ಸಾರಾಂಶ
ಹಿರಿಯೂರು: ತಾಲೂಕು ಒಕ್ಕಲಿಗ ನೌಕರರ ಸಂಘ ಸ್ಥಾಪನೆಗೆ ಕರ್ನಾಟಕ ರಾಜ್ಯ ಕುಂಚಿಟಿಗರ ಒಕ್ಕೂಟ ಹಾಗೂ ಕುಂಚಿಟಿಗರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ನಗರದ ಪ್ರವಾಸಿ ಮಂದಿರದಲ್ಲಿ ಸಭೆ ಸೇರಿ ಖಂಡನಾ ನಿರ್ಣಯ ಸಭೆ ನಡೆಸಿದರು.
ಕುಂಚಿಟಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮೈಸೂರು ಶಿವಣ್ಣ ಮಾತನಾಡಿ, ಸಂವಿಧಾನದಲ್ಲಿ ಜಾತಿ ಬದಲಾವಣೆಗೆ ಅವಕಾಶ ಇಲ್ಲ. ಅಲ್ಲದೆ ಕೆಸಿಎಸ್‌ಆರ್ ನಿಯಮ ಉಲ್ಲಂಘನೆ ಮಾಡಿ ಜಾತಿ ಆಧಾರಿತ ನೌಕರರ ಸಂಘ ಸ್ಥಾಪನೆ ಸಲ್ಲದು. ಆದಾಗ್ಯೂ ಕುಂಚಿಟಗ ಜಾತಿಗೆ ಸೇರಿದ ಕೆಲವರು ತಪ್ಪು ತಿಳುವಳಿಕೆಯಿಂದ ಮೀಸಲಾತಿ ಆಸೆಗಾಗಿ ಅನ್ಯ ಜಾತಿಗಳತ್ತ ಮುಖ ಮಾಡಿದ್ದ ಕುಂಚಿಟಿಗರಿಗೆ ಮರಳಿ ಬಾ ಕುಂಚಿಟಿಗ ಕಾರ್ಯಕ್ರಮದ ಮೂಲಕ ತಂದೆ ಜಾತಿಗೆ ಮಕ್ಕಳನ್ನು ಕರೆ ತರುವ ಕೆಲಸವನ್ನು ನಮ್ಮ ಸಂಘ, ಶಿಕ್ಷಣ ಇಲಾಖೆ ಆಯುಕ್ತರ ಸುತ್ತೋಲೆ ಪಡೆದು ಜಾತಿ ತಿದ್ದುಪಡಿ ಜನಾಂದೋಲನ ಮಾಡುತ್ತಿದೆ ಎಂದರು.ಸಾಮಾಜಿಕ ಕಾರ್ಯಕರ್ತ ಕಸವನಹಳ್ಳಿ ರಮೇಶ್ ಮಾತನಾಡಿ, ಕುಂಚಿಟಿಗ ಜಾತಿಗೆ ಸೇರಿದ ಪಟ್ಟಭದ್ರ ಹಿತಾಸಕ್ತಿ ಹೊಂದಿದ ಕೆಲವು ಸರ್ಕಾರಿ ನೌಕರರು ಸೇರಿಕೊಂಡು ಹಿರಿಯೂರು ತಾಲೂಕು ಒಕ್ಕಲಿಗ ನೌಕರರ ಸಂಘ ಸ್ಥಾಪಿಸಿ 26 ಜನ ಪದಾಧಿಕಾರಿಗಳ ಆಯ್ಕೆ ಪಟ್ಟಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಪ್ರಮುಖ ದಿನ ಪತ್ರಿಕೆಗಳಲ್ಲಿ ವರದಿ ಮಾಡಿ ಜಾತಿ ಬದಲಾವಣೆಗೆ ಪ್ರಚೋದನೆ ನೀಡುವ ಮೂಲಕ ಅಕ್ಷಮ್ಯ ಹಾಗೂ ಶಿಕ್ಷಾರ್ಹ ಅಪರಾಧ ಮಾಡಿದ್ದಾರೆ ಎಂದು ಹೇಳಿದರು.
