ಸ್ವಹಿತಾಸಕ್ತಿಗಾಗಿ ಇಂದಿರಾ ಕ್ಯಾಂಟಿನ್‌ ನಿರ್ಮಾಣಕ್ಕೆ ವಿರೋಧ: ಅಬ್ಬಯ್ಯ

| Published : Sep 18 2024, 01:46 AM IST

ಸ್ವಹಿತಾಸಕ್ತಿಗಾಗಿ ಇಂದಿರಾ ಕ್ಯಾಂಟಿನ್‌ ನಿರ್ಮಾಣಕ್ಕೆ ವಿರೋಧ: ಅಬ್ಬಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಇಂದಿರಾ ಕ್ಯಾಂಟೀನ್‌ಗೆ ವಿರೋಧ ಮಾಡುವವರಲ್ಲಿ ಒಬ್ಬರು ಸ್ಮಶಾನದ 20 ಗುಂಟೆ ಜಾಗವನ್ನು ಅತಿಕ್ರಮಣ ಮಾಡಿಕೊಂಡು ಕಟ್ಟಿಗೆ ಅಡ್ಡೆ ಸೇರಿ ಇನ್ನಿತರೆ ಚಟುವಟಕೆ ನಡೆಸುತ್ತಿದ್ದಾರೆ. ಈ ಬಗ್ಗೆ ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದ ಅಬ್ಬಯ್ಯ.

ಹುಬ್ಬಳ್ಳಿ:

ಇಲ್ಲಿಯ ಮಂಟೂರ ರಸ್ತೆಯ ಶ್ರೀಹರಿಶ್ಚಂದ್ರ ಸ್ಮಶಾನದ ಬಳಿಯ ಬಡ ಜನರ ಅನುಕೂಲಕ್ಕಾಗಿ ಇಂದಿರಾ ಕ್ಯಾಂಟೀನ್‌ ನಿರ್ಮಿಸಲಾಗಿದೆ. ಆದರೆ, ಕೆಲವರು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮತ್ತು ಸ್ವ ಹಿತಾಸಕ್ತಿಗಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇಲ್ಲಿನ ಜನರು ಬೇಡವೆಂದು ಹೇಳಿದರೆ ಸ್ಥಳಾಂತರಿಸಲಾಗುವುದು ಎಂದು ಶಾಸಕ, ಸ್ಲಂ ಬೋರ್ಡ್‌ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಜಾಗವನ್ನು ತಾವೇನೂ ಸ್ವಂತಕ್ಕಾಗಿ ಬಳಸಿಕೊಳ್ಳುತ್ತಿಲ್ಲ. ಬಡವರಿಗೆ ಕಡಿಮೆ ವೆಚ್ಚದಲ್ಲಿ ಊಟ, ಉಪಾಹಾರ ದೊರಕಿಸಿಕೊಡಬೇಕೆಂದು ಕ್ಯಾಂಟೀನ್‌ ನಿರ್ಮಿಸಲಾಗಿದೆ ಎಂದರು.

