ಸಾರಾಂಶ
ಮಂಗಳೂರು: ರಾಜ್ಯದ ಸಾಮಾಜಿಕ, ಆರ್ಥಿಕ ಸಮೀಕ್ಷೆಯನ್ನು ಬಿಜೆಪಿ ನಾಯಕರು ವಿರೋಧಿಸುತ್ತಿರುವುದು, ಇದಕ್ಕೆ ಸಹಕಾರ ಕೊಡಬೇಡಿ ಎಂದು ಕರೆ ನೀಡುವುದು ಸಂವಿಧಾನ ವಿರೋಧಿ ಕೆಲಸ. ಸಂವಿಧಾನಾತ್ಮಕವಾಗಿ ನಡೆಯುತ್ತಿರುವ ಸಮೀಕ್ಷೆಯ ಬಗ್ಗೆ ದಾರಿ ತಪ್ಪಿಸುವ ಕೆಲಸ ಖಂಡನೀಯ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಹಾಗೂ ರಾಜ್ಯ ಕಾಂಗ್ರೆಸ್ ಒಬಿಸಿ ಘಟಕದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ತೀವ್ರವಾಗಿ ಖಂಡಿಸಿದ್ದಾರೆ.ಮಂಗಳೂರಿನಲ್ಲಿ ಬುಧವಾರ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮೈಸೂರು ವಿಭಾಗದ ಹಿಂದುಳಿದ ವರ್ಗಗಳ ಮುಖಂಡರ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.ಸಮೀಕ್ಷೆಯನ್ನು ವಿರೋಧಿಸುತ್ತಿರುವ ಬಿಜೆಪಿ ನಾಯಕರಾದ ಪ್ರಹ್ಲಾದ್ ಜೋಶಿ, ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ, ಅಶ್ವತ್ಥ ನಾರಾಯಣ ಮತ್ತು ಆರ್. ಅಶೋಕ್ ಅವರ ಹೆಸರನ್ನು ಉಲ್ಲೇಖಿಸಿ ವಾಗ್ದಾಳಿ ನಡೆಸಿದ ಅವರು, 1951ರಲ್ಲಿ ಸಂವಿಧಾನ ತಿದ್ದುಪಡಿ ಮಾಡುವ ಮೂಲಕ ಸಾಮಾಜಿಕ, ಆರ್ಥಿಕ ಸಮೀಕ್ಷೆ ನಡೆಸುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಲಾಗಿದೆ. ಆದರೆ ಸಂವಿಧಾನದ ಮೇಲೆ ಶಪಥ ಮಾಡಿ ಅಧಿಕಾರಕ್ಕೇರಿದ ಬಿಜೆಪಿ ನಾಯಕರು ಯಾವ ಆಧಾರದಲ್ಲಿ ಈ ಸಮೀಕ್ಷೆಯನ್ನು ವಿರೋಧಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು.ಬಿಜೆಪಿಯ ಹಿರಿಯ ನಾಯಕ ಯಡಿಯೂರಪ್ಪ ಮತ್ತು ಜೆಡಿಎಸ್‌ನ ದೇವೇಗೌಡರಂಥ ಪಕ್ವ ನಾಯಕರು ಸಮೀಕ್ಷೆ ವಿರೋಧಿಸಿ ಯಾವುದೇ ಹೇಳಿಕೆ ನೀಡಿಲ್ಲ. ಅವರಿಗೆ ಇದರ ಹಿಂದಿನ ಉದ್ದೇಶ ಸ್ಪಷ್ಟವಾಗಿದೆ. ಇದನ್ನು ಉಳಿದವರು ಅರ್ಥ ಮಾಡಿಕೊಳ್ಳಬೇಕು ಎಂದು ಮಧು ಬಂಗಾರಪ್ಪ ಹೇಳಿದರು.
