ಅಕ್ರಮ ಸಕ್ರಮ ಮಾಡಿಕೊಳ್ಳಲು ಅವಕಾಶ: ಬಾಲಕೃಷ್ಣ

| Published : Aug 14 2025, 01:00 AM IST

ಅಕ್ರಮ ಸಕ್ರಮ ಮಾಡಿಕೊಳ್ಳಲು ಅವಕಾಶ: ಬಾಲಕೃಷ್ಣ
Share this Article
  • FB
  • TW
  • Linkdin
  • Email

ಸಾರಾಂಶ

ನಾಗರಿಕರ ಮೇಲೆ ಇಚ್ಛಾಸಕ್ತಿ ಇರುವ ಸರ್ಕಾರ ಈ ರೀತಿ ಕಾರ್ಯಕ್ರಮಗಳಿಗೆ ಚಾಲನೆ ಕೊಡುತ್ತದೆ. ಆ.11ರಿಂದ ಸೆ. 1ವರೆಗೆ ಆಂದೋಲನ ನಡೆಯಲಿದ್ದು, ನಾಗರಿಕರು ಸದುಪಯೋಗ ಪಡೆದುಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮಾಗಡಿ

ಪುರಸಭೆ ವ್ಯಾಪ್ತಿಯ ನಾಗರಿಕರು ಸರ್ಕಾರ ಕೊಟ್ಟಿರುವ ಅವಕಾಶ ಬಳಸಿಕೊಂಡು ನಿಮ್ಮ ಆಸ್ತಿಗಳನ್ನು ಸಕ್ರಮ ಮಾಡಿಕೊಳ್ಳುವ ನಿಟ್ಟಿನಲ್ಲಿ ಇ-ಆಸ್ತಿ ಖಾತಾ ಮೂಲಕ ಎ ಮತ್ತು ಬಿ ಖಾತೆಯನ್ನಾಗಿ ಮಾಡಿಕೊಳ್ಳಲು ಸುವರ್ಣ ಅವಕಾಶವನ್ನು ನೀಡಲಾಗಿದ್ದು, ಇದರ ಸದುಪಯೋಗಪಡಿಸಿಕೊಳ್ಳಿ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಮನವಿ ಮಾಡಿದರು.

ಪುರಸಭೆಯಿಂದ ಇ- ಖಾತಾ ಎ ಮತ್ತು ಬಿ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾಗರಿಕರ ಮೇಲೆ ಇಚ್ಛಾಸಕ್ತಿ ಇರುವ ಸರ್ಕಾರ ಈ ರೀತಿ ಕಾರ್ಯಕ್ರಮಗಳಿಗೆ ಚಾಲನೆ ಕೊಡುತ್ತದೆ. ಆ.11ರಿಂದ ಸೆ. 1ವರೆಗೆ ಆಂದೋಲನ ನಡೆಯಲಿದ್ದು, ನಾಗರಿಕರು ಸದುಪಯೋಗ ಪಡೆದುಕೊಳ್ಳಬೇಕು. ಹಿಂದೆ ಪುರಸಭೆಯಲ್ಲಿ ಅಕ್ರಮ ಬಾರ್ ಖಾತೆಗಳು ಹಾಗೂ ಸರ್ಕಾರಿ ಜಮೀನಿನಲ್ಲಿ ನಿವೇಶನ ಅಕ್ರಮ ಖಾತೆ ಮಾಡಿಸಿಕೊಳ್ಳಲಾಗಿದೆ.

ಈಗ ಸರ್ಕಾರದಲ್ಲಿ ಕಾನೂನುಗಳು ಗಟ್ಟಿಯಾಗಿದ್ದು, ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡಿದ್ದರೆ ಯಾವುದೇ ಕಾರಣಕ್ಕೂ ಬಿಡುವ ಅವಕಾಶ ಕೊಡುವುದಿಲ್ಲ. ಕೆಲವು ನಿಬಂಧಗಳನ್ನು ಒಳಪಡಿಸಿ ಅಕ್ರಮ ನಿವೇಶನ ಹಾಗೂ ಮನೆ ನಿರ್ಮಾಣ ಮಾಡಿದವರಿಗೆ ಬಿ ಖಾತೆ ಕೊಡುವ ಮೂಲಕ ಪುರಸಭೆಗೆ ಸೇರಿಸಿಕೊಳ್ಳುವ ಕೆಲಸ ಮಾಡುತ್ತಿದೆ. ಪುರಸಭಾ ಸದಸ್ಯರು ವಾರ್ಡ್ ಗಳಿಗೆ ತೆರಳಿ ನಾಗರಿಕರಿಗೆ ಸರಿಯಾದ ಮಾಹಿತಿಯನ್ನು ನೀಡಿ ಎ ಅಥವಾ ಬಿ ಖಾತೆ ಮಾಡಿಸಿಕೊಳ್ಳಲು ತಿಳಿಸಬೇಕು. ಈ ಮೂಲಕ ತಮ್ಮ ಅಕ್ರಮ ಆಸ್ತಿಯನ್ನು ಸಕ್ರಮಗೊಳಿಸಿಕೊಳ್ಳಲು ಅವಕಾಶ ಕೊಟ್ಟಿದ್ದು ಇದರ ಪ್ರಯೋಜನವನ್ನು ಪಡೆದುಕೊಳ್ಳಿ ಬಾರ್ ಖಾತೆಗಳನ್ನು ಮಾಡಿಸಿಕೊಂಡಿದ್ದರು ಕೂಡ ಬಿ ಖಾತೆಗೆ ಅರ್ಜಿ ಸಲ್ಲಿಸುವ ಕೆಲಸ ಮಾಡಬೇಕು ಎಂದು ಶಾಸಕರು ತಿಳಿಸಿದರು.

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ:

ಎ ಅಥವಾ ಬಿ ಖಾತೆ ಮಾಡಿಸಿಕೊಳ್ಳಲು ಅರ್ಜಿದಾರರು ಮೊದಲು ಸೈಬರ್ ಅಥವಾ ಪುರಸಭೆಯಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಅನುಮೋದನೆ ಪಡೆದುಕೊಂಡ ನಂತರ ದಾಖಲಾತಿಗಳು ನೀಡಿ ಖಾತೆಯನ್ನು ಪಡೆಯಬಹುದು. ನೇರವಾಗಿ ದಾಖಲಾತಿ ನೀಡಿದರೆ ಖಾತೆ ಮಾಡಲು ಬರುವುದಿಲ್ಲ. ವಾರ್ಡ್ ಗಳಲ್ಲಿ ಬಂದಾಗ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದವರಿಗೆ ಹೆಚ್ಚು ಅನುಕೂಲವಾಗುತ್ತದೆ. ಇದರ ಸದುಪಯೋಗವನ್ನು ನಾಗರಿಕರು ಪಡೆದುಕೊಳ್ಳಿ. ಒಂದು ವೇಳೆ ಇದರಲ್ಲಿ ದೋಷಗಳು ಇದ್ದರೆ ಪ್ರತಿ ತಿಂಗಳು ಸೋಮವಾರ ಸಾರ್ವಜನಿಕರ ಅಹವಾಲು ಸ್ವೀಕರಿಸಲಿದ್ದು, ಖಾತೆ ವಿಚಾರದಲ್ಲಿ ಸಮಸ್ಯೆ ಇದ್ದರೆ ಅದನ್ನು ಬಗೆಹರಿಸುವ ಕೆಲಸವನ್ನು ಮಾಡುತ್ತೇವೆ. ಈಗ ಅರ್ಜಿಗಳನ್ನು ಸಲ್ಲಿಸಿ ಎಂದು ಬಾಲಕೃಷ್ಣ ತಿಳಿಸಿದರು‌.

ಗ್ಯಾರಂಟಿ ಜತೆಗೆ ಪಟ್ಟಣದ ಅಭಿವೃದ್ಧಿ:

ಐದನೇ ಬಾರಿಗೆ ಶಾಸಕರನ್ನಾಗಿ ನನ್ನನ್ನು ಆಯ್ಕೆ ಮಾಡಿದ್ದು, ನಿಮ್ಮ ಋಣ ತೀರಿಸುವ ನಿಟ್ಟಿನಲ್ಲಿ ಐದು ಗ್ಯಾರಂಟಿಗಳ ಜತೆ ಪಟ್ಟಣದ ಅಭಿವೃದ್ಧಿ ಕೂಡ ಕೈಗೆತ್ತಿಕೊಳ್ಳಲಾಗುತ್ತಿದೆ. ಮಹತ್ವಕಾಂಕ್ಷಿ ಯೋಜನೆಯಾಗಿರುವ ಶ್ರೀರಂಗ ಏತ ನೀರಾವರಿ ಯೋಜನೆಗೆ ಸೆ. 29ರಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಂದ ಚಾಲನೆ ಕೊಡಲಾಗುತ್ತದೆ ಎಂದು ಬಾಲಕೃಷ್ಣ ತಿಳಿಸಿದರು.

ಪುರಸಭೆ ಅಧ್ಯಕ್ಷೆ ರಮ್ಯಾ ನರಸಿಂಹಮೂರ್ತಿ ಹೊಸದಾಗಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ ಬಿ ಖಾತೆ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಪುರಸಭೆ ಉಪಾಧ್ಯಕ್ಷ ರಿಯಾಜ್, ಸ್ಥಾಯಿ ಸಮಿತಿಯ ಅಧ್ಯಕ್ಷ ಶಿವಕುಮಾರ್, ಸದಸ್ಯರಾದ ವಿಜಯ ರೂಪೇಶ್, ಅನಿಲ್ ಕುಮಾರ್, ಅಶ್ವಥ್, ರಹಮತ್, ಹೇಮಲತಾ, ನಾಮಿನಿ ಸದಸ್ಯ ಆನಂದ, ಅಬಿದ್, ಪುರಸಭಾ ಮುಖ್ಯಧಿಕಾರಿ ಶ್ರೀನಿವಾಸ್ ಸೇರಿದಂತೆ ಪುರಸಭೆ ಅಧಿಕಾರಿಗಳು ಪಟ್ಟಣದ ನಾಗರಿಕರು ಭಾಗವಹಿಸಿದ್ದರು.