ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯಿದೆಯ ಪ್ರಸ್ತಾವಿತ ತಿದ್ದುಪಡಿಯನ್ನು ವಿಧಾನಸಭೆಯಲ್ಲಿ ಮಂಡಿಸಬಾರದು ಎಂದು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್‌ನ ಗೋ ರಕ್ಷಾ ವಿಭಾಗದ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ತುಮಕೂರು ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯಿದೆಯ ಪ್ರಸ್ತಾವಿತ ತಿದ್ದುಪಡಿಯನ್ನು ವಿಧಾನಸಭೆಯಲ್ಲಿ ಮಂಡಿಸಬಾರದು ಎಂದು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್‌ನ ಗೋ ರಕ್ಷಾ ವಿಭಾಗದ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.

ನಗರದಲ್ಲಿ ನಡೆದ ಪ್ರತಿಭಟನೆಯನ್ನು ಬೆಂಬಲಿಸಿ ಬಿಜೆಪಿ ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು, ಮುಖಂಡರು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.ನಗರದ ಜಿಜಿಎಸ್ ವೃತ್ತದಲ್ಲಿ ವಿಶ್ವ ಹಿಂದೂ ಪರಿಷತ್, ಭಜರಂಗದಳ, ಬಿಜೆಪಿ ಕಾರ್ಯಕರ್ತರು ಗೋ ಹತ್ಯೆ ತಡೆಯಲು ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಕಾನೂನನ್ನು ಸಡಿಲಗೊಳಿಸಿ, ಗೋ ಹತ್ಯೆಗೆ ಸಹಕಾರ, ಪ್ರೋತ್ಸಾಹ ನೀಡಲು ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ಮುಂದಾಗಿರುವುದನ್ನು ವಿರೋಧಿಸಿ, ಜಾರಿಗೊಳಿಸಬಾರದು ಎಂದು ಒತ್ತಾಯಿಸಿ ಘೋಷಣೆ ಕೂಗಿದರು.ಪ್ರತಿಭಟನಾ ಸ್ಥಳಕ್ಕೆ ಕರೆತಂದಿದ್ದ ಗೋವುಗಳಿಗೆ ಕಾರ್ಯಕರ್ತರು ಪೂಜೆ ಸಲ್ಲಿಸಿ, ನಮಸ್ಕರಿಸಿದರು. ಈ ವೇಳೆ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಡಿ.ಜಿ. ಪ್ರದೀಪ್‌ಕುಮಾರ್, ಬಹುಸಂಖ್ಯಾತ ಹಿಂದೂಗಳು ಪೂಜಿಸುವ ಗೋ ಮಾತೆಯ ಹತ್ಯೆ ತಡೆಗೆ ಹಿಂದಿನ ಬಿಜೆಪಿ ಸರ್ಕಾರ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆ ಜಾರಿಗೊಳಿಸಿತ್ತು. ಹಿಂದೂಗಳ ಭಾವನೆಗೆ ಧಕ್ಕೆ ತಂದು ಮತೀಯ ಓಲೈಕೆಗಾಗಿ ಈ ಸರ್ಕಾರ ಗೋ ಹತ್ಯೆ ನಿಷೇಧ ಕಾಯ್ದೆಗೆ ತಿದ್ದುಪಡಿ ತರುವ ಹುನ್ನಾರ ನಡೆಸಿರುವುದು ಸರಿಯಲ್ಲ, ಕಾಯ್ದೆಯನ್ನು ಯಥಾಸ್ಥಿತಿ ಉಳಿಸಬೇಕು ಹಾಗೂ ಮತ್ತಷ್ಟು ಕಠಿಣವಾಗಿ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಗೋವುಗಳನ್ನು ಅತ್ಯಂತ ಹಿಂಸಾತ್ಮಕವಾಗಿ, ಒಂದೇ ವಾಹನದಲ್ಲಿ ಕ್ರೂರವಾಗಿ ಸಾಗಾಟ ಮಾಡುತ್ತಿರುವ ಪ್ರಕರಣಗಳು ಕಂಡುಬರುತ್ತವೆ. ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಾದಾಗಿನಿಂದ ಆ ಕ್ರೂರತೆ ನಿಯಂತ್ರಣದಲ್ಲಿದಿತ್ತು. ಈ ಕಾಯ್ದೆಯನ್ನು ಮತ್ತಷ್ಟು ಬಿಗಿ ಮಾಡಿ ಕಟ್ಟುನಿಟ್ಟಾಗಿ ಜಾರಿ ಮಾಡಬೇಕಾದ ಸರ್ಕಾರ ಇನ್ನಷ್ಟು ಸಡಿಲಗೊಳಿಸಿ ಗೋ ಕಳ್ಳರಿಗೆ ಅನುಕೂಲ ಮಾಡುವ ಪ್ರಯತ್ನ ಮಾಡಲು ಹಾಗೂ ಗೋವುಗಳನ್ನು ಸುಲಭವಾಗಿ ಸಾಗಾಟ ಮಾಡಲು ರಕ್ಷಣೆ ಕೊಡುವಂತಹ ಹುನ್ನಾರದ ಪ್ರಯತ್ನ ಮಾಡಲು ಹೊರಟಿದೆ. ಗೋ ಕಳ್ಳರಿಗೆ ತಿದ್ದುಪಡಿಯಿಂದ ನಿರ್ಭಯತ್ವ ಕೊಟ್ಟಂತಾಗುವುದು, ಇದು ಸಂವಿಧಾನ ವಿರೋಧಿಯಾಗಿದೆ. ಯಾವುದೇ ಕಾರಣಕ್ಕೂ ಕಾಯಿದೆಯನ್ನು ತಿದ್ದುಪಡಿ ಮಾಡಬಾರದು ಎಂದು ಆಗ್ರಹಿಸಿದರು. ವಿಶ್ವ ಹಿಂದೂ ಪರಿಷತ್ ವಿಭಾಗೀಯ ಸಂಚಾಲಕ ಜೀವನ್, ಸ್ವದೇಶಿ ಜಾಗೃತಿ ಮಂಚ್ ಸಂಚಾಲಕ ಸಿದ್ಧೇಶ್, ಬಿಜೆಪಿ ನಗರ ಅಧ್ಯಕ್ಷ ಟಿ.ಕೆ.ಧನುಷ್, ಉಪಾಧ್ಯಕ್ಷ ಕಿರ್ಲೋಸ್ಕರ್ ಕುಮಾರ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ನವಚೇತನ್, ಒಬಿಸಿ ಮೋರ್ಚಾ ಅಧ್ಯಕ್ಷ ಕೆ.ವೇದಮೂರ್ತಿ ಸೇರಿದಂತೆ ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ನಂತರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರದ ಕಾರ್ಯದರ್ಶಿಗೆ ಮನವಿಪತ್ರ ಸಲ್ಲಿಸಿ ಗೋ ಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿ ಮಾಡದಂತೆ ಸರ್ಕಾರಕ್ಕೆ ಒತ್ತಾಯಿಸಿದರು.

