್:
ಪಾಕಿಸ್ತಾನದ ಜೊತೆಗೆ ಯುದ್ಧದ ಸನ್ನಿವೇಶದ ಹಿನ್ನೆಲೆ ಬುಧವಾರ ಶಿವಮೊಗ್ಗದ ರಾಗಿಗುಡ್ಡದಲ್ಲಿರುವ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದಲ್ಲಿ ಮಾಕ್ ಡ್ರಿಲ್ ನಡೆಯಿತು.ಬುಧವಾರ ಮಧ್ಯಾಹ್ನ ರಕ್ಷಾ ವಿಶ್ವವಿದ್ಯಾಲಯದಲ್ಲಿ ಸೈರನ್ ಶಬ್ದ ಕೇಳಿಸಿತು. ತರಗತಿಯಲ್ಲಿ ಪಾಠ ಕೇಳುತ್ತಿದ್ದ ವಿದ್ಯಾರ್ಥಿಗಳು ಕೂಡಲೇ ತಮ್ಮನ್ನು ರಕ್ಷಿಸಿಕೊಳ್ಳಲು ಬೆಂಚ್, ಟೇಬಲ್‌ಗಳ ಅಡಿಯಲ್ಲಿ ಕುಳಿತು ರಕ್ಷಣೆ ಪಡೆಯುತ್ತಿದ್ದರು, ಬಯಲಿನಲ್ಲಿ ಆಟವಾಡುತ್ತಿದ್ದವರು, ಕಟ್ಟಡಗಳ ಅಡಿಯಲ್ಲಿ ಅವರು ರಕ್ಷಣೆಗೆ ಮುಂದಾಗಿದ್ದರು. ಕಟ್ಟಡಗಳು ಇಲ್ಲದೆಡೆ ನೆಲದ ಮೇಲೆ ಮಲಗಿ ತಮ್ಮ ರಕ್ಷಣೆ ಮಾಡಿಕೊಳ್ಳುವ ಮಾಕ್ ಡ್ರಿಲ್ ನಡೆಯಿತು. ಸ್ವಲ್ಪ ಸಮಯದ ಬಳಿಕ ಗಾಯಾಳುಗಳ ರಕ್ಷಣೆ, ಪ್ರಾಥಮಿಕ ಚಿಕಿತ್ಸೆ ನೀಡುವ ಕುರಿತು ಮಾಕ್ ಡ್ರಿಲ್ ಮಾಡಲಾಯಿತು.
ಭಾರತದ ತಾಕತ್ತು ಏನೆಂದು
ತೋರಿಸಿದ್ದೇವೆ: ಚನ್ನಬಸಪ್ಪಶಿವಮೊಗ್ಗ: ಭಾರತದ ತಾಕತ್ತು ಏನೆಂದು 24 ನಿಮಿಷದಲ್ಲಿ ತೋರಿಸಿದ್ದೇವೆ. ಸೈನಿಕರು ಮಾಡಿದಂತಹ ಕಾರ್ಯ ಇಡೀ ದೇಶ ಮೆಚ್ಚಿಕೊಂಡಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಅಪರೇಷನ್ ಸಿಂಧೂರ ಎನ್ನುವ ಹೆಸರಿನಲ್ಲಿ ಸೈನಿಕರ ತಂಡ ಪಾಕಿಸ್ತಾನಕ್ಕೆ ನುಗ್ಗಿ ಹೊಡೆದಿದೆ. ಸೈನಿಕರ ದೇಶ ಭಕ್ತಿ, ಅವರ ಕಾರ್ಯದ ಜೊತೆ ಇಡೀ ದೇಶ ಜೊತೆಗೆ ನಿಂತಿದೆ ಎಂದರು.ಭಾರತ ಮಾತೆಗೆ ಹೂವು ಹಾಕಿ ಪಾಕಿಸ್ತಾನಕ್ಕೆ ಬಾಂಬ್ ಹಾಕಿ ಅನ್ನೋ ಘೋಷಣೆ ಕೂಗುತ್ತಿದ್ದೆವು. ಅ ಕೆಲಸವನ್ನು ನಮ್ಮ ಸೈನಿಕರು ಮಾಡಿ ಮುಗಿಸಿದ್ದಾರೆ. ಈಗ ಉಗ್ರರಿಗೆ ಪಾಠ ಕಲಿಸಿದ್ದು, ಇನ್ನು ಪಾಕಿಸ್ತಾನಕ್ಕೆ ಬಾಂಬ್ ಹಾಕುವ ಕಾಲ ಸನಿಹದಲ್ಲಿದೆ. 26 ಜನರ ಹತ್ಯೆಗೆ ಪ್ರತಿಕಾರ ಇದಾಗಿದೆ. ಸರ್ಜಿಕಲ್ ಸ್ಪೈಕ್ ಮಾಡಿದ ಮೇಲೆ ಸುಮ್ಮನಾಗುತ್ತಾರೆ ಎಂದುಕೊಂಡಿದ್ವಿ. ಆದರೆ, ಅವರು ಮತ್ತೆ ಅವರ ಬುದ್ಧಿ ತೋರಿಸಿದ್ದು, ಭಯೋತ್ಪಾದನೆಗೆ ಅಂತ್ಯ ಹಾಡುವುದು ಖಚಿತ ಎಂದರು.
