ಸಾರಾಂಶ
ಕೋಲಾರ: ರಾಜಕೀಯದಲ್ಲಿ ಆಡಳಿತ ಪಕ್ಷದ ಲೋಪದೋಷಗಳನ್ನು ವಿಪಕ್ಷಗಳು ಎತ್ತಿ ಹಿಡಿಯುವುದು. ಅಧಿಕಾರದಿಂದ ಕೆಳಗೆ ಇಳಿಸುವಂತ ತಂತ್ರಗಾರಿಕೆಗಳು ಮಾಡುವುದು ಸಹಜ ಪ್ರಕ್ರಿಯೆ ಆಗಿದೆ. ಆದರೆ ಅಧಿಕಾರದಿಂದ ಕೆಳಗಿಳಿಸಲು ಜನಾದೇಶಕ್ಕೆ ವಿರುದ್ಧ ಕುತಂತ್ರಗಳನ್ನು ಮಾಡುವುದು ತಪ್ಪು ಎಂದು ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಅಭಿಪ್ರಾಯಪಟ್ಟರು.
ನಗರದ ತಮ್ಮ ಗೃಹ ಕಚೇರಿಯಲ್ಲಿ ಅನಾರೋಗ್ಯ ಪೀಡಿತರಿಗೆ ಇಫ್ಕೋ ಸೇವಾ ಸಂಸ್ಥೆಯಿಂದ ೮ ಮಂದಿಗೆ ೧.೭೦ ಲಕ್ಷ ರು.ಗಳ ಸಹಾಯಧನದ ಚೆಕ್‌ಗಳನ್ನು ವಿತರಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಸಿಎಂ ಸಿದ್ದರಾಮಯ್ಯ ತಮ್ಮ ರಾಜಕೀಯ ಜೀವನದಲ್ಲಿ ಈವರೆಗೆ ಒಂದು ಕಪ್ಪು ಚುಕ್ಕೆ ಬಾರದಂತೆ ಆಡಳಿತ ನಡೆಸಿದ ಪ್ರಜ್ಞಾವಂತರು, ಅವರ ವಿರುದ್ಧ ವಿಪಕ್ಷಗಳು ಕುತಂತ್ರ ಮಾಡುತ್ತಿರುವುದು ಸಮಂಜಸವಲ್ಲ ಎಂದರು.ಮುಡಾದಲ್ಲಿ ಅಕ್ರಮವಾಗಿ ಅವರು ನಿವೇಶಗಳನ್ನು ಪಡೆದಿದ್ದರೆ ತಪ್ಪಾಗುತ್ತಿತ್ತು, ಆದರೆ ಅವರ ಕುಟುಂಬದವರಿಗೆ ನೀಡಿದ್ದ ಜಮೀನನ್ನು ಮುಡಾದವರಿಗೆ ನೀಡಿ ಅದರಲ್ಲಿ ಅವರ ಪಾಲಿನ ನಿವೇಶನಗಳನ್ನು ಪಡೆದಿರುವುದಾಗಿ ದಾಖಲೆಗಳಿರುವಾಗ ಅದು ತಪ್ಪಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರವು ಜಿಲ್ಲೆಗೆ ಉಸ್ತುವಾರಿ ಸಚಿವರನ್ನು ನೇಮಿಸಿದೆ. ಆದರೆ ಜವಾಬ್ದಾರಿ ವಹಿಸಿಕೊಂಡ ಸಚಿವರು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು. ಸಾಧ್ಯವಾಗದಿದ್ದರೆ ಬೇರೆಯವರಿಗೆ ಆ ಸ್ಥಾನ ಬಿಟ್ಟುಕೊಡಬೇಕು. ಇಲ್ಲವಾದರೆ ಸಚಿವರ ಬೇಜವಾಬ್ದಾರಿಯಿಂದ ಜಿಲ್ಲೆಯ ಅಭಿವೃದ್ಧಿಗೆ ಹಿನ್ನಡೆಯಾಗಲಿದೆ ಎಂದು ಹೇಳಿದರು.ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಗೆ ಚುನಾವಣೆ ನಡೆಯಬೇಕು. ಚುನಾವಣೆಗೆ ಕ್ರಮಕೈಗೊಳ್ಳದಿದ್ದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಕೋಚಿಮುಲ್ ವಿಭಜನೆಗೆ ಚಿಕ್ಕಬಳ್ಳಾಪುರ ಕ್ಷೇತ್ರದ ಜನತೆ ಮನವಿ ಮಾಡಿದ್ದಾರೆ, ಈ ಕುರಿತು ನಿರ್ಧಾರವು ನ್ಯಾಯಾಲಯ ಹಾಗೂ ಸರ್ಕಾರದ ನಿರ್ಧಾರಗಳ ಮೇಲೆ ಅವಲಂಬಿತವಾಗಲಿದೆ ಎಂದು ಪ್ರತಿಕ್ರಿಯಿಸಿದರು.
ರೂಪ್ಸೆ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಎಸ್.ಮುನಿಯಪ್ಪ, ಮುಖಂಡರಾದ ಹಾರೋಹಳ್ಳಿ ರಮೇಶ್, ರಾಜಾ ರಾಮ್ ಇದ್ದರು.