ಟಾಟಾ ಪವರ್ ಕಂಪನಿಗೆ ಸಮಾನಾಂತರ ವಿದ್ಯುತ್ ವಿತರಣಾ ಪರವಾನಗಿ ನೀಡಲು ವಿರೋಧ
ಕನ್ನಡಪ್ರಭ ವಾರ್ತೆ ಕೋಲಾರನಗರದ ಕೆಇಬಿ ಸಮುದಾಯ ಭವನದಲ್ಲಿ ನಡೆದ ವಿವಿಧ ಸಂಘಟನೆಗಳ ಸಭೆಯಲ್ಲಿ ಬೆಸ್ಕಾಂ ವ್ಯಾಪ್ತಿಯಲ್ಲಿ ಟಾಟಾ ಪವರ್ ಕಂಪನಿಗೆ ಸಮಾನಾಂತರ ವಿದ್ಯುತ್ ವಿತರಣಾ ಪರವಾನಗಿ ನೀಡುವ ಪ್ರಸ್ತಾವನೆ ತಿರಸ್ಕರಿಸಲಾಯಿತು ಹಾಗೂ ಖಾಸಗೀಕರಣದ ವಿರುದ್ಧ ಹೋರಾಟ ಮಾಡಲು ಸರ್ವಾನುಮತದಿಂದ ತೀರ್ಮಾನ ಅಂಗೀಕರಿಸಲಾಯಿತು.
ಸಭೆಯಲ್ಲಿ ಮಾತನಾಡಿದ ಹಲವು ಸಂಘಟನೆಗಳ ಮುಖಂಡರು, ಖಾಸಗೀಕರಣದಿಂದ ಸಾಮಾನ್ಯ ಸಾರ್ವಜನಿಕರಿಗೆ ಹಾಗೂ ರೈತರಿಗೆ ತೊಂದರೆ ಆಗಲಿದ್ದು, ರೈತರ ಹಿತಾಸಕ್ತಿ ಮತ್ತು ಸಾರ್ವಜನಿಕ ವಿದ್ಯುತ್ ಸೇವೆಗಳ ರಕ್ಷಣೆಯೇ ನಮ್ಮ ಪ್ರಮುಖ ಉದ್ದೇಶವಾಗಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ ಟಾಟಾ ಪವರ್ ಕಂಪನಿಗೆ ಸಮಾನಾಂತರ ವಿದ್ಯುತ್ ವಿತರಣಾ ಪರವಾನಗಿ ನೀಡುವ ಪ್ರಸ್ತಾವನೆಯ ಬಗ್ಗೆ ನಮ್ಮ ತೀವ್ರ ವಿರೋಧ ಈ ಮೂಲಕ ದಾಖಲಿಸುತ್ತೇವೆ ಎಂದರು.ಕೋಲಾರ ವಲಯದ ಏಪ್ರಿಲ್-೨೦೨೬ರ ಡಿಸಿಬಿ ಅಂಕಿ-ಅಂಶಗಳ ಪ್ರಕಾರ ಒಟ್ಟು ೧೪,೩೪,೦೩೦ ಗ್ರಾಹಕರು ಇದ್ದು, ಮಾಸಿಕ ಒಟ್ಟು ಆದಾಯ ಬೇಡಿಕೆ ೪೩೮.೮೯ ಕೋಟಿ ಆಗಿದೆ.
ಐಖಿ-೧ (ಗೃಹ ಜ್ಯೋತಿ/ಕುಟೀರ ಜ್ಯೋತಿ), ಐಖಿ-೪ (ಕೃಷಿ ಪಂಪ್‌ಸೆಟ್), ಐಖಿ-೬-WS-(ನೀರು ಸರಬರಾಜು), ಐಖಿ-೬ Sಐ-(ಬೀದಿ- ದೀಪಗಳು) ಸೇರಿದಂತೆ ಸರ್ಕಾರದ ಅನುದಾನಿತ ವರ್ಗಗಳಿಗೆ ಸೇರಿದ ೧೨,೩೩,೩೩೯ ಗ್ರಾಹಕರಿಂದ ೩೪೪.೯೪ ಕೋಟಿ ಮೌಲ್ಯದ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಈ ವರ್ಗಗಳಿಂದ ಬರುವ ಅನುದಾನ ಮೊತ್ತ ನೇರವಾಗಿ ಬೆಸ್ಕಾಂ ಖಾತೆಗೆ ಜಮೆಯಾಗುವುದಿಲ್ಲ. ಉಳಿದ ಕೇವಲ ೨,೦೦,೫೦೭ ಗ್ರಾಹಕರು ಮಾತ್ರ ಬೆಸ್ಕಾಂಗೆ ಆದಾಯ ತರುವ ವರ್ಗಗಳಾಗಿದ್ದು, ಇವರಿಂದ ಮಾಸಿಕ ಸುಮಾರು ೯೧.೫೫ ಕೋಟಿ ರು. ಆದಾಯ ದೊರೆಯುತ್ತದೆ ಎಂದು ವಿವರಿಸಿದರು.