ಇದರಿಂದ ಉಗ್ರರ ದಾಳಿಗೆ ಬಲಿಯಾದವರ ಆತ್ಮ ತೃಪ್ತಿಯಿಂದ ಸ್ವರ್ಗಕ್ಕೆ ಹೋಗುತ್ತದೆ, ಅವರ ಕುಟುಂಬಕ್ಕೆ ಒಂದು ನೆಮ್ಮದಿ ಸಿಕ್ಕಿದೆ ಎಂದರು.ದೇಶದೊಳಗಿನ ಶತ್ರುಗಳಿಗೂ ಈಗ
ನಡುಕ ಶುರುವಾಗಿದೆ: ಕೆಎಸ್‌ಈ
ಶಿವಮೊಗ್ಗ: ದೇಶದ ಹೊರ ಭಾಗದಲ್ಲಿರುವ ಉಗ್ರರಿಗೆ ಬೆಂಬಲ ನೀಡುತ್ತಿರುವ ದೇಶದ ಒಳಗಿನ ಶತ್ರುಗಳಿಗೂ ಈಗ ನಡುಕ ಪ್ರಾರಂಭವಾಗಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಭಯೋತ್ಪಾದಕರ ಅಡಗು ತಾಣಗಳನ್ನು ಧ್ವಂಸ ಮಾಡಿ ನೂರಕ್ಕೂ ಹೆಚ್ಚು ಉಗ್ರರ ಸಂಹಾರ ಮಾಡಲಾಗಿದೆ. ಸ್ವಾತಂತ್ರ್ಯ ಹೋರಾಟಗಾರರ ಆತ್ಮಗಳಿಗೆ ಇದರಿಂದ ಶಾಂತಿ ಸಿಕ್ಕಿದೆ. ರಾಷ್ಟ್ರದ್ರೋಹಿಗಳು ಕೂಡ ಶೀಘ್ರದಲ್ಲೇ ಸೂಕ್ತ ಪಾಠ ಕಲಿಯುತ್ತಾರೆ ಎಂದರು.