ಕೋಟ್‌..

ಗೋವು ಎಂದರೆ ಕೇವಲ ಪಶುವಲ್ಲ ಅದು ನಮ್ಮ ಸಂಸ್ಕೃತಿಯ ಭಾಗವಾಗಿದೆ. ಜೊತೆಗೆ ಗೋವಿನ ಉತ್ಪನ್ನಗಳಿಂದ ಮಣ್ಣಿನ ಫಲವತ್ತತೆ ಹೆಚ್ಚುವಲ್ಲದೆ ರಾಸಾಯನಿಕಗಳಿಂದ ಬೆಳೆಗಳನ್ನು ರಕ್ಷಿಸಬಹುದಾಗಿದೆ. ಇದರಿಂದಾಗಿ ಕೇವಲ ಹಿಂದುಗಳಿಗೆ ಮಾತ್ರವಲ್ಲ ಬದಲಾಗಿ ಸಮಸ್ತ ಜನರಿಗೂ ವಿಷಮುಕ್ತ ಆಹಾರ ದೊರೆಯಲಿದೆ. ಸರ್ಕಾರ ಕೇವಲ ಒಂದು ಧರ್ಮದ ವಿರುದ್ಧ ಆದೇಶಗಳನ್ನು ಮಾಡುವ ಮೊದಲು ಸರ್ವರ ಹಿತವಾಗುವುದನ್ನು ಮಾಡಬೇಕು. ಅದುವೇ ಚುನಾಯಿತ ಸರ್ಕಾರದ ಜವಾಬ್ದಾರಿ. - ಜೀವನ್, ವಿಶ್ವ ಹಿಂದೂ ಪರಿಷತ್ ವಿಭಾಗೀಯ ಸಂಚಾಲಕ