ಪ್ರತಿಪಕ್ಷ ನಾಯಕ ಅಶೋಕ್ ಸ್ಪೀಕರ್‌ಗೆ ಪತ್ರ ಬರೆದಿರುವ ಬಗ್ಗೆ ಬಿಜೆಪಿಯಲ್ಲಿ ಅಸಮಾಧಾನ

| N/A | Published : Apr 02 2025, 01:01 AM IST / Updated: Apr 02 2025, 06:58 AM IST

R Ashok
ಪ್ರತಿಪಕ್ಷ ನಾಯಕ ಅಶೋಕ್ ಸ್ಪೀಕರ್‌ಗೆ ಪತ್ರ ಬರೆದಿರುವ ಬಗ್ಗೆ ಬಿಜೆಪಿಯಲ್ಲಿ ಅಸಮಾಧಾನ
Share this Article
  • FB
  • TW
  • Linkdin
  • Email

ಸಾರಾಂಶ

ವಿಧಾನಸಭೆಯಿಂದ ಶಾಸಕರ ಅಮಾನತು ಖಂಡಿಸಿ ಬುಧವಾರ ವಿಧಾನಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ಪ್ರತಿಭಟನೆ ನಡೆಸುವ ನಿರ್ಧಾರ ಕೈಗೊಂಡ ಬಳಿಕ ಅಮಾನತು ಆದೇಶ ವಾಪಸ್ ಪಡೆಯುವಂತೆ ಕೋರಿ ಪ್ರತಿಪಕ್ಷ ನಾಯಕ ಅಶೋಕ್ ಸ್ಪೀಕರ್‌ಗೆ ಪತ್ರ ಬರೆದಿರುವ ಬಗ್ಗೆ ಬಿಜೆಪಿಯಲ್ಲಿ ಅಸಮಾಧಾನ ವ್ಯಕ್ತವಾಗಿದೆ.

 ಬೆಂಗಳೂರು :  ವಿಧಾನಸಭೆಯಿಂದ ಶಾಸಕರ ಅಮಾನತು ಖಂಡಿಸಿ ಬುಧವಾರ ವಿಧಾನಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ಪ್ರತಿಭಟನೆ ನಡೆಸುವ ನಿರ್ಧಾರ ಕೈಗೊಂಡ ಬಳಿಕ ಅಮಾನತು ಆದೇಶ ವಾಪಸ್ ಪಡೆಯುವಂತೆ ಕೋರಿ ಪ್ರತಿಪಕ್ಷ ನಾಯಕ ಅಶೋಕ್ ಸ್ಪೀಕರ್‌ಗೆ ಪತ್ರ ಬರೆದಿರುವ ಬಗ್ಗೆ ಬಿಜೆಪಿಯಲ್ಲಿ ಅಸಮಾಧಾನ ವ್ಯಕ್ತವಾಗಿದೆ.

ಪತ್ರ ಬರೆಯುವುದೇ ಆಗಿದ್ದರೆ ಅಧಿವೇಶನ ಮುಗಿದ ಬೆನ್ನಲ್ಲೇ ಬರೆಯಬೇಕಿತ್ತು. ಈಗ ಪ್ರತಿಭಟನೆ ನಡೆಯುವ ಹಿಂದಿನ ದಿನ ಪತ್ರ ಬರೆಯುವ ಮೂಲಕ ಅಶೋಕ್ ಅವರು ಹೋರಾಟದ ತೀವ್ರತೆ ಕಡೆಗಣಿಸಿದಂತಾಗಿದೆ ಎಂಬ ಮಾತು ಬಿಜೆಪಿ ಮುಖಂಡರಿಂದ ಕೇಳಿಬಂದಿದೆ.

ಅಷ್ಟಕ್ಕೂ ಅಶೋಕ್ ಅವರಿಗೆ ಶಾಸಕರ ಅಮಾನತು ಆದೇಶ ವಾಪಸ್ ಪಡೆಯುವಂತೆ ಕೋರಿ ಸ್ಪೀಕರ್‌ಗೆ ಪತ್ರ ಬರೆಯುವ ಉದ್ದೇಶವೇ ಇರಲಿಲ್ಲ. ಮಂಗಳವಾರ ಬೆಳಗ್ಗೆ ಬಿಜೆಪಿಯ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ಅವರು ಸ್ಪೀಕರ್‌ ಯು.ಟಿ.ಖಾದರ್ ಅವರಿಗೆ ಪತ್ರ ಬರೆದು 18 ಶಾಸಕರ ಉಚ್ಚಾಟನೆ ಆದೇಶ ವಾಪಸ್ ಪಡೆಯುವಂತೆ ಮನವಿ ಮಾಡಿದರು. ಆ ಪತ್ರ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಅಶೋಕ್ ಅವರೂ ಸ್ಪೀಕರ್‌ಗೆ ಪತ್ರ ಬರೆದು, ಅಮಾನತು ಆದೇಶವನ್ನು ಮರುಪರಿಶೀಲಿಸಬೇಕು ಮತ್ತು ಅಮಾನತು ಆದೇಶವನ್ನು ವಾಪಸ್‌ ಪಡೆಯಬೇಕು ಎಂದು ಕೋರಿದರು.

ಬುಧವಾರ ಬೆಳಗ್ಗೆ ಪ್ರತಿಭಟನೆ ನಡೆಸುವ ಬಗ್ಗೆ ಎರಡು ದಿನಗಳ ಹಿಂದೆಯೇ ನಿರ್ಧಾರ ಕೈಗೊಳ್ಳಲಾಗಿದೆ. ಈ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮುಖಂಡರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಂಡಿದ್ದರು. ಆ ಸಭೆಗೆ ಅಶೋಕ್ ಅವರನ್ನು ಆಹ್ವಾನಿಸಿದ್ದರೂ ಗೈರಾಗಿದ್ದರು. ಇದೀಗ ಏಕಾಏಕಿ ಸ್ಪೀಕರ್‌ಗೆ ಪತ್ರ ಬರೆದಿರುವುದು ಪಕ್ಷಕ್ಕೆ ಮುಜುಗರ ಉಂಟು ಮಾಡಿದೆ. ಪ್ರತಿಭಟನೆ ಮುಗಿದ ಬಳಿಕವಾದರೂ ಪತ್ರ ಬರೆಯಬೇಕಿತ್ತು ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಬೇಸರ ವ್ಯಕ್ತಪಡಿಸಿದರು.