ಟಾಟಾ ಪವರ್ ಕಂಪನಿಯು ಲಾಭದಾಯಕ ಗ್ರಾಹಕರನ್ನು ಮಾತ್ರ ಆಯ್ಕೆ ಮಾಡಿಕೊಂಡು ಸೇವೆ ನೀಡಲು ಅವಕಾಶ ದೊರೆತರೆ, ಬೆಸ್ಕಾಂ ಸಂಸ್ಥೆಯ ಆರ್ಥಿಕ ಸ್ಥಿತಿ ಹದಗೆಡುವ ಅಪಾಯವಿದೆ ಎಂದರು.
ಖಾಸಗೀಕರಣ ಪರಿಣಾಮವಾಗಿ ರೈತರಿಗೆ ಉಚಿತ ವಿದ್ಯುತ್ ಪೂರೈಕೆ ಯೋಜನೆಗೆ ಧಕ್ಕೆಯಾಗಬಹುದು. ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸೇವೆಗಳ ಗುಣಮಟ್ಟ ಕುಸಿಯುವ ಸಾಧ್ಯತೆ ಇದೆ. ಸಾಮಾಜಿಕ ಜವಾಬ್ದಾರಿಯನ್ನು ಹೊತ್ತಿರುವ ಬೆಸ್ಕಾಂಗೆ ಭಾರ ಹೆಚ್ಚಾಗುತ್ತದೆ, ರಾಜ್ಯ ಸರ್ಕಾರದ ಕಲ್ಯಾಣ ಯೋಜನೆಗಳ ಅನುಷ್ಠಾನಕ್ಕೆ ತೊಂದರೆ ಉಂಟಾಗಬಹುದು.ವಿದ್ಯುತ್ ಕ್ಷೇತ್ರದಲ್ಲಿ ಅಸಮಾನ ಸ್ಪರ್ಧೆ ಉಂಟಾಗಿ ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ಉಂಟಾಗುತ್ತದೆ, ಬೆಸ್ಕಾಂನ ಆರ್ಥಿಕ ಸಾಮರ್ಥ್ಯ ಕುಸಿದರೆ ರೈತರು ಹಾಗೂ ಸಾಮಾನ್ಯ ಗ್ರಾಹಕರು ನೇರವಾಗಿ ತೊಂದರೆಗೆ ಒಳಗಾಗುತ್ತಾರೆ ಎಂದರು.
ಆದ್ದರಿಂದ, ವಿದ್ಯುತ್ ಕಾಯ್ದೆ ೨೦೦೩ರ ಸೆಕ್ಷನ್ ೧೪ ಮತ್ತು ೧೫ ರ ಅಡಿಯಲ್ಲಿ ಸಾರ್ವಜನಿಕ ಹಿತಾಸಕ್ತಿ, ರೈತರ ಹಿತಾಸಕ್ತಿ ಹಾಗೂ ರಾಜ್ಯದ ವಿದ್ಯುತ್ ವಿತರಣಾ ವ್ಯವಸ್ಥೆಯ ಸುಸ್ಥಿರತೆಯನ್ನು ಗಮನದಲ್ಲಿಟ್ಟುಕೊಂಡು, ಬೆಸ್ಕಾಂ ವ್ಯಾಪ್ತಿಯಲ್ಲಿ ಟಾಟಾ ಪವರ್ ಕಂಪನಿಗೆ ಸಮಾನಾಂತರ ಪರವಾನಗಿ ನೀಡುವ ಅರ್ಜಿಯನ್ನು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ತಿರಸ್ಕರಿಸಬೇಕೆಂದು ಒತ್ತಾಯಿಸಿದರು.ಬೆಸ್ಕಾಂ ಖಾಸಗೀಕರಣ ವಿರೋಧಿಸಿ ಅನಿವಾರ್ಯ ಆದರೆ ಹೋರಾಟ ಮಾಡುವ ಹಾಗೂ ಇದೇ ತಿಂಗಳ ೨೧ ರ ಒಳಗೆ ಎಲ್ಲಾ ಸಂಸ್ಥೆಗಳು,ಸಂಘಟನೆ ಗಳು ತಮ್ಮ ಆಕ್ಷೇಪಣೆ ಸಲ್ಲಿಸಲು ತೀರ್ಮಾನ ಸಭೆ ಸರ್ವಾನುಮತದಿಂದ ಅಂಗೀಕರಿಸಿತು ಹಾಗೂ ಸಾಂಕೇತಿಕವಾಗಿ ನಗರದ ಡೂಂ ಲೈಟ್ ವೃತ್ತದಲ್ಲಿ ಮಾನವ ಸರಪಳಿ ಮಾಡಿ ಕೆಲ ಹೊತ್ತು ಪ್ರತಿಭಟನೆ ನಡೆಸಿದರು.