ಕೋತಿಗಳನ್ನು ಹಿಡಿದು ಕಾಡಿಗೆ ಬಿಡುವ ಕಾರ್ಯಾಚರಣೆ ಆರಂಭ..!

| Published : Nov 14 2025, 01:45 AM IST

ಕೋತಿಗಳನ್ನು ಹಿಡಿದು ಕಾಡಿಗೆ ಬಿಡುವ ಕಾರ್ಯಾಚರಣೆ ಆರಂಭ..!
Share this Article
  • FB
  • TW
  • Linkdin
  • Email

ಸಾರಾಂಶ

ಸುಮಾರು ಒಂದು ಸಾವಿರಕ್ಕೂ ಹೆಚ್ಚಿರುವ ಕೋತಿಗಳು ಆಹಾರ ಸಿಗದ ಕಾರಣ ಭಕ್ತರ ಮೇಲೆ ದಾಳಿ ಮಾಡುತ್ತಿದ್ದವು. ಮನೆಗಳ ಬಳಿಗೆ ಬಂದು ಅಪಾರ ಆಸ್ತಿಪಾಸ್ತಿ, ಸುತ್ತಮುತ್ತಲಿನ ತೋಟಗಳಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿದ್ದವು. ನಾಗರಿಕರು ಕೋತಿಗಳನ್ನು ಹಿಡಿಯಬೇಕೆಂದು ಒತ್ತಾಯಿಸಿ ಗ್ರಾಮಸಭೆಯಲ್ಲಿ ನಿರ್ಣಯ ಮಾಡಿಸಿದ್ದರು.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಯೋಗನರಸಿಂಹಸ್ವಾಮಿ ಹಾಗೂ ಚೆಲುವನಾರಾಯಣಸ್ವಾಮಿ ದೇಗುಲಗಳ ಬಳಿ ನಾಗರಿಕರು ಮತ್ತು ಭಕ್ತರಿಗೆ ತೊಂದರೆ ನೀಡುತ್ತಿದ್ದ ಕೋತಿಗಳನ್ನು ಹಿಡಿದು ಕಾಡಿಗೆ ಬಿಡುವ ಕಾರ್ಯಾಚರಣೆ ಗುರುವಾರ ಆರಂಭಿಸಲಾಯಿತು.

ಸುಮಾರು ಒಂದು ಸಾವಿರಕ್ಕೂ ಹೆಚ್ಚಿರುವ ಕೋತಿಗಳು ಆಹಾರ ಸಿಗದ ಕಾರಣ ಭಕ್ತರ ಮೇಲೆ ದಾಳಿ ಮಾಡುತ್ತಿದ್ದವು. ಮನೆಗಳ ಬಳಿಗೆ ಬಂದು ಅಪಾರ ಆಸ್ತಿಪಾಸ್ತಿ, ಸುತ್ತಮುತ್ತಲಿನ ತೋಟಗಳಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿದ್ದವು.

ನಾಗರಿಕರು ಕೋತಿಗಳನ್ನು ಹಿಡಿಯಬೇಕೆಂದು ಒತ್ತಾಯಿಸಿ ಗ್ರಾಮಸಭೆಯಲ್ಲಿ ನಿರ್ಣಯ ಮಾಡಿಸಿದ್ದರು. ಕೋತಿ ದಾಳಿಗಳ ಬಗ್ಗೆ ಗಮನ ಸೆಳೆಯುವ ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಗ್ರಾಪಂ ಮತ್ತು ದೇವಾಲಯದ ಆಡಳಿತ ಕೋತಿಗಳನ್ನು ಹಿಡಿಯುವ ಕಾರ್ಯಕ್ಕೆ ಜಂಟಿ ಸಹಭಾಗಿತ್ವದಲ್ಲಿ ಚಾಲನೆ ನೀಡಿವೆ.