ದಲಿತರ ಬಗ್ಗೆ ಕಾಳಜಿ ಇರುವುದರಿಂದ ಆ ಪ್ರದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ₹100 ಕೋಟಿ ವೆಚ್ಚದಲ್ಲಿ ಆ ಭಾಗದಲ್ಲಿ ರಸ್ತೆ, ಯುಜಿಡಿ, ವಸತಿ ಸೌಲಭ್ಯ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯ ತಮ್ಮ ಅವಧಿಯಲ್ಲಿ ಮಾಡಲಾಗಿದೆ ಎಂದ ಅವರು, ಸ್ಮಶಾನದಲ್ಲಿ ₹2.60 ಕೋಟಿ ವೆಚ್ಚದಲ್ಲಿ ವಿದ್ಯುತ್ ಚಿತಾಗಾರ, ₹1.75 ಲಕ್ಷ ವೆಚ್ಚದಲ್ಲಿ ಕಾಂಪೌಂಡ್, ಮುಖ್ಯದ್ವಾರ, ಸೆಕ್ಯೂರಿಟಿ ರೂಂ, ವಾಶಿಂಗ್ ಏರಿಯಾ, ಸುತ್ತಲೂ ರಸ್ತೆ ಸೇರಿ ಹತ್ತಾರು ಕಾಮಗಾರಿ ಕೈಗೊಂಡಿದ್ದೇನೆ. ರಸ್ತೆಗೆ ಹೊಂದಿಕೊಂಡಿರುವ ಸ್ಮಶಾನದ ಜಾಗದಲ್ಲಿ ಕ್ಯಾಂಟೀನ್‌ ನಿರ್ಮಿಸಿ ಜನರಿಗೆ ಅನುಕೂಲ ಮಾಡಿಕೊಡಲಾಗಿದೆ. ಕಾಂಪೌಂಡ್ ಕೆಡವಿ ಕ್ಯಾಂಟೀನ್‌ ನಿರ್ಮಿಸಲಾಗಿದೆ ಎಂದು ಹೇಳಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಇಂದಿರಾ ಕ್ಯಾಂಟೀನ್‌ಗೆ ವಿರೋಧ ಮಾಡುವವರಲ್ಲಿ ಒಬ್ಬರು ಸ್ಮಶಾನದ 20 ಗುಂಟೆ ಜಾಗವನ್ನು ಅತಿಕ್ರಮಣ ಮಾಡಿಕೊಂಡು ಕಟ್ಟಿಗೆ ಅಡ್ಡೆ ಸೇರಿ ಇನ್ನಿತರೆ ಚಟುವಟಕೆ ನಡೆಸುತ್ತಿದ್ದಾರೆ. ಈ ಬಗ್ಗೆ ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದ ಅಬ್ಬಯ್ಯ, ಮೊದಲು ಆ ಸ್ಥಳದಲ್ಲಿನ ಅತಿಕ್ರಮಣ ತೆರವುಗೊಳಿಸಲಿ. ಕೆಲವರು ತಮ್ಮ ಹೋಟೆಲ್ ಉದ್ಯಮಕ್ಕೆ ಸಮಸ್ಯೆ ಆಗುತ್ತದೆ ಎಂಬ ಕಾರಣಕ್ಕೆ ಇಂದಿರಾ ಕ್ಯಾಂಟೀನ್‌ಗೆ ವಿರೋಧಿಸುತ್ತಿದ್ದಾರೆ. ವಿರೋಧ ಮಾಡುತ್ತಿರುವವರು ಅಲ್ಲಿಯ ನಿವಾಸಿಗಳೇ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಇಂದಿರಾ ಕ್ಯಾಂಟೀನ್‌‌ಗೆ ಸ್ಥಳೀಯರಿಂದ ಯಾವುದೇ ವಿರೋಧವಿಲ್ಲ. ಒಂದು ವೇಳೆ ಸ್ಥಳೀಯರು ಕ್ಯಾಂಟೀನ್ ಬೇಡ ಎಂದರೆ ಬೇರೆಡೆ ಸ್ಥಳಾಂತರಿಸಲಾಗುವುದು ಎಂದರು.

ಈ ವೇಳೆ ಪಾಲಿಕೆ ನಾಮನಿರ್ದೇಶಿತ ಸದಸ್ಯ ಶ್ರೀನಿವಾಸ ಬೆಳದಡಿ, ಸುಭಾನಿ ಮಲ್ನಾಡ, ಲಕ್ಷ್ಮಣ ಭೋಜಗಾರ ಸೇರಿದಂತೆ ಸ್ಥಳಿಯರು ಇದ್ದರು.

ತಾಕತ್ತು ತೋರಿಸುವ ಅವಶ್ಯಕತೆಯಿಲ್ಲ:

ಕ್ಯಾಂಟೀನ್‌‌ ನಿರ್ಮಾಣಕ್ಕೆ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ವಿರೋಧ ವ್ಯಕ್ತಪಡಿಸಿರುವ ಕುರಿತು ಕೇಳಿದ ಪ್ರಶ್ನೆಗೆ ಶಾಸಕರು, ಮುತಾಲಿಕ್‌ ಏನ್‌ ದೊಡ್ಡ ವ್ಯಕ್ತಿಯಲ್ಲ. ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿರುವುದು ಅವನಲ್ಲ ಎಂದು ಏಕವಚನದಲ್ಲಿ ಕಿಡಿಕಾರಿದರು. ಮುತಾಲಿಕ್‌ ಎಂಥವರು ಎಂಬುವುದು ಎಲ್ಲರಿಗೂ ಗೊತ್ತಿದೆ. ಅವರಿಗೆ ದಲಿತರ ಪರ ಕಾಳಜಿಯಿಲ್ಲ, ಬದಲಾಗಿ ಬೆಂಕಿ ಹಚ್ಚುವುದೇ ಅವರ ಕೆಲಸ. ನನ್ನ ತಾಕತ್ತಿನ ಬಗ್ಗೆ ಪ್ರಶ್ನಿಸಿದ್ದಾರೆ. ಅವರ ಮುಂದೆ ನನ್ನ ತಾಕತ್ತು ತೋರಿಸುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದರು.