ಅರಣ್ಯ ಒತ್ತುವರಿ ತೆರವಿಗೆ ವಿರೋಧ: ಕಳಸ ಬಂದ್ ಯಶಸ್ವಿ

| Published : Sep 12 2024, 01:54 AM IST

ಸಾರಾಂಶ

ಕಳಸ, ಅರಣ್ಯ ಒತ್ತುವರಿ ತೆರವು ವಿರೋಧಿಸಿ ರೈತರು ಬುಧವಾರ ನಡೆಸಿದ ಕಳಸ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಅಂಗಡಿ ಮಾಲೀಕರು ವಹಿವಾಟು ಬಂದ್‌ ಮಾಡಿ ಬೆಂಬಲ ಸೂಚಿಸಿದ್ದರು. ಮುಂಜಾಗ್ರತಾ ಕ್ರಮವಾಗಿ ತಾಲೂಕು ಕೇಂದ್ರದ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಬಸ್‌ ಸಂಚಾರ ವಿರಳವಾಗಿತ್ತು.

- ಸಾವಿರಾರು ಸಂಖ್ಯೆಯಲ್ಲಿ ಸೇರಿದ ರೈತರು । ಪಕ್ಷಾತೀತವಾಗಿ ನಡೆದ ಪ್ರತಿಭಟನೆ । ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಭಾಗಿ

ಕನ್ನಡಪ್ರಭ ವಾರ್ತೆ ಕಳಸ

ಅರಣ್ಯ ಒತ್ತುವರಿ ತೆರವು ವಿರೋಧಿಸಿ ರೈತರು ಬುಧವಾರ ನಡೆಸಿದ ಕಳಸ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಅಂಗಡಿ ಮಾಲೀಕರು ವಹಿವಾಟು ಬಂದ್‌ ಮಾಡಿ ಬೆಂಬಲ ಸೂಚಿಸಿದ್ದರು. ಮುಂಜಾಗ್ರತಾ ಕ್ರಮವಾಗಿ ತಾಲೂಕು ಕೇಂದ್ರದ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಬಸ್‌ ಸಂಚಾರ ವಿರಳವಾಗಿತ್ತು.

ಕಳಸೇಶ್ವರ ದೇವಾಲಯದಿಂದ ಹೊರಟ ಪ್ರತಿಭಟನಾ ಮೆರವಣಿಗೆಯಲ್ಲಿ ಸಂಸದರು, ಶಾಸಕರು, ಮಾಜಿ ಶಾಸಕರು, ಸರ್ವ ಪಕ್ಷಗಳ ಮುಖಂಡರು ಪಾಲ್ಗೊಂಡು ರೈತರ ಹೋರಾಟಕ್ಕೆ ಸಾಥ್‌ ನೀಡಿದರು.

ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ನಮ್ಮ ಕ್ಷೇತ್ರದಲ್ಲಿ ಒಂದು ಇಂಚು ಭೂಮಿಯನ್ನು ಖುಲ್ಲಾ ಮಾಡಲು ನಾನು ಅವಕಾಶ ನೀಡಲ್ಲ. ಅರಣ್ಯ ಅಧಿಕಾರಿಗಳು ತೆರವಿಗೆ ಯತ್ನಿಸಿದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸುತ್ತೇನೆ ಎಂದು ಎಚ್ಚರಿಕೆ ನೀಡಿದರು.

ದೇಶಕ್ಕೆ ಕೋಟ್ಯಂತರ ರು. ವಿದೇಶಿ ವಿನಿಮಯ ತರುವ ಮಲೆನಾಡಿನ ರೈತರ ಜೀವನಕ್ಕೆ ಭದ್ರತೆ ಇಲ್ಲ ಎಂಬುದು ಬೇಸರದ ಸಂಗತಿ. ಈ ಭಾಗದ ರೈತರು ಯಾರು ಆತಂಕ ಪಡುವ ಅಗತ್ಯವಿಲ್ಲ. ನಾನು ನಿಮ್ಮ ಸೇವಕ. ರೈತರ ಪರವಾದ ಯಾವುದೇ ಹೋರಾಟಕ್ಕೂ ನಾನು ಸಿದ್ಧನಿದ್ದೇನೆ ಎಂದು ಧೈರ್ಯ ತುಂಬಿದರು.

ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ. ರಾಜೇಗೌಡ ಮಾತನಾಡಿ, ಜಿಲ್ಲೆಯ ಅನೇಕ ಸರ್ವೆ ನಂಬರ್‌ಗಳಲ್ಲಿ ಡೀಮ್ಡ್ ಅರಣ್ಯ, ಕಂದಾಯ ಭೂಮಿ ಜತೆಗೆ ಸೆಕ್ಷನ್ 4 ಅಧಿಸೂಚನೆ ಮಾಡಿರುವುದರಿಂದ ಗೊಂದಲ ಹೆಚ್ಚಾಗಿದೆ. ಎಕರೆಗೆ 20 ಮರ ಇದ್ದರೆ ಅದು ಅರಣ್ಯ ಎಂಬ ಹುಚ್ಚು ಅಭಿಪ್ರಾಯದ ಆಧಾರಕ್ಕೆ ಮನ್ನಣೆ ಕೊಡುವುದಾದರೆ ಮಲೆನಾಡಿನ ಪ್ರತಿಯೊಂದು ಜಮೀನು ಕೂಡ ಕಾಡು ಆಗುತ್ತದೆ. ಆಗ ಕೃಷಿಕರೆಲ್ಲರೂ ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು.

ದೇಶದ ಜನಸಂಖ್ಯೆ 35 ಕೋಟಿ ಇದ್ದಾಗ ಮಾಡಿದ ಅರಣ್ಯ ಕಾನೂನು, ದೇಶದ ಜನಸಂಖ್ಯೆ 140 ಕೋಟಿ ಆಗಿರುವಾಗ ಅಪ್ರಸ್ತುತ ಆಗುತ್ತದೆ. ಈಗ ಕೃಷಿ ಭೂಮಿ ಖುಲ್ಲಾ ಮಾಡಿದರೆ ದೇಶದ ಎಲ್ಲರಿಗೂ ಆಹಾರ ಸಿಗದೇ ಇರುವ ಅಪಾಯವೂ ಇದೆ ಎಂದರು.ಕಾಂಗ್ರೆಸ್ ಮುಖಂಡ ಸುಧೀರ್ ಕುಮಾರ್ ಮುರೊಳ್ಳಿ ಮಾತನಾಡಿ, ಕಳಸ ತಾಲೂಕಿನ ಸೆಕ್ಷನ್ 4 ಚಿತ್ರಣ ಗಮನಿಸಿದರೆ ಶೇ.80 ರಷ್ಟು ಭೂಮಿ ಮೀಸಲು ಅರಣ್ಯ ಮಾಡುವ ಹುನ್ನಾರ ಕಂಡು ಬರುತ್ತದೆ. ಈ ಬಗ್ಗೆ ಪ್ರತಿಯೊಬ್ಬರೂ ತಮ್ಮ ಆಕ್ಷೇಪಣೆ ಯನ್ನು ಸೆಟ್ಲ್‌ಮೆಂಟ್‌ ಅಧಿಕಾರಿಗೆ ಸಲ್ಲಿಸಬೇಕು ಎಂದರು.

ಮಾಜಿ ಶಾಸಕ ಪ್ರಮೋದ್ ಮಧ್ವರಾಜ್ ಮಾತನಾಡಿ, ದೇಶದ ಎಲ್ಲ ಅರಣ್ಯ ಕಾಯ್ದೆಗಳು ಕೃಷಿಕರ ವಿರುದ್ಧವಾಗಿವೆ. ಅವುಗಳಿಗೆ ತಿದ್ದುಪಡಿ ತರಲು ಇದು ಸಕಾಲ ಎಂದು ಹೇಳಿದರು.ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ಮಾತನಾಡಿ, ಜಿಲ್ಲೆಯಲ್ಲಿ ಶೇ.90 ಉದ್ಯೋಗ ನೀಡಿರುವ ಕಾಫಿ ಉದ್ಯಮಕ್ಕೆ ಕಳೆದ 4 ದಶಕಗಳಿಂದ ಒತ್ತುವರಿ ಸಮಸ್ಯೆ ಕಂಟಕವಾಗಿದೆ ಎಂದರು. ಜಿ.ಕೆ. ಮಂಜಪ್ಪಯ್ಯ ಮಾತನಾಡಿ, ಅವಿಭಕ್ತ ಕುಟುಂಬಗಳು ವಿಭಜನೆ ಆಗುತ್ತಿದ್ದ ಆಸುಪಾಸಿನಲ್ಲಿ ರೈತರು ಕೃಷಿ ಜಮೀನನ್ನು ಮಾಡಿದ್ದಾರೆ. ಇದು ಭೂ ಕಬಳಿಕೆ ಅಲ್ಲ. 1.15 ಲಕ್ಷ ಎಕರೆ ಕಂದಾಯ ಭೂಮಿಯನ್ನು ಡೀಮ್ಡ್ ಎಂದು ಆದೇಶ ಮಾಡುವಾಗ ಕೃಷಿ ಭೂಮಿ ಹೊರತುಪಡಿಸಿಲ್ಲ. ಗಡಿ ಗುರುತು ಮಾಡಿಲ್ಲ. ಅರಣ್ಯ ಇಲಾಖೆ ಸ್ವಾಧೀನದಲ್ಲಿ ಇಲ್ಲದ ಭೂಮಿಯನ್ನು ಹೇಗೆ 4 (1) ಅಧಿಸೂಚನೆ ಮಾಡಿದಿರಿ ಎಂದು ಅರಣ್ಯ ಇಲಾಖೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.ಮಾಜಿ ಶಾಸಕ ವಿಶ್ವನಾಥ್ ಮಾತನಾಡಿ, ವಿದೇಶಿ ಹಣದ ಆಸೆಗೆ ನಮ್ಮ ಭೂಮಿಯಲ್ಲಿ ಅಕೇಶಿಯಾ ಬೆಳೆದ ನೀವು, ವನ್ಯಜೀವಿ ಗಳು ಕೃಷಿ ಭೂಮಿಗೆ ಲಗ್ಗೆ ಇಡಲು ಕಾರಣರಾಗಿದ್ದೀರಿ ಎಂದು ಅರಣ್ಯ ಇಲಾಖೆಯನ್ನು ದೂಷಿಸಿದರು. ಒತ್ತುವರಿ ಸಮಸ್ಯೆ ಪರಿಹಾರಕ್ಕೆ ಮುಖ್ಯಮಂತ್ರಿ ಬಳಿಗೆ ಸರ್ವಪಕ್ಷಗಳ ನಿಯೋಗ ತೆರಳಿ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದು ತಿಳಿದರು.ಪ್ರತಿಭಟನೆಯಲ್ಲಿ ಬೆಳೆಗಾರರ ಸಂಘದ ಮುಖಂಡರಾದ ಜಯರಾಮ್, ಬಾಲಕೃಷ್ಣ, ಕೆ.ಆರ್. ಭಾಸ್ಕರ್, ಪ್ರಭಾಕರ್, ಶೇಷಗಿರಿ, ಶ್ರೇಣಿಕ, ರಾಜೇಂದ್ರ, ಕೆಜಿಎಫ್ ಉಪಾಧ್ಯಕ್ಷ ಎ.ಕೆ. ವಸಂತೇಗೌಡ, ಎಂ.ಬಿ. ಶೈಲೇಶ್, ಮಾಜಿ ಶಾಸಕ ಎಂ.ಪಿ. ಕುಮಾರ ಸ್ವಾಮಿ, ರೈತ ಸಂಘದ ದಯಾಕರ್ ಹಾಗೂ ರೈತರು ಪಾಲ್ಗೊಂಡಿದ್ದರು.

-----

ಕೆಸಿಕೆಎಂ5:

ಅರಣ್ಯ ಒತ್ತುವರಿ ತೆರವು ವಿರೋಧಿಸಿ ಬುಧವಾರ ಕಳಸ ಪಟ್ಟಣ ಬಂದ್‌ ಮಾಡಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.