ಬಳ್ಳಾರಿ: ಬಹುತ್ವವೇ ಸನಾತನ ಧರ್ಮದ ತಳಹದಿಯಾಗಿದ್ದು, ಬಹುತ್ವದ ಆಧಾರದ ಮೇಲೆ ಸನಾತನ ಭಾರತೀಯ ಸಂಸ್ಕೃತಿ ನಿಂತಿದೆ. ಆದರೆ, ಇದನ್ನರಿಯದವರು ಕೇವಲ ಆಚರಣೆಗಳನ್ನೇ ಧರ್ಮ ಎಂದುಕೊಂಡಿದ್ದಾರೆ ಎಂದು ವಿಜಯಪುರ ಹಾಗೂ ಗದುಗಿನ ಶ್ರೀ ರಾಮಕೃಷ್ಣ ಆಶ್ರಮದ ಶ್ರೀ ಸ್ವಾಮಿ ನಿರ್ಭಯಾನಂದ ಸರಸ್ವತಿ ಹೇಳಿದರು. ನಗರದ ಡಾ. ರಾಜಕುಮಾರ ರಸ್ತೆಯಲ್ಲಿರುವ ಪಾಂಚಜನ್ಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿವೇಕ ಮಂಟಪ ಉಪನ್ಯಾಸ ಮಾಲಿಕೆಯಲ್ಲಿ ಮಾತನಾಡುತ್ತಿದ್ದರು.

ಬಹುತ್ವ. ಸನಾತನ ಧರ್ಮದ ಆಂತರಿಕ ಆತ್ಮ. ಸನಾತನ ಧರ್ಮದ ಒಂದೇ ಮಾರ್ಗವನ್ನು ಮಾತ್ರ ಸತ್ಯವೆಂದು ಒತ್ತಿ ಹೇಳುವುದಿಲ್ಲ. ಬದಲಾಗಿ ಅನೇಕ ಮಾರ್ಗಗಳನ್ನು ಸತ್ಯದತ್ತ ಕೊಂಡೊಯ್ಯುವ ಸಾಧನೆಗಳೆಂದು ಮಾನ್ಯಗೊಳಿಸುತ್ತದೆ. ಭಾರತದ ವಿವಿಧ ಪ್ರಾಂತಗಳಲ್ಲಿ ಆಚರಣೆಗಳು, ಸಂಪ್ರದಾಯಗಳು, ಭಾಷೆಗಳು ಬೇರೆಯಾಗಿದ್ದರೂ ಅದರ ಮೂಲಭಾವ ಧರ್ಮದ ಆತ್ಮೀಯತೆ ಮತ್ತು ಸದಾಚಾರವೇ ಆಗಿದೆ. ಸನಾತನ ಧರ್ಮ ವಾದ-ವಿವಾದಗಳ ಮೂಲಕ ಸತ್ಯಾನ್ವೇಷಣೆಗೆ ಅವಕಾಶ ನೀಡಿದೆ. ವಿಭಿನ್ನ ಚಿಂತನೆಗಳನ್ನು ತಿರಸ್ಕರಿಸದೇ ಅವುಗಳನ್ನು ಒಳಗೊಳ್ಳುವ ಸಾಮರ್ಥ್ಯವೇ ಸನಾತನದ ಬಲವಾಗಿದೆ.

ನಿಜವಾದ ಸನಾತನ ಧರ್ಮದ ಬಗ್ಗೆ ತಿಳಿಯಬೇಕು ಎಂದರೆ ವೇದಗಳ ಅಧ್ಯಯನ ಮಾಡಬೇಕು. ಸನಾತನ ಧರ್ಮ ದೇವರ ಕೇಂದ್ರಿತ ಧರ್ಮವಲ್ಲ, ಮಾನವ ಕೇಂದ್ರಿತ ಧರ್ಮವಾಗಿದೆ ಎಂದು ತಿಳಿಸಿದರು.

