ಸಾರಾಂಶ
ಅಭಿವೃದ್ಧಿಯ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ತಾರತಮ್ಯ ಮಾಡುತ್ತಾರೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿರುವುದು ಸರಿಯಲ್ಲ.
ಕನ್ನಡಪ್ರಭ ವಾರ್ತೆ ಕುಷ್ಟಗಿ
ನೂತನವಾಗಿ ಗಂಗಾವತಿಯಲ್ಲಿ ಉಪವಿಭಾಗಾಧಿಕಾರಿ ಕಾರ್ಯಾಲಯ ತೆರೆಯುತ್ತಿದ್ದು, ಇದರ ವ್ಯಾಪ್ತಿಗೆ ಕುಷ್ಟಗಿ ತಾಲೂಕನ್ನು ಸೇರ್ಪಡೆ ಮಾಡಿರುವುದು ಖಂಡನೀಯ. ಕುಷ್ಟಗಿ ತಾಲೂಕನ್ನು ಕೊಪ್ಪಳ ಉಪವಿಭಾಗದಲ್ಲಿಯೇ ಮುಂದುವರಿಸಬೇಕು ಎಂದು ಮಾಜಿ ಸಚಿವ ಅಮರೇಗೌಡ ಬಯ್ಯಾಪೂರ ಹಾಗೂ ಕಾಡಾ ನಿಗಮದ ಅಧ್ಯಕ್ಷ ಹಸನಸಾಬ ದೋಟಿಹಾಳ ಒತ್ತಾಯಿಸಿದರು.ಪಟ್ಟಣದ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕುಷ್ಟಗಿ ತಾಲೂಕನ್ನು ಗಂಗಾವತಿಯ ಉಪವಿಭಾಗಕ್ಕೆ ಸೇರ್ಪಡೆ ಮಾಡಬಾರದು. ಇದರಿಂದಾಗಿ ತಾಲೂಕಿನ ರೈತರು ಹಾಗೂ ಸಾರ್ವಜನಿಕರಿಗೆ ಬಹಳಷ್ಟು ತೊಂದರೆ ಉಂಟಾಗುತ್ತವೆ. ಹಾಗಾಗಿ ಇದಕ್ಕೆ ನಮ್ಮ ವಿರೋಧ ಇದೆ ಎಂದರು.
ಈ ನಿರ್ಣಯಕ್ಕೆ ಕುಷ್ಟಗಿ ತಾಲೂಕಿನ ಸಂಘ-ಸಂಸ್ಥೆಗಳು, ಸಾರ್ವಜನಿಕರು, ಮುಖಂಡರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಐದು ವರ್ಷಗಳ ಹಿಂದೆ ಸರ್ಕಾರಕ್ಕೆ ಪ್ರಸ್ತಾವನೆ ಹೋಗಿತ್ತು. ಅದು ಈಗ ಸರ್ಕಾರದಿಂದ ಆದೇಶ ಆಗಿದೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಈ ನಿರ್ಣಯಕ್ಕೆ ಇರುವ ವಿರೋಧದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನಕ್ಕೆ ತರುವ ಮೂಲಕ ಮನವಿ ಮಾಡಿಕೊಳ್ಳಲಾಗುತ್ತದೆ. ಇಲ್ಲವಾದಲ್ಲಿ ಪಕ್ಷಾತೀತವಾಗಿ ಜನತೆಯ ಪರ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದರು.ಈ ಸಂದರ್ಭ ಕಾಂಗ್ರೆಸ್ ಮಹಿಳಾ ಜಿಲ್ಲಾ ಅಧ್ಯಕ್ಷೆ ಮಾಲತಿ ನಾಯಕ, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಮೈನುದ್ದೀನ್ ಮುಲ್ಲಾ, ಮುಖಂಡರಾದ ಶಾರದಾ ಕಟ್ಟಿಮನಿ, ಸೋಮಶೇಖರ ವೈಜಾಪೂರ, ವಕೀಲರಾದ ಶಂಕರಗೌಡ ಮಾಲಿ ಪಾಟೀಲ, ಜಿಪಂ ಮಾಜಿ ಸದಸ್ಯ ವಿಜಯನಾಯಕ ಸೇರಿದಂತೆ ಹಲವರಿದ್ದರು.
ಅಭಿವೃದ್ಧಿ ವಿಚಾರದಲ್ಲಿ ಸಿಎಂ ತಾರತಮ್ಯ ಮಾಡಿಲ್ಲ- ಬಯ್ಯಾಪೂರ:ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಭಿವೃದ್ಧಿಯ ವಿಚಾರದಲ್ಲಿ ಯಾವುದೇ ತಾರತಮ್ಯ ಮಾಡುತ್ತಿಲ್ಲ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿಕೆಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪೂರ ತಿರುಗೇಟು ನೀಡಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭಿವೃದ್ಧಿಯ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ತಾರತಮ್ಯ ಮಾಡುತ್ತಾರೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿರುವುದು ಸರಿಯಲ್ಲ. ಏಕೆಂದರೆ ನಾನು ಶಾಸಕನಾದ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಇತ್ತು. ಆ ಸಮಯದಲ್ಲಿ ಬಿಜೆಪಿ ಶಾಸಕರಿಗೆ ಹೆಚ್ಚಿನ ಅನುದಾನ ನೀಡುತ್ತಿದ್ದರೂ ನನಗೆ ಹೆಚ್ಚಿನ ಅನುದಾನ ನೀಡುತ್ತಿರಲಿಲ್ಲ. ಆದರೆ, ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದು, ಕಾಂಗ್ರೆಸ್ ಶಾಸಕರಿಗೆ ಹೆಚ್ಚಿನ ಅನುದಾನ ಕೊಟ್ಟಿರಬಹುದು. ಬಿಜೆಪಿ ಶಾಸಕರಿಗೆ ಕಡಿಮೆ ಅನುದಾನ ನೀಡಿರಬಹುದು. ಅಂದು ಅವರು ಮಾಡಿದ್ದನ್ನು ಇಂದು ಇವರು ಮಾಡುತ್ತಿದ್ದಾರೆ, ಇದು ತಾರತಮ್ಯ ಹೇಗಾಗುತ್ತದೆ ಎಂದು ಪ್ರಶ್ನಿಸಿದರು.ಶಾಸಕರು ತಮ್ಮ ವೈಯಕ್ತಿಕ ವರ್ಚಸ್ಸಿನಿಂದ ಅನುದಾನ ತಂದು ತಾಲೂಕಿನ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.