ಕೇಂದ್ರ ಸರ್ಕಾರದ ಶುಲ್ಕ ಏರಿಕೆ ವಿರೋಧಿಸಿ ದಾವಣಗೆರೆ ಲೋಕಲ್ ಮತ್ತು ಗೂಡ್ಸ್ ಶೆಡ್ ಲಾರಿ ಮಾಲೀಕರ ಸಂಘದ ನೇತೃತ್ವದಲ್ಲಿ ಗುರುವಾರ ಪ್ರಾದೇಶಿಕ ಸಾರಿಗೆ ಕಚೇರಿಯಿಂದ ಲಾರಿಗಳ ಮುಖಾಂತರ ಹೊರಟು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಡಿಸಿ ಮುಖಾಂತರ ಕೇಂದ್ರ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಲಾಯಿತು.
ದಾವಣಗೆರೆ: ಕೇಂದ್ರ ಸರ್ಕಾರದ ಶುಲ್ಕ ಏರಿಕೆ ವಿರೋಧಿಸಿ ದಾವಣಗೆರೆ ಲೋಕಲ್ ಮತ