ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಈಗಾಗಲೇ ಉಪಮುಖ್ಯಮಂತ್ರಿ ಅವರು ಸರ್ವಪಕ್ಷಗಳ ನಾಯಕರ ಸಭೆ ಕರೆಯುವುದಾಗಿ ಹೇಳಿದ್ದಾರೆ. ಹೀಗಿರುವಾಗ ವಿಪಕ್ಷದವರು ಸಾವಿನಲ್ಲಿ ರಾಜಕೀಯ ಮಾಡುವುದನ್ನು ಬಿಡಲಿ ಎಂದು ವಿಧಾನ ಪರಿಷತ್ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಪ್ರಶ್ನಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ವೈಷಮ್ಯ, ಘರ್ಷಣೆಯಿಂದಾಗಿ ಮಂಗಳೂರಿನ ಮಾನ ಮರ್ಯಾದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗಿದೆ. ಈ ಹಿಂದೆ ಪಬ್ ದಾಳಿ, ಚರ್ಚ್ ದಾಳಿ, ಬರ್ತ್ ಡೇ ಪಾರ್ಟಿ ಮೇಲಿನ ದಾಳಿಯಿಂದ ಪ್ರವಾಸೋದ್ಯಮಕ್ಕೆ ಕಪ್ಪು ಚುಕ್ಕೆಯಾಗಿದೆ. ಮಂಗಳೂರು ಬದಲಾವಣೆಯತ್ತ ತೆರೆದುಕೊಳ್ಳುತ್ತಿರುವ ಈ ವೇಳೆಯಲ್ಲಿ ಇಂತಹ ಘಟನೆಗಳು ಸಾಮಾಜಿಕ ಸ್ವಾಸ್ಥ್ಯಕ್ಕೆ ಮಾರಕ ಎಂದರು. ಜಿಲ್ಲೆಯಲ್ಲಿ ಶಾಂತಿ ಸೌಹಾರ್ದತೆ ಕಾಪಾಡುವ ಜವಾಬ್ದಾರಿ ಎಲ್ಲ ಪಕ್ಷದವರಿಗೂ ಇದೆ. ಜನಪ್ರತಿನಿಧಿಗಳ ಜವಾಬ್ದಾರಿ ಇದೇ ಆಗಿದೆ. ಕಾನೂನಿನ ಅಲ್ಪ ಜ್ಞಾನವೂ ಇಲ್ಲದೆ ಮಾತಾಡುವುದು ಬಿಜೆಪಿ ನಾಯಕರಿಗೆ ಶೋಭೆ ತರುವುದಿಲ್ಲ. ಇನ್ನಾದರೂ ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಲ್ಲಿ ಯೋಚಿಸಬೇಕಾಗಿದೆ ಎಂದರು.ಕಾಂಗ್ರೆಸ್ ಮುಖಂಡರಾದ ಮಿಥುನ್ ರೈ, ಇನಾಯತ್ ಅಲಿ, ಹರೀಶ್ ಕುಮಾರ್, ಶಾಲೆಟ್ ಪಿಂಟೋ, ಜಿಎ ಬಾವ, ಲಾರೆನ್ಸ್ ಡಿಸೋಜ, ಸುಹಾನ್ ಆಳ್ವ, ಪದ್ಮರಾಜ್ ಆರ್., ಶಾಹುಲ್ ಹಮೀದ್, ವಿಕಾಸ್, ಶುಭೋದಯ ಆಳ್ವ, ಕೃಷ್ಣ ಶೆಟ್ಟಿ, ಬಶೀರ್ ಮತ್ತಿತರರು ಇದ್ದರು.