ಜೋಶಿ ಎದುರು ಯುವ ಕಾಂಗ್ರೆಸ್ಸಗ ವಿನೋದ ಅಸೂಟಿ

| Published : Mar 22 2024, 01:09 AM IST

ಜೋಶಿ ಎದುರು ಯುವ ಕಾಂಗ್ರೆಸ್ಸಗ ವಿನೋದ ಅಸೂಟಿ
Share this Article
  • FB
  • TW
  • Linkdin
  • Email

ಸಾರಾಂಶ

ವಿಧಾನಸಭೆ ಚುನಾವಣೆಯಲ್ಲಿ ಕ್ಷೇತ್ರ ಬಿಟ್ಟುಕೊಟ್ಟಿದ್ದ ವಿನೋದ ಅಸೂಟಿಗೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಿಸುವ ಮೂಲಕ ತ್ಯಾಗಕ್ಕೆ ಕಾಂಗ್ರೆಸ್‌ ಮನ್ನಣೆ ನೀಡಿದೆ. ಅಹಿಂದ ಮತಗಳ ಮೇಲೆ ಕಣ್ಣಿಟ್ಟರುವ ಕಾಂಗ್ರೆಸ್‌ ಒಬಿಸಿಗೆ ಮಣೆ ಹಾಕಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ವಿಧಾನಸಭೆ ಚುನಾವಣೆಯಲ್ಲಿ ಕ್ಷೇತ್ರ ಬಿಟ್ಟುಕೊಟ್ಟಿದ್ದ ವಿನೋದ ಅಸೂಟಿಗೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಿಸುವ ಮೂಲಕ ತ್ಯಾಗಕ್ಕೆ ಕಾಂಗ್ರೆಸ್‌ ಮನ್ನಣೆ ನೀಡಿದೆ. ಅಹಿಂದ ಮತಗಳ ಮೇಲೆ ಕಣ್ಣಿಟ್ಟರುವ ಕಾಂಗ್ರೆಸ್‌ ಒಬಿಸಿಗೆ ಮಣೆ ಹಾಕಿದ್ದು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿರುದ್ಧ ವಿನೋದ ಅಸೂಟಿ ಕಣಕ್ಕಿಳಿದಿದ್ದಾರೆ.

1996ರಿಂದ ಈ ವರೆಗೆ ನಡೆದ ಏಳು ಚುನಾವಣೆಗಳಲ್ಲಿ ಕಾಂಗ್ರೆಸ್‌ ಇಲ್ಲಿ ಗೆಲುವು ಕಂಡಿಲ್ಲ. ಈ ಸಲ ಹೇಗಾದರೂ ಮಾಡಿ ಗೆಲ್ಲಬೇಕೆಂಬ ಇರಾದೆ ಕಾಂಗ್ರೆಸ್ಸಿನದು. ಇಲ್ಲಿ ಟಿಕೆಟ್‌ ಘೋಷಣೆ ಮಾಡಬೇಕೆಂದರೆ ಹಾವೇರಿ-ಗದಗ ಹಾಗೂ ಧಾರವಾಡ ಎರಡು ಕ್ಷೇತ್ರಗಳು ತಳಕು ಹಾಕಿಕೊಳ್ಳುತ್ತವೆ. ಹಾವೇರಿ- ಗದಗ ಕ್ಷೇತ್ರಕ್ಕೆ ಒಬಿಸಿಗೆ ನೀಡಿದರೆ, ಧಾರವಾಡಕ್ಕೆ ಲಿಂಗಾಯತ ಸಮುದಾಯಕ್ಕೆ ಕೊಡಲಾಗುತ್ತದೆ. ಅದೇ ರೀತಿ ಈ ಸಲವೂ ಇದೇ ಗೊಂದಲ ಶುರುವಾಗಿತ್ತು. ಆದರೆ ಮೊದಲ ಪಟ್ಟಿಯಲ್ಲಿ ಹಾವೇರಿ-ಗದಗ ಕ್ಷೇತ್ರಕ್ಕೆ ಆನಂದ ಸ್ವಾಮಿ ಗಡ್ಡದೇವರ ಮಠರಿಗೆ ಟಿಕೆಟ್‌ ಘೋಷಣೆ ಮಾಡಲಾಗಿತ್ತು. ಧಾರವಾಡಕ್ಕೆ ಒಬಿಸಿಗೆ ಕೊಡುತ್ತಾರೆಯೋ ಅಥವಾ ಲಿಂಗಾಯತ ಸಮುದಾಯಕ್ಕೆ ಕೊಡುತ್ತಾರೋ ಎಂಬುದು ಕುತೂಹಲಕ್ಕೆ ಕಾರಣವಾಗಿತ್ತು. ಲಿಂಗಾಯತ ಸಮುದಾಯದಲ್ಲಿ ವಿಪ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ಶಾಸಕ ವಿನಯ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ, ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅಳಿಯ ರಜತ್‌ ಉಳ್ಳಾಗಡ್ಡಿಮಠ ಹೆಸರು ರೇಸ್‌ನಲ್ಲಿದ್ದವು. ಕಳೆದ ವಾರದಿಂದ ಬಿಜೆಪಿಯಲ್ಲಿರುವ ಮಹೇಶ ನಾಲವಾಡ ಹೆಸರು ಕೂಡ ಕೇಳಿ ಬರುತ್ತಿತ್ತು. ಇನ್ನು ಒಬಿಸಿಯಲ್ಲಿ ವಿನೋದ ಅಸೂಟಿ ಹಾಗೂ ಲೋಹಿತ ನಾಯ್ಕರ ಹೆಸರು ಕೇಳಿ ಬಂದಿದ್ದವು. ಆದರೆ ಅಸೂಟಿ ಹೆಸರೇ ಮುಂಚೂಣಿಯಲ್ಲಿತ್ತು.ಅಸೂಟಿಗೆ ಮಣೆ:ಇದೀಗ ಅಸೂಟಿ ಹೆಸರು ಅಖೈರುಗೊಳಿಸುವ ಮೂಲಕ ಒಬಿಸಿಗೆ ಕಾಂಗ್ರೆಸ್‌ ಜೈ ಎಂದಂತಾಗಿದೆ. ವಿನೋದ ಅಸೂಟಿ ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದಾರೆ. ಜತೆಗೆ ಕಳೆದ 2018ರಲ್ಲಿ ನವಲಗುಂದ ಕ್ಷೇತ್ರದಿಂದ ಕಣಕ್ಕಿಳಿದು ಸಾಕಷ್ಟು ಪೈಪೋಟಿ ಕೂಡ ನೀಡಿದ್ದರು. ಆದರೆ 2023ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಪಕ್ಷಕ್ಕೆ ಬಂದಿದ್ದ ಎನ್‌.ಎಚ್‌. ಕೋನರಡ್ಡಿಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದರು. ಇವರ ತ್ಯಾಗಕ್ಕೆ ರಾಜ್ಯ ಸರ್ಕಾರ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸ್ಥಾನವೂ ಇತ್ತೀಚಿಗಷ್ಟೇ ನೀಡಿತ್ತು. ಇದೀಗ ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮಾಡಿದೆ.