ಎರಡು ದಿನಗಳ ಕಾರ್ಯಾಚರಣೆಯಲ್ಲಿ 85ಕ್ಕೂ ಹೆಚ್ಚು ಕೋತಿಗಳನ್ನು ಹಿಡಿದು ಬೋನಿನಲ್ಲಿ ಹಾಕಲಾಗಿದೆ. ಉಪರಾಷ್ಟ್ರಪತಿಗಳ ಭೇಟಿಯ ದಿನದಂದೂ ಸಹ ಕೋತಿಗಳ ಹಾವಳಿ ತಪ್ಪಿಸಲು ಶಾಸಕ ದರ್ಶನ್ ಪುಟ್ಟಣ್ಣಯ್ಯರಿಗೆ ಮನವಿ ಮಾಡಲಾಗಿತ್ತು.

ಮಂಗಗಳನ್ನು ಹಿಡಿಯುವ ಕಾರ್ಯಾಚರಣೆ ಮಾಹಿತಿ ನೀಡಿದ ಪಿಡಿಒ ರಾಜೇಶ್ವರ್ ಮತ್ತು ದೇವಾಲಯದ ಇಒ ಶೀಲಾ ನಾಗರಿಕರು ಮತ್ತು ಭಕ್ತರ ಮನವಿ ಮೇರೆಗೆ ಕೋತಿಗಳ ಹಿಂಡನ್ನು ಸೆರೆಹಿಡಿಯಲಾಗುತ್ತಿದೆ.

ಕೋತಿಗಳು ಇತ್ತೀಚೆಗೆ ಯೋಗನರಸಿಂಹಸ್ವಾಮಿ ಬೆಟ್ಟದಲ್ಲಿ ದಾಳಿ ಮಾಡಿ ಗಾಯಗೊಳಿಸವ ಘಟನೆಗಳು ಪದೇ ಪದೇ ನಡೆಯುತ್ತಿತ್ತು. ಹೀಗಾಗಿ ಮಂಗಗಳನ್ನಿಡಿದು ಅಭಯಾರಣ್ಯಗಳಿಗೆ ಬಿಡುವ ಕಾರ್ಯಾಚರಣೆ ಆರಂಭಿಸಿದ್ದೇನೆ. ಒಂದು ವಾರ ಅಥವಾ ಹತ್ತುದಿನಗಳ ಕಾಲ ಕಾರ್ಯಾಚರಣೆ ಮಾಡಿ ಮಂಗಗಳನ್ನು ಹಿಡಿಯಲಾಗುತ್ತದೆ ಎಂದರು.

ಮೇಲುಕೋಟೆಯಲ್ಲಿ ಹಿಡಿದ ಮಂಗಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳ ಸಹಕಾರದಲ್ಲಿ ಬಂಡಿಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡಲಾಗುತ್ತದೆ. ಯಾವುದೇ ಮಂಗಗಳಿಗೂ ತೊಂದರೆಯಾಗದಂತೆ ಎಚ್ಚರವಹಿಸಲಾಗುತ್ತಿದೆ ಎಂದರು.

ಮೇಲುಕೋಟೆ ಮತ್ತು ಸುತ್ತಮುತ್ತ ಹಾಗೂ ಅಕ್ಕಪಕ್ಕದ ಗ್ರಾಮಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದ್ದು, ಹೊರಗಿನಿಂದ ಕೋತಿಗಳನ್ನು ತಂದು ಬಿಟ್ಟರೆ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ. ಭಕ್ತರು ಬೆಟ್ಟ ಮತ್ತು ದೇವಾಲಯದಲ್ಲಿ ಕೋತಿಗಳ ಕಾಟವಿಲ್ಲದೆ ದರ್ಶನ ಮಾಡುವ ವಾತಾವರಣ ನಿರ್ಮಿಸಲು ಗ್ರಾಮ ಪಂಚಾಯ್ತಿ ಸಂಕಲ್ಪಮಾಡಿದೆ ಎಂದರು.