ಸನಾತನ ಧರ್ಮ ಕೇವಲ ಒಂದು ಮತ ಅಥವಾ ಆಚರಣೆಗಳ ಸಂಕಲನವಲ್ಲ. ಅದು ಅನುಭವಾಧಾರಿತ ಆಧ್ಯಾತ್ಮಿಕ ಸತ್ಯ. ಶ್ರೀರಾಮಕೃಷ್ಣ ಪರಮಹಂಸರು ಧರ್ಮವನ್ನು ಕಠಿಣ ಶಾಸ್ತ್ರಗಳೊಳಗೆ ಸೀಮಿತಗೊಳಿಸಲಿಲ್ಲ. ಸರಳ ಹೃದಯದ ಭಕ್ತಿಗೆ ದೇವನತ್ತ ಸಾಗುವ ಸುಲಭ ದಾರಿ ಎಂದು ಹೇಳಿದರು.ಪ್ರಾಮಾಣಿಕತೆ, ಶುದ್ಧ ಮನಸ್ಸು, ಪ್ರೀತಿ ಇವೇ ಸನಾತನ ಧರ್ಮದ ಮೂಲ ಗುಣಗಳು ಎಂದು ಶ್ರೀರಾಮಕೃಷ್ಣರು ಪ್ರತಿಪಾದಿಸಿದ್ದರು. ಅವರ ಜೀವನ ಮತ್ತು ಉಪದೇಶಗಳು ಧರ್ಮ ಸಹಿಷ್ಣುತೆಗೆ ಮಾದರಿ. ವಿಭಿನ್ನ ಧರ್ಮಗಳ ನಡುವೆ ವೈಷಮ್ಯವಲ್ಲ, ಸಮನ್ವಯ ಇರಬೇಕು ಎಂಬ ಸಂದೇಶವನ್ನು ಅವರು ನೀಡಿದರು. ಶ್ರೀರಾಮಕೃಷ್ಣ ಪರಮಹಂಸರ ಪ್ರಕಾರ ಸನಾತನ ಧರ್ಮ ಜೀವಂತ ಅನುಭವ. ಸಹಿಷ್ಣುತೆ ಮತ್ತು ಅನೇಕ ಮಾರ್ಗಗಳ ಸ್ವೀಕಾರದ ಧರ್ಮ. ಅದು ಮನಸ್ಸಿನ ಪಾವಿತ್ರ್ಯ ಮತ್ತು ದೇವನಿಷ್ಠೆಯಿಂದ ಸತ್ಯವನ್ನು ಅರಿಯುವ ಆತ್ಮಯಾತ್ರೆಯೂ ಆಗಿದೆ ಎಂದು ಸ್ವಾಮಿ ನಿರ್ಭಯಾನಂದ ಸರಸ್ವತಿ ತಿಳಿಸಿದರು.

ವಿವೇಕ ಮಂಟಪದ ಸಂಯೋಜಕ ಪ್ರಭುದೇವ ಕಪ್ಪಗಲ್ಲು ಅವರು ಪ್ರಾಸ್ತಾವಿಕ ಮಾತನಾಡಿದರು. ಹಿರಿಯ ಲೆಕ್ಕಪರಿಶೋಧಕ ಸಿ. ಎರಿಸ್ವಾಮಿ ನಿರ್ವಹಿಸಿದರು. ಲೆಕ್ಕ ಪರಿಶೋಧಕರಾದ ಸಿದ್ಧರಾಮೇಶ್ವರಗೌಡ ಕರೂರು, ಕೆ. ರಾಜಶೇಖರ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಮಾಜಿ ಅಧ್ಯಕ್ಷ ಯಶ್ವಂತರಾಜ್, ಅಡವಿಸ್ವಾಮಿ ಮತ್ತಿತರರಿದ್ದರು.


ಉಪನ್ಯಾಸ ಆರಂಭಕ್ಕೂಮುನ್ನ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿಶ್ರಾಂತ ಉಪನ್ಯಾಸಕ ಎನ್. ಬಸವರಾಜ ಅವರು ರಾಮಕೃಷ್ಣ ಪರಮಹಂಸರ, ವಿವೇಕಾನಂದರ, ಮಹಾಯೋಗಿ ವೇಮನ, ದಾಸರ ಪದಗಳು ಹಾಗೂ ಶರಣರ ವಚನಗಳನು ಸುಶ್ರಾವ್ಯವಾಗಿ ಹಾಡಿದರು. ಮುದ್ದಟನೂರು ತಿಪ್ಪೇಸ್ವಾಮಿ ಹಾರ್ಮೋನಿಯಂ ಹಾಗೂ ಜಿ.ಸುಧಾಕರ ತಬಲಾ ಸಾಥ್ ನೀಡಿದರು.