ಕುಂಚಿಟಿಗ ಕುಲಶಾಸ್ತ್ರ ಅಧ್ಯಯನಕಾರ ಎಸ್.ವಿ.ರಂಗನಾಥ್ ಮಾತನಾಡಿ, ಕುಂಚಿಟಿಗ ಜಾತಿ ಹಿಂದೂ ಧರ್ಮದಲ್ಲಿ ಒಂದು ಸ್ವತಂತ್ರ ಜಾತಿಯಾಗಿದ್ದು, ಇದು ಯಾವುದೇ ಜಾತಿಯ ಉಪಜಾತಿ ಅಲ್ಲವೇ ಅಲ್ಲ. ಪಿತೃ ಸಂಬಂಧಿಯ ಜಾತಿಯು ವ್ಯಕ್ತಿಯ ಸಾಮಾಜಿಕ ಸ್ಥಾನಮಾನಕ್ಕೆ ಪ್ರಮುಖ ಪುರಾವೆಯಾಗುತ್ತದೆ ಎಂದು ಬಾಂಬೆ ಹೈ ಕೋರ್ಟ್ ಇತ್ತೀಚಿಗೆ ಮಹತ್ವದ ತೀರ್ಪು ಪ್ರಕಟಿಸಿದೆ. ಕುಂಚಿಟಗರು ಇದನ್ನು ಮನಗಾಣಬೇಕು. ಅದನ್ನು ಬಿಟ್ಟು ಜಾತಿ ಬದಲಾವಣೆ ಮಾಡಿದರೆ ಸಿಕ್ಕಂತಹ ಸರ್ಕಾರಿ ನೌಕರಿ, ಗೆದ್ದ ರಾಜಕೀಯ ಸ್ಥಾನಮಾನಗಳು ಜಾತಿ ಸಿಂಧುತ್ವ ಪ್ರಮಾಣ ಪತ್ರ ಸಿಗದೆ ಕೈ ತಪ್ಪಿ ಹೋಗಿ ಕ್ರಿಮಿನಲ್ ಮೊಕದ್ದಮೆ ದಾಖಲಾಗುತ್ತದೆ ಎಂದು ಎಚ್ಚರಿಸಿದರು.ಈ ಸಂದರ್ಭದಲ್ಲಿ ಉಪಾಧ್ಯಕ್ಷ ಮಲ್ಲಪ್ಪನಹಳ್ಳಿ ಜೋಗೇಶ್, ಪ್ರಧಾನ ಕಾರ್ಯದರ್ಶಿ ವಿ.ಕುಬೇರಪ್ಪ, ಗೌರವಾಧ್ಯಕ್ಷ ಗಡಾರಿ ಕೃಷ್ಣಪ್ಪ, ನಿರ್ದೇಶಕರಾದ ವಕೀಲ ಲಕ್ಷ್ಮಣ್ ಗೌಡ್ರು, ದಿಂಡಾವರ ಚಂದ್ರಗಿರಿ, ಕಾತ್ರಿಕೇನಹಳ್ಳಿ ಮಂಜುನಾಥ್, ಆಪ್ಟಿಕಲ್ಸ್ ರಾಜೇಶ್, ದೇವರಾಜ್ ಮಾಸ್ಟರ್, ಕೆ.ಕೆ.ಹಟ್ಟಿ ಜಯಪ್ರಕಾಶ್, ಮಾಸ್ತಿಕಟ್ಟೆ ಚಂದ್ರಶೇಖರ್, ಹುಚ್ಚವ್ವನಹಳ್ಳಿ ಅವಿನಾಶ್, ಪೆಪ್ಸಿ ಹನುಮಂತರಾಯ, ಶ್ರೀನಾಥ್, ವೀರಣ್ಣಗೌಡ, ಭಾರತಿ, ರಾಮಸ್ವಾಮಿ, ಮೋಹನ್ ಗೌಡ, ಮಹೇಶ್, ತಿಮ್ಮಣ್ಣ ಮತ್ತಿತರರಿರು.