ರಾಮನಗರ: ಬಿಡದಿ ಟೌನ್‌ಶಿಪ್ ಯೋಜನೆಗಾಗಿ ಮಂಡಲಹಳ್ಳಿಯಲ್ಲಿ ಸರ್ವೇ ಮಾಡುತ್ತಿದ್ದ ಅಧಿಕಾರಿಗಳ ಮೇಲೆ ನಡೆದ ಹಲ್ಲೆ ಸಂಬಂಧ ಪ್ರಕರಣ ದಾಖಲಾದ ರೈತರನ್ನು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಮತ್ತು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಗುರವಾರ ಭೇಟಿ ಮಾಡಿ ಧೈರ್ಯ ತುಂಬಿದರು
ರಾಮನಗರ: ಬಿಡದಿ ಟೌನ್‌ಶಿಪ್ ಯೋಜನೆಗಾಗಿ ಮಂಡಲಹಳ್ಳಿಯಲ್ಲಿ ಸರ್ವೇ ಮಾಡುತ್ತಿದ್ದ ಅಧಿಕಾರಿಗಳ ಮೇಲೆ ನಡೆದ ಹಲ್ಲೆ ಸಂಬಂಧ ಪ್ರಕರಣ ದಾಖಲಾದ ರೈತರನ್ನು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಮತ್ತು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಗುರವಾರ ಭೇಟಿ ಮಾಡಿ ಧೈರ್ಯ ತುಂಬಿದರು.
ಕೋಡಿಹಳ್ಳಿಯ ರೈತ ಮಹಿಳೆ ಜಯಮ್ಮ, ಮಂಡಲಹಳ್ಳಿ ನಾಗರಾಜು ಮತ್ತು ಭಾಗ್ಯಮ್ಮ ಹಾಗೂ ಹೊಸೂರು ಗ್ರಾಮದ ಕೃಷ್ಣ ಅವರ ನಿವಾಸಗಳಿಗೆ ಭೇಟಿ ನೀಡಿದ ವಿಪಕ್ಷ ನಾಯಕರು, ಘಟನೆಯ ಮಾಹಿತಿ ಪಡೆದು ರೈತರ ನೋವು ಆಲಿಸಿದರು.ಬನ್ನಿಗಿರಿ ಗ್ರಾಮದ ರೈತ ರೇವಣ್ಣ ಅವರ ಮನೆಗೆ ಆಗಮಿಸಿದ ಆರ್.ಅಶೋಕ್ ನೇತೃತ್ವದ ತಂಡವನ್ನು ರೈತರು ರೈತಗೀತೆ ಹಾಡಿ ಸ್ವಾಗತಿಸಿದರು. ಆನಂತರ ಒಳಿತು ಮಾಡು ಡಿ.ಕೆ.ಶಿವಕುಮಾರಣ್ಣ ನೀನು ಇರೋದು ಮೂರು ದಿವಸ ಎಂದು ಹಾಡು ಹಾಡಿ ಗಮನ ಸಳೆದರು.
ಡಿಕೆ ಶಿವಕುಮಾರಣ್ಣ ಹಾಡು ಹಾಡಿದ ರೈತ ರೇವಣ್ಣ ಅವರಿಗೆ ಅಶೋಕ್ ಶಹಬ್ಬಾಸ್ ಗಿರಿ ಹೇಳಿದರಲ್ಲದೆ, ನಿಮ್ಮ ಮನೆಯಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತೇನೆ ಅವಕಾಶ ಕೊಡಿ ಎಂದು ಕೇಳಿದರು. ಇದಕ್ಕೆ ರೇವಣ್ಣ, ಅಯ್ಯೋ ಬನ್ನಿ ಸರ್ ಇರುವಿರಂತೆ ಎಂದರು. ಆವತ್ತು ಹಾಡು, ಕುಣಿತ, ನಾಟಕ ಎಲ್ಲಾ ಮಾಡೋಣ ಎಂದು ಹೇಳಿ ಅಶೋಕ್ ರೈತರ ಅಹವಾಲು ಆಲಿಸಿದರು.ರೈತರ ಬಂಧಿಸಿದರೆ ಎಸ್ಪಿ ಕಚೇರಿಗೆ ಮುತ್ತಿಗೆ:
ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ 490ಕ್ಕೂ ಹೆಚ್ಚು ದಿನಗಳಿಂದ ರೈತರು ನಡೆಸುತ್ತಿರುವ ಹೋರಾಟಕ್ಕೆ ಬಿಜೆಪಿ ಬೆಂಬಲವಾಗಿ ನಿಲ್ಲಲಿದೆ. ರೈತರ ಮೇಲೆ ದಾಖಲಿಸಿರುವ ಸುಳ್ಳು ಪ್ರಕರಣಗಳನ್ನು ಹಿಂಪಡೆಯುವಂತೆಯೂ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸುವುದಾಗಿ ವಿಪಕ್ಷ ನಾಯಕರು ನೊಂದ ರೈತರಿಗೆ ಆತ್ಮಸ್ಥೈರ್ಯ ತುಂಬಿದರು.ಅಲ್ಲದೆ, ಆರ್ .ಅಶೋಕ್, ರಾಜ್ಯ ಸರ್ಕಾರ ಅಮಾಯಕ ರೈತರ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಿಸಿದೆ. ಪೊಲೀಸರು ನಿಮ್ಮ ಮೇಲೆ ಕೈ ಹಾಕಿದರೆ ನಾನೇ ಇಲ್ಲಿಗೆ ಬರುತ್ತೇನೆ. ನಿಮ್ಮನ್ನು ಅರೆಸ್ಟ್ ಮಾಡಿದರೆ ಎಸ್ಪಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ. ಯಾವುದೇ ಕಾರಣಕ್ಕೂ ದೃತಿಗೆಡಬೇಡಿ ಎಂದು ರೈತರಿಗೆ ಧೈರ್ಯ ತುಂಬಿದರು. ಈ ಸರ್ಕಾರ ಇನ್ನು ಒಂದೂವರೆ ವರ್ಷ ಮಾತ್ರ ಇರುತ್ತದೆ. ಮುಂದೆ ನಮ್ಮ ಸರ್ಕಾರ ಬರುತ್ತದೆ. ನಾವು ಸಂಪೂರ್ಣ ಟೌನ್‌ಶಿಪ್ ಯೋಜನೆ ನಿಲ್ಲಿಸುತ್ತೇವೆ ಎಂದು ಅಶೋಕ್ ರೈತರಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಾಗಡಿ ಮಂಡಲ ಅಧ್ಯಕ್ಷ ಪ್ರಸಾದ್ ಗೌಡ ಮತ್ತಿತರರು ಹಾಜರಿದ್ದರು.16ಕೆಆರ್ ಎಂಎನ್ 2.ಜೆಪಿಜಿ
ರೈತ ನಾಗರಾಜು ಅವರ ನಿವಾಸಕ್ಕೆ ವಿಪಕ್ಷ ನಾಯಕರಾದ ಆರ್.ಅಶೋಕ್ ಮತ್ತು ಛಲವಾದಿ ನಾರಾಯಣಸ್ವಾಮಿ ಭೇಟಿ ನೀಡಿ ಧೈರ್ಯ ತುಂಬಿದರು.