ಪಕ್ಷ ಸಂಘಟನೆ ಮಾಡಿ ಸೈ ಎನಿಸಿಕೊಂಡಿರುವ ಅಸೂಟಿಗೆ ಟಿಕೆಟ್‌ ಸಿಕ್ಕಿರುವುದು ಯುವಕರಲ್ಲಿ ಸಂತಸವನ್ನುಂಟು ಮಾಡಿದೆ. 1996ರಿಂದಲೇ ಕಾಂಗ್ರೆಸ್‌ ಇಲ್ಲಿ ಗೆಲುವು ಕಂಡಿಲ್ಲ. ಮೂರು ಚುನಾವಣೆಗಳಲ್ಲಿ ವಿಜಯ ಸಂಕೇಶ್ವರ ಬಿಜೆಪಿಯಿಂದ ಆಯ್ಕೆಯಾಗಿದ್ದರೆ, ನಂತರದ ನಾಲ್ಕು ಚುನಾವಣೆಯಲ್ಲಿ ಹಾಲಿ ಸಂಸದ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿಜಯ ಪತಾಕೆ ಹಾರಿಸಿದ್ದಾರೆ. ಇದೀಗ ಬಿಜೆಪಿಯಿಂದ ಜೋಶಿ ಅವರೇ ಕಣಕ್ಕಿಳಿದಿದ್ದು, ಅವರಿಗೆ ಅಸೂಟಿ ಎಷ್ಟರ ಮಟ್ಟಿಗೆ ಠಕ್ಕರ್‌ ಕೊಡುತ್ತಾರೆ ಎಂಬುದನ್ನು ಕಾಯ್ದು ನೋಡಬೇಕು. ಇದರೊಂದಿಗೆ ಕ್ಷೇತ್ರದಲ್ಲಿ ಚುನಾವಣೆ ರಂಗು ಏರಿದಂತಾಗಿದೆ.ಪಕ್ಷ ನನಗೆ ದೊಡ್ಡ ಜವಾಬ್ದಾರಿ ನೀಡಿದೆ. ಅದಕ್ಕೆ ತಕ್ಕಂತೆ ಪಕ್ಷದ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದ ವಿಜಯ ಪತಾಕೆ ಹಾರಿಸುತ್ತೇನೆ. ಗೆಲ್ಲುವ ವಿಶ್ವಾಸವಿದೆ ಎಂದು ವಿನೋದ ಅಸೂಟಿ ಹೇಳಿದರು.