ಮಂಗಳವಾರ ರಾತ್ರಿ 8.30ರ ವೇಳೆಗೆ ರಾಜ್ಯಾದ್ಯಂತ ಸರಾಸರಿ ಶೇ. 81ರಷ್ಟು ಸಮೀಕ್ಷೆ ಪೂರ್ಣಗೊಂಡಿದ್ದು, ಬೆಂಗಳೂರಿನಲ್ಲಿ 38%, ದಕ್ಷಿಣ ಕನ್ನಡದಲ್ಲಿ 68% ಹಾಗೂ ಉಡುಪಿಯಲ್ಲಿ 62% ಪ್ರಗತಿ ದಾಖಲಾಗಿದೆ. ಮೈಸೂರಿನಲ್ಲಿ ದಸರಾ ಕಾರ್ಯಕ್ರಮಗಳ ಕಾರಣದಿಂದ ವಿಳಂಬವಾಗಿದೆ. ಅ.18ರವರೆಗೆ ಸಮೀಕ್ಷೆ ಅವಧಿ ವಿಸ್ತರಣೆ ಮಾಡಿರುವುದರಿಂದ ಶಿಕ್ಷಕರಿಗೆ ರಜಾ ಸೌಲಭ್ಯವನ್ನು ಹೊಂದಾಣಿಕೆ ಮಾಡಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.ಶಿಕ್ಷಣದ ಮೇಲೆ ಪರಿಣಾಮವಿಲ್ಲ: ಶಿಕ್ಷಣ ಹಕ್ಕು ಕಾಯ್ದೆಯ ಪ್ರಕಾರ 220 ಬೋಧನಾ ದಿನಗಳು ಅಗತ್ಯವಿದ್ದು, ಸದ್ಯಕ್ಕೆ 240 ದಿನಗಳು ಲಭ್ಯವಿವೆ. ಈಗ ಸಮೀಕ್ಷೆಗಾಗಿ ಶಾಲೆಗಳಿಗೆ ರಜೆ ನೀಡಿದರೂ ಬೋಧನೆ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ ಎಂದು ಮಧು ಬಂಗಾರಪ್ಪ ತಿಳಿಸಿದರು.ದಕ್ಷಿಣ ಕನ್ನಡ, ಉಡುಪಿ ಮತ್ತು ಬೆಂಗಳೂರಿನಲ್ಲಿ ಸುಮಾರು 15,000ರಿಂದ 18,000 ಜನ ವಾಸ್ತವ್ಯದಲ್ಲಿ ಇಲ್ಲದಿರುವುದು (ವಿದೇಶದಲ್ಲಿ ಅಥವಾ ಬೇರೆಡೆಗೆ ತೆರಳಿರುವುದು) ಸಮೀಕ್ಷೆಗೆ ಕೊಂಚ ಹಿನ್ನಡೆ ತಂದಿದೆ. ಆದರೂ ಪ್ರಯತ್ನ ಮುಂದುವರಿದಿದೆ ಎಂದ ಮಧು ಬಂಗಾರಪ್ಪ, ಸಮೀಕ್ಷೆಗೆ ಸಹಕರಿಸದವರ ಕುರಿತು, ನಿಯಮಾವಳಿಗಳ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್. ಸುದರ್ಶನ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮುಖಂಡರಾದ ಗೋಪಾಲಕೃಷ್ಣ, ಎ.ಎಸ್. ರವಿ, ಭೀಮಣ್ಣ, ಪ್ರದೀಪ್ ಈಶ್ವರ್, ಪಿ.ವಿ. ಮೋಹನ್, ಅಶೋಕ್ ಕುಮಾರ್, ಪದ್ಮರಾಜ್, ವಿಶ್ವಾಸ್‌ದಾಸ್, ಮಂಜುನಾಥ್ ಪೂಜಾರಿ, ರಕ್ಷಿತ್ ಶಿವರಾಂ, ರಾಜು ಪೂಜಾರಿ, ಮಮತಾ ಗಟ್ಟಿ ಮೊದಲಾದವರು ಇದ್ದರು.ಸಮೀಕ್ಷೆ ವಿರೋಧಿಸುವುದು ಜನವಿರೋಧಿ ಕೃತ್ಯ: ಸುದರ್ಶನ್
ರಾಜ್ಯದಲ್ಲಿ ನಡೆಯುತ್ತಿರುವ ಸಮೀಕ್ಷೆ ವಿರೋಧಿಸುವುದು ಜನವಿರೋಧಿ ಕೃತ್ಯ. ಬಿಜೆಪಿಯ ಪ್ರಹ್ಲಾದ್ ಜೋಶಿ ಅವರಂಥ ಸಂವಿಧಾನಾತ್ಮಕ ಹುದ್ದೆಯಲ್ಲಿರುವ ನಾಯಕರು ಸಮೀಕ್ಷೆಗೆ ವಿರೋಧ ವ್ಯಕ್ತಪಡಿಸುವುದು ಬೇಜವಾಬ್ದಾರಿಯ ನಡೆ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಆಕ್ಷೇಪಿಸಿದರು.ಸಮೀಕ್ಷೆ ಬಗ್ಗೆ ಬಿಜೆಪಿ ನಾಯಕರು ರಾಜಕೀಯ ಕಾರಣಕ್ಕಾಗಿ ಮಾತ್ರವೇ ವಿರೋಧಿಸುತ್ತಿದ್ದಾರೆ. ಇಂತಹ ವಿರೋಧ ಸಂವಿಧಾನ ಹಾಗೂ ಜನ ವಿರೋಧಿ ಕೃತ್ಯ ಎಂದರು.ರಾಜ್ಯದಲ್ಲಿ ನಡೆಯುತ್ತಿರುವುದು ಜಾತಿ ಗಣತಿ ಅಲ್ಲ. ಅದು ರಾಜ್ಯದ ಏಳು ಕೋಟಿ ಜನರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ. ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ನಡೆಸುವ ಜಾತಿ ಸಮೀಕ್ಷೆಗೂ ನಾವು ಸಹಕಾರ ನೀಡುತ್ತೇವೆ. ಅದಕ್ಕೆ ನಮ್ಮ ವಿರೋಧ ಇರಲ್ಲ, ಮಾಡಲೂಬಾರದು ಎಂದು ಸುದರ್ಶನ್ ಹೇಳಿದರು.