ದೇಶದ ಜನ ನಮ್ಮ ಸೈನಿಕರ ಹೋರಾಟಕ್ಕೆ ಬೆಂಬಲಕ್ಕೆ ನಿಂತಿದ್ದಾರೆ. 26 ಜನ ಪ್ರವಾಸಿಗರನ್ನು ಉಗ್ರರು ಹತ್ಯೆ ಮಾಡಿದಾಗಲೇ ಇದು ಪಾಕಿಸ್ತಾನದ ನಾಶಕ್ಕೆ ಮೊದಲ ಹೆಜ್ಜೆ ಎಂದು ನಾನು ಹೇಳಿದ್ದೆ. ಅದು ಈಗ ನಿಜವಾಗಿದೆ. ಯಾವ ಕಾರಣಕ್ಕೂ ಭಯೋತ್ಪಾದನೆಗೆ ನಮ್ಮ ದೇಶದಲ್ಲಿ ಅವಕಾಶವಿಲ್ಲ ಎಂದು ಮೋದಿ ಸರ್ಕಾರ ಆಪರೇಷನ್ ಸಿಂಧೂರದ ಮೂಲಕ ತೋರಿಸಿದೆ ಎಂದರು.ಭಾರತದ ಉಗ್ರ ನಿಗ್ರಹ ದಾಳಿಯನ್ನು ಚೀನಾ ದೇಶ ವಿಷಾದನೀಯ ಎಂದಿದೆ. ಚೀನಾದಲ್ಲಿ ಉಗ್ರಗಾಮಿ ಚಟುವಟಿಕೆ ನಡೆದಿದ್ದರೆ ಅವರಿಗೆ ಗೊತ್ತಾಗುತ್ತಿತ್ತು ಎಂದು ಟೀಕಿಸಿದ ಅವರು, ನರೇಂದ್ರ ಮೋದಿ ಅವರಿಗೆ ರಾಜನಾಥ್ ಸಿಂಗ್ ಮತ್ತು ಅಮಿತ್ ಶಾ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಪಾಕಿಸ್ತಾನದ ಉಗ್ರರಿಗೆ ತಕ್ಕ ಉತ್ತರ
ಶಿವಮೊಗ್ಗ: ಆಪರೇಷನ್ ಸಿಂಧೂರ ಹೆಸರಿನಲ್ಲಿ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ನಡೆದ ದಾಳಿಯನ್ನು ಪಹಲ್ಗಾಂ ದಾಳಿಯಲ್ಲಿ ಮೃತರಾದ ಮಂಜುನಾಥ ರಾವ್ ಅವರ ತಾಯಿ ಸುಮತಿ ಸ್ವಾಗತಿಸಿದ್ದಾರೆ.ಮಂಜುನಾಥ ರಾವ್ ಅವರ ತಾಯಿ ಸುಮತಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಹೊರ ದೇಶಕ್ಕೆಲ್ಲ ಆರಾಮವಾಗಿ ಹೋಗಿ ಬರುತ್ತಾರೆ. ಆದರೆ ನಮ್ಮದೇ ದೇಶದಲ್ಲಿ ನಾವು ಓಡಾಡಲು ಸಾಧ್ಯವಾಗುತ್ತಿಲ್ಲವಲ್ಲ ಎಂದು ಅನಿಸುತ್ತಿತ್ತು. ಕೇಂದ್ರ ಸರ್ಕಾರ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸುವ ಮೂಲಕ ತಕ್ಕ ಉತ್ತರ ನೀಡಿದೆ ಎಂದರು.
ಕುಟುಂಬದಲ್ಲಿ ಯಜಮಾನ ಯಾವುದೇ ತೀರ್ಮಾನ ಕೈಗೊಂಡರೂ ನಾವೆಲ್ಲ ಬದ್ಧರಾಗಿರುತ್ತೇವೆ. ಹಾಗೆಯೇ ನಮ್ಮ ದೇಶವನ್ನು ಕುಟುಂಬ ಎಂದು ಪರಿಗಣಿಸಿದರೆ ಮೋದಿ ಅವರು ಯಜಮಾನ ಸ್ಥಾನದಲ್ಲಿದ್ದಾರೆ. ಅವರು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಾರೆ. ನನ್ನ ಮಗ ಪ್ರಕೃತಿ ಸೌಂದರ್ಯ ನೋಡಲೆಂದು ಹೋಗಿ ಅನಾಥವಾಗಿ ಸಾವನ್ನಪ್ಪಿದ. ಇದು ನನಗೆ ಬಹಳ ನೋವಿದೆ ಎಂದರು.ಕಳೆದ ರಾತ್ರಿ ಎರಡ್ಮೂರು ಜನ ಎನ್‌ಐಎ ಅಧಿಕಾರಿಗಳು ಬಂದಿದ್ದರು. ಸರ್ಕಾರದ ಕಡೆಯಿಂದ ಎಂದು ತಿಳಿಸಿದ್ದರು. ಮಾಧ್ಯಮದವರು ಏನೆಲ್ಲ ಪ್ರಶ್ನೆ ಕೇಳುತ್ತಾರೋ ಅದೇ ರೀತಿಯ ಪ್ರಶ್ನೆಗಳನ್ನು ಕೇಳಿದರು. ನಾವು ಉತ್ತರ ನೀಡಿದ್ದೇವೆ. ತುಂಬಾ ಹೊತ್ತು ಮನೆಯಲ್ಲಿದ್ದರು ಎಂದು ತಿಳಿಸಿದರು.