ಸಾರಾಂಶ
ತಾಂತ್ರಿಕ ಅರ್ಹತೆ ಇಲ್ಲದವರಿಗೂ ಮೋಟಾರು ವಾಹನ ನಿರೀಕ್ಷಕರ ಹುದ್ದೆಗೆ ನೇಮಕಗೊಳ್ಳುವ ಉದ್ದೇಶದೊಂದಿಗೆ ಸಾರಿಗೆ ಇಲಾಖೆಯ ಸಿ ವರ್ಗದ ಸಿಬ್ಬಂದಿ, ಅರ್ಹ ಡಿಪ್ಲೋಮಾ ಕೋರ್ಸ್ ಪ್ರಮಾಣ ಪತ್ರ ಪಡೆಯಲು ಸಂಜೆ ಕಾಲೇಜಿಗೆ ನಕಲಿ ಪ್ರಮಾಣಪತ್ರ ನೀಡಿ ಸೇರ್ಪಡೆಯಾಗುತ್ತಿರುವ ಆರೋಪ ಕೇಳಿ ಬಂದಿದೆ.
ಬೆಂಗಳೂರು : ತಾಂತ್ರಿಕ ಅರ್ಹತೆ ಇಲ್ಲದವರಿಗೂ ಮೋಟಾರು ವಾಹನ ನಿರೀಕ್ಷಕರ ಹುದ್ದೆಗೆ ನೇಮಕಗೊಳ್ಳುವ ಉದ್ದೇಶದೊಂದಿಗೆ ಸಾರಿಗೆ ಇಲಾಖೆಯ ಸಿ ವರ್ಗದ ಸಿಬ್ಬಂದಿ, ಅರ್ಹ ಡಿಪ್ಲೋಮಾ ಕೋರ್ಸ್ ಪ್ರಮಾಣ ಪತ್ರ ಪಡೆಯಲು ಸಂಜೆ ಕಾಲೇಜಿಗೆ ನಕಲಿ ಪ್ರಮಾಣಪತ್ರ ನೀಡಿ ಸೇರ್ಪಡೆಯಾಗುತ್ತಿರುವ ಆರೋಪ ಕೇಳಿಬಂದಿದೆ.
ಕೇಂದ್ರ ಮೋಟಾರು ವಾಹನ ಕಾಯ್ದೆಯಂತೆ ಮೋಟಾರು ವಾಹನ ನಿರೀಕ್ಷಕ ಹುದ್ದೆಗೆ ನೇಮಕವಾಗಬೇಕೆಂದರೆ ತಾಂತ್ರಿಕ ಶಿಕ್ಷಣದಲ್ಲಿ ಕನಿಷ್ಠ 2ರಿಂದ 3 ವರ್ಷಗಳ ಡಿಪ್ಲೋಮಾ ಮಾಡಿರಬೇಕು. ಆದರೆ, ಸಾರಿಗೆ ಇಲಾಖೆಯು ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಸಿ ವರ್ಗದ (ಗುಮಾಸ್ತ-ವಾಹನ ಚಾಲಕರು) ನೌಕರರಿಗೆ ನೇಮಕಾತಿಯಲ್ಲಿ ಶೇ. 5ರಷ್ಟು ಮೀಸಲಾತಿ ನೀಡಿ ಮೋಟಾರು ವಾಹನ ನಿರೀಕ್ಷಕರನ್ನಾಗಿ ಮಾಡಲು ಮುಂದಾಗಿದೆ. ಅದಕ್ಕಾಗಿ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಸಿ ವರ್ಗದ ನೌಕರರಿಗೆ ನಿಗದಿತ ಕಾಲೇಜಿನಲ್ಲಿ ಡಿಪ್ಲೋಮಾ ಕೋರ್ಸ್‌ಗಳನ್ನು ಮಾಡಲು ಅವಕಾಶ ನೀಡಲಾಗಿದೆ.
ಆದರೆ, ನಿಗದಿತ ಕಾಲೇಜಿಗೆ ಸೇರಲು ಈ ಹಿಂದೆ ತಾಂತ್ರಿಕವಾಗಿ ಕೆಲಸ ಮಾಡಿದ ಅನುಭವ ಪತ್ರ ನೀಡಬೇಕು. ಆದರೆ, ಆ ಅನುಭವ ಪತ್ರವನ್ನೇ ನಕಲಿ ಮಾಡುತ್ತಿರುವ ಸಿಬ್ಬಂದಿ, ನಕಲಿ ಪ್ರಮಾಣಪತ್ರವನ್ನು ಸಲ್ಲಿಸಿ ಕಾಲೇಜಗಳಿಗೆ ಭರ್ತಿ ಪಡೆಯುತ್ತಿದ್ದಾರೆ. ಈಗಾಗಲೇ 50ಕ್ಕೂ ಹೆಚ್ಚಿನ ಸಿಬ್ಬಂದಿ ಈ ರೀತಿ ನಕಲಿ ಪ್ರಮಾಣಪತ್ರ ನೀಡಿ ಕಾಲೇಜುಗಳಿಗೆ ಭರ್ತಿಯಾಗಿದ್ದಾರೆ. ಕೆಲವರು ಈಗಾಗಲೇ ಡಿಪ್ಲೋಮಾ ಪದವಿಯನ್ನೂ ಪೂರ್ಣಗೊಳಿಸಿ ಪ್ರಮಾಣಪತ್ರ ಪಡೆದಿದ್ದಾರೆ. ಹೀಗೆ ನಕಲಿ ಪ್ರಮಾಣಪತ್ರ ನೀಡಿ ಪದವಿ ಪಡೆಯುತ್ತಿರುವುದರಿಂದ ನೈಜ ಡಿಪ್ಲೋಮಾ ಪದವಿಧರರಿಗೆ ಅನ್ಯಾಯವಾಗುತ್ತಿದೆ. ಹಾಗೆಯೇ, ಇಲಾಖಾ ಮೀಸಲಾತಿ ನೀಡುವುದರಿಂದ ಅಕ್ರಮ ನಡೆಯುತ್ತಿದೆ. ಈ ಬಗ್ಗೆ ಸೂಕ್ತ ತನಿಖೆಗೆ ಆದೇಶಿಸುವಂತೆ ರಾಜ್ಯಪಾಲರಿಗೂ ದೂರು ಸಲ್ಲಿಸಲಾಗಿದೆ ಎಂದು ಡಿಪ್ಲೋಮಾ ಪಧವೀಧರ ಪ್ರಸಾದ್ ಎಂಬುವವರು ತಿಳಿಸಿದ್ದಾರೆ.
ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ ಮೀಸಲಾತಿ?
ಕ್ಲರಿಕಲ್ ಹುದ್ದೆಯಲ್ಲಿ ಕೆಲಸ ಮಾಡುತ್ತಿರುವವರಿಗೆ ಮೋಟಾರು ವಾಹನ ನಿರೀಕ್ಷಕ ಹುದ್ದೆಗೆ ಬಡ್ತಿ ನೀಡುವ ಉದ್ದೇಶದೊಂದಿಗೆ ಸಾರಿಗೆ ಇಲಾಖೆ ಕಳೆದ ವರ್ಷ ಸರ್ಕಾರದ ಅನುಮತಿ ಪಡೆದು ನೇಮಕಾತಿ ನಿಯಮದಲ್ಲಿ ಬದಲಾವಣೆ ತಂದಿದೆ. ಅದಕ್ಕಾಗಿ ಜಲಸಂಪನ್ಮೂಲ ಮತ್ತು ಲೋಕೋಪಯೋಗಿ ಇಲಾಖೆಯಲ್ಲಿರುವಂತೆ ಇಲಾಖಾ ಸಿಬ್ಬಂದಿಗೆ ನೇಮಕಾತಿಯಲ್ಲಿ ಮೀಸಲಾತಿ ನೀಡುವ ವ್ಯವಸ್ಥೆಯನ್ನು ಸಾರಿಗೆ ಇಲಾಖೆಯಲ್ಲೂ ಜಾರಿಗೊಳಿಸುವಂತೆ ಕೋರಿತ್ತು.
ಆದರೆ, ಜಲಸಂಪನ್ಮೂಲ ಮತ್ತು ಲೋಕೋಪಯೋಗಿ ಇಲಾಖೆಗಳಲ್ಲಿ ಆಡಳಿತಾತ್ಮಕ ಹುದ್ದೆಗಳಿಗೆ ಬಡ್ತಿ ನೀಡಲಾಗುತ್ತಿದೆಯೇ ಹೊರತು, ತಾಂತ್ರಿಕ ಶಿಕ್ಷಣ ಇಲ್ಲದವರನ್ನು ತಾಂತ್ರಿಕ ಹುದ್ದೆಗಳಿಗೆ ಬಡ್ತಿ ನೀಡುತ್ತಿಲ್ಲ. ಆ ಬಗ್ಗೆ ಸರ್ಕಾರಕ್ಕೆ ಸಾರಿಗೆ ಇಲಾಖೆ ತಪ್ಪು ಮಾಹಿತಿ ನೀಡಿ ಆಡಳಿತಾತ್ಮಕ ಹುದ್ದೆಯಲ್ಲಿರುವ ಸಿ ವರ್ಗದ ಆಡಳಿತಾತ್ಮಕ ಸಿಬ್ಬಂದಿಯನ್ನು ತಾಂತ್ರಿಕ ಹುದ್ದೆಯಾದ ಮೋಟಾರು ವಾಹನ ನಿರೀಕ್ಷಕ ಹುದ್ದೆಗೆ ನೇಮಕ ಮಾಡಲು ಅನುಮತಿ ಪಡೆಯಲಾಗಿದೆ.
ಅದರಂತೆ ಖಾಲಿ ಹುದ್ದೆಗಳ ಸಂಖ್ಯೆಯಲ್ಲಿ ಬಡ್ತಿ ನೇಮಕಾತಿ ಅಡಿಯಲ್ಲಿ ಶೇ. 5ರಷ್ಟು ಮಂದಿಯನ್ನು ಇಲಾಖಾ ಸಿಬ್ಬಂದಿಯನ್ನೇ ನೇಮಕ ಮಾಡಿಕೊಳ್ಳಲು ಸಾರಿಗೆ ಇಲಾಖೆ ಕ್ರಮ ಕೈಗೊಳ್ಳುತ್ತಿದೆ. ಹೀಗೆ ಅರ್ಹರಲ್ಲದ ಇಲಾಖಾ ಸಿಬ್ಬಂದಿಯನ್ನು ಮೊಟಾರು ವಾಹನ ಇನ್ಸ್‌ಪೆಕ್ಟರ್ ಹುದ್ದೆಗೆ ನೇಮಕ ಮಾಡುತ್ತಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ ಎಂದು ಡಿಪ್ಲೋಮಾ/ಬಿಟಿ ಆಟೋಮೊಬೈಲ್ ನಿರುದ್ಯೋಗಗಿ ಪದವೀಧರರ ಒಕ್ಕೂಟ ಆಗ್ರಹಿಸಿದೆ.