ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆ ವಿಧಾನಸಭೆಯಲ್ಲಿ ಶುಕ್ರವಾರ ಮುಂದುವರೆಯಿತು.

ಕನ್ನಡಪ್ರಭ ವಾರ್ತೆ ವಿಧಾನಸಭೆ

ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆ ವಿಧಾನಸಭೆಯಲ್ಲಿ ಶುಕ್ರವಾರ ಮುಂದುವರೆಯಿತು. ಈ ವೇಳೆ ವಿಪಕ್ಷ ಬಿಜೆಪಿಯ ಬಿ.ಪಿ. ಹರೀಶ್‌, ವೇದವ್ಯಾಸ ಕಾಮತ್‌, ಧೀರಜ್‌ ಮುನಿರಾಜು ಮತ್ತಿತರ ಸದಸ್ಯರು ರಾಜ್ಯದಲ್ಲಿ ಗ್ಯಾರಂಟಿಗಳನ್ನು ಬಿಟ್ಟು ಅಭಿವೃದ್ಧಿ ಕಾರ್ಯಗಳು ಮರೀಚಿಕೆಯಾಗಿವೆ ಎಂದು ಟೀಕಿಸಿದರು.

ಆದರೆ, ಆಡಳಿತ ಪಕ್ಷದ ಕೆ.ವೈ.ನಂಜೇಗೌಡ, ನಯನ ಮೋಟಮ್ಮ, ಎಸ್‌.ಎಂ.ನಾರಾಯಣಸ್ವಾಮಿ ಮತ್ತಿತರ ಸದಸ್ಯರು ಗ್ಯಾರಂಟಿಗಳ ಜೊತೆಗೆ ನಮ್ಮ ಸರ್ಕಾರ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ ಎಂದು ಸಮರ್ಥಿಸಿಕೊಂಡರು.

ಡಿ.ವೇದವ್ಯಾಸ ಕಾಮತ್‌ ಮಾತನಾಡಿ, ಈ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಮಾಡಿದ್ದೇವೆ ಎಂದು ಹೇಳುವುದು ಬಿಟ್ಟರೆ ಎರಡೂವರೆ ವರ್ಷದಲ್ಲಿ ಇನ್ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಒಂದು ಪೈಸೆ ಹಣ ನೀಡಿಲ್ಲ. ಉದಾಹರಣೆಗೆ ನನ್ನ ಕ್ಷೇತ್ರದಲ್ಲಿ ಇದುವರೆಗೆ ಒಂದೇ ಒಂದು ಹೊಸ ಯೋಜನೆಗೆ ಗುದ್ದಲಿ ಪೂಜೆ ಕೂಡ ಆಗಿಲ್ಲ ಎಂದು ಆರೋಪಿಸಿದರು.

ಧೀರಜ್‌ ಮುನಿರಾಜು ಮಾತನಾಡಿ, ರಾಜ್ಯದಲ್ಲಿ ಮದ್ಯ ಸೇವಿಸುವವರ ಪ್ರಮಾಣ ಕಡಿಮೆಯಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಇದಕ್ಕೆ ಖುಷಿ ಪಡಬೇಕಿಲ್ಲ. ಡ್ರಗ್ಸ್‌ ವ್ಯಸನಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಸರ್ಕಾರ ತಲೆ ತಗ್ಗಿಸುವ ವಿಷಯ. ಪೊಲೀಸ್‌ ಠಾಣೆಗಳಲ್ಲಿ ಪಿಸಿಗಳು ಇದಕ್ಕೆ ಸಹಕಾರ ನೀಡುತ್ತಿದ್ದಾರೆ. ಇದರ ವಿರುದ್ಧ ಗೃಹ ಇಲಾಖೆ ಒಂದು ಅಭಿಯಾನ ಮಾಡಬೇಕು ಎಂದರು.

ಆಡಳಿತ ಪಕ್ಷದವರ ಸಮರ್ಥನೆ:

ಆಡಳಿತ ಪಕ್ಷದ ಎಸ್‌.ಎಂ.ನಾರಾಯಣಸ್ವಾಮಿ, ವೈ.ಎನ್‌.ನಂಜೇಗೌಡ, ನಯನ ಮೋಟಮ್ಮ ಮತ್ತಿತರರು, ರಾಜ್ಯಪಾಲರ ಭಾಷಣದಲ್ಲಿ ಸರ್ಕಾರ ಯಾವುದೇ ಸುಳ್ಳು ಹೇಳಿಲ್ಲ. ನಮ್ಮ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳಿಂದ ಕೋಟ್ಯಂತರ ಕುಟುಂಬಗಳ ಆರ್ಥಿಕ ಸ್ಥಿತಿ ಸುಧಾರಣೆಯಾಗಿದೆ. ಮಹಿಳಾ ಸಬಲೀಕರಣವಾಗಿದೆ. ಜನರಲ್ಲಿ ಕೊಳ್ಳುವ ಶಕ್ತಿ ಹೆಚ್ಚಾಗಿದೆ ಎಂದರು.

ಇವುಗಳ ಯಶಸ್ವಿ ಅನುಷ್ಠಾನದಿಂದ ರಾಜ್ಯದ ತಲಾದಾಯವೂ ಹೆಚ್ಚಾಗಿದೆ. ಸರ್ಕಾರ ಕೇವಲ ಗ್ಯಾರಂಟಿ ಯೋಜನೆಗಳಿಗೆ ಸೀಮಿತವಾಗಿಲ್ಲ. ಇವುಗಳನ್ನು ಹೊರತುಪಡಿಸಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದೆ. ರಾಜ್ಯಾದ್ಯಂತ ಹೊಸದಾಗಿ ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಒಂದೇ ಕಡೆ ಶಿಕ್ಷಣ ಸಿಗುವಂಥ 900 ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು ಆರಂಭಿಸಲಾಗುತ್ತಿದೆ. ಗಿಗ್‌ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಗೆ ಕಾಯ್ದೆ ತಂದಿದೆ. ಮಹಿಳಾ ನೌಕರರಿಗೆ ಋತುಚಕ್ರ ರಜೆ ನೀಡಿದೆ. ಮಹಿಳಾ ವಿದ್ಯಾರ್ಥಿಗಳಿಗೆ ಅಜೀಂ ಪ್ರೇಮ್‌ಜಿ ಪೌಂಡೇಷನ್‌ ಸಹಯೋಗದಲ್ಲಿ ವಿದ್ಯಾರ್ಥಿವೇತನ ನೀಡುತ್ತಿದೆ. ಇದೇ ರೀತಿ ಬಜೆಟ್‌ನಲ್ಲಿ ಘೋಷಿಸಿರುವ ಬಹುತೇಕ ಯೋಜನೆಗಳನ್ನು ಒಂದೊಂದಾಗಿಯೇ ಮುಖ್ಯಮಂತ್ರಿ ಅವರು ಅನುಷ್ಠಾನ ಮಾಡುತ್ತಿದ್ದಾರೆ ಎಂದು ಸಮರ್ಥಿಸಿಕೊಂಡರು.