ಸಾರಾಂಶ
ಹಾಸನ: ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ಲಿಂಕ್ ಮಾಡುವ ಹೊಸ ವಿಧಾನದಿಂದಾಗಿ ರೈತರಿಗೆ ಭಾರಿ ಸಮಸ್ಯೆಯಾಗಲಿದೆ. ಕೆಲ ರೈತರು ಸಾಗುವಳಿ ಭೂಮಿಯನ್ನು ಪೌತಿ ಖಾತೆ ಮಾಡಿಸಿಕೊಂಡಿಲ್ಲ. ಕೆಲವರು ಬಹರ್ ಹುಕುಂ ಅಡಿ ಅರ್ಜಿ ಸಲ್ಲಿಸಿದ್ದಾರೆ, ಮಂಜೂರಾಗಿಲ್ಲ. ಇಂತಹ ಹಲವು ಸಮಸ್ಯೆಗಳಿರುವುದರಿಂದ ಆಧಾರ್ ಲಿಂಕ್ ವಿರೋಧಿಸಿ ರಾಜ್ಯ ರೈತ ಸಂಘದಿಂದ ಬುಧವಾರ ನಗರದಲ್ಲಿ ಚೆಸ್ಕಾಂ ಎದುರು ಪ್ರತಿಭಟನೆ ನಡೆಸಿದರು.
ರಾಜ್ಯ ರೈತ ಸಂಘದ ಉಪಾಧ್ಯಕ್ಷ ಆನೆಕೆರೆ ರವಿ ಮಾತನಾಡಿ, ರೈತರ ಕಷ್ಟಕ್ಕೆ ಯಾವುದೇ ರಾಜಕೀಯ ಪಕ್ಷಗಳು ಇಲ್ಲ. ಅವರ ಆಸಕ್ತಿಗಳೆಲ್ಲಾ ಕಾರ್ಪೊರೇಟ್ ಕಂಪನಿಗಳ ಪರ. ಈ ಕೃಷಿ ವಲಯಕ್ಕೆ ಕಿಂಚಿತ್ತೂ ಲಾಭವಾಗಬಾರದೆಂದು ನಡೆಸುತ್ತಿರುವ ಪ್ರಯತ್ನ ಇಲ್ಲಿಗೆ ೭೭ ವರ್ಷಗಳಿಂದ ನಡೆದು ಬಂದಿದೆ. ರೈತ ಕೃಷಿಯಿಂದ ವರಮಾನವಿಲ್ಲದೆ ಸತ್ತು ಬದುಕುತ್ತಿದ್ದಾನೆ. ಸ್ವಾಮಿನಾಥನ್ ವರದಿಯಂತೆ ಸಿ೨ +೫೦ ಆಧಾರದಲ್ಲಿ ರೈತರಿಗೆ ಕನಿಷ್ಠ ಬೆಲೆ ನಿಗದಿ ಮಾಡಿ ಎಂದು ಭಾರತ ಸರ್ಕಾರಕ್ಕೆ ವರದಿ ನೀಡಿ ಇಲ್ಲಿಗೆ ೨೩ ವರ್ಷಗಳು ಕಳೆದಿದೆ. ಈಗ ಮತ್ತೆ ವಿದ್ಯುತ್ ಖಾಸಗೀಕರಣಕ್ಕೆ ಹೊರಟಿದ್ದಾರೆ ಎಂದು ದೂರಿದರು.೨೦೦೦ನೇ ಸಾಲಿನಲ್ಲಿ ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಆಗಿದ್ದಾಗ ಇದೇ ಕಾಂಗ್ರೆಸ್ ಪಕ್ಷವು ಕೆಇಬಿಯನ್ನು ಖಾಸಗೀಕರಣಕ್ಕೆ ವರ್ಗಾಯಿಸಿತ್ತು. ಆಗ ೨೦೦೧ರಲ್ಲಿ ರಾಜ್ಯ ವ್ಯಾಪಿ ರೈತರ ಚಳವಳಿ ನಡೆಯಿತು. ಇದರ ಪರಿಣಾಮ ಖಾಸಗಿ ವ್ಯಕ್ತಿಯ ಕೈಸೇರಬೇಕಾದ ವಿದ್ಯುತ್ ಕಂಪನಿ ೫ ಭಾಗಗಳಾಗಿ ಸರ್ಕಾರದಲ್ಲೇ ಉಳಿದಿದ್ದು, ಈಗ ಇದನ್ನು ಖಾಸಗಿ ವ್ಯಕ್ತಿಗಳಿಗೆ ಈ ಕಂಪನಿಯ ವರ್ಗಾವಣೆಗೆ ಮುಂಚೆ ಆಧಾರ್ ಲಿಂಕ್ ಮಾಡದೇ ಆನಲೈನ್ ಮೂಲಕ ವ್ಯವಹಾರ ನಡೆಸುವ ಸಂಚು ಇದಾಗಿದೆ ಎಂದು ಆರೋಪಿಸಿದರು.
ವಿದ್ಯುತ್ ಅನ್ನು ನಗರ ಹಳ್ಳಿ ತಾರತಮ್ಯ ಇಲ್ಲದೇ ಸಮಾನ ವಿತರಣೆಯಾಗಬೇಕು, ಗುಣಮಟ್ಟವಿಲ್ಲದ ವಿದ್ಯುತ್ ಇದರಿಂದ ರಾಜ್ಯದ ೩೦ ಲಕ್ಷ ಪಂಪ್‌ಸೆಟ್ ವರ್ಷದಲ್ಲಿ ಒಮ್ಮೆ ಬಸ್ಮವಾದರೆ ಇದರ ರೀವೈಂಡಿಂಗ್ ಮೋಟಾರು ಎತ್ತಲು, ಇಳಿಸಲು ಅಂದಾಜು ೮೦೦೦ ರು. ಬೇಕು. ಇದರಿಂದ ಬಡವನಾಗಿ ಮಾಡಲು ಪ್ರತೀ ವರ್ಷ ೨೪೦೦ ಕೋಟಿ ರು. ರೈತರಿಂದ ಖರ್ಚು ಮಾಡಿಸುತ್ತಾರೆ. ಫಸಲು ನಷ್ಟ ಮತ್ತು ಬೆಳೆ ನಷ್ಟವನ್ನು ಇದೇ ರೀತಿ ಅಂದಾಜಿಸಿ ನೀಡುವುದು ಹೇಗೆ? ಪದೇ ಪದೇ ಕರೆಂಟ್ ಕಟ್ - ಓದುವ ನಮ್ಮ ಮಕ್ಕಳು ನಿಮ್ಮ ಮಕ್ಕಳಿಗೆ ಗುಣಮಟ್ಟದ ಸ್ಪರ್ಧೆ ಮಾಡುವುದು ಹೇಗೆ ಎಂದು ಪ್ರಶ್ನೆ ಮಾಡಿದರು.ಈ ಎಲ್ಲಾ ಬೇಡಿಕೆಗಳನ್ನು ರಾಜ್ಯದ ವಿದ್ಯುತ್ ಕಂಪನಿಗಳು ಮತ್ತು ಸರ್ಕಾರ ಕೂಡಲೇ ಯಥಾವತ್ ಜಾರಿಗೊಳಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯದ ರೈತರು ಸರ್ಕಾರ ಮತ್ತು ವಿದ್ಯುತ್ ಕಂಪನಿಗಳ ವಿರುದ್ದ ಬೃಹತ್ ಮಟ್ಟದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಬಾಬು, ರಾಜ್ಯ ಸಂಚಾಲಕ ನಂಬಿಹಳ್ಳಿ ಕಮಲಮ್ಮ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬೋರನಹಳ್ಳಿ ಜಯರಾಂ, ತಾಲೂಕು ಅಧ್ಯಕ್ಷ ಅಣಚಿಹಳ್ಳಿ ಕೆ. ವೆಂಕಟೇಶ್, ಗೌರವಾಧ್ಯಕ್ಷ ಶಿವರಾಮೇಗೌಡ ಹರಳಹಳ್ಳಿ, ಕುಮಾರ್, ಜವರೇಶ್, ಹರಳಹಳ್ಳಿ ಹರಿಹರ, ರಂಗಮ್ಮ, ಎಚ್.ಬಿ.ಸಿದ್ದಪ್ಪ ಕಾಳಪ್ಪ, ಪವಿತ್ರ, ವಿಠಲ ಇದ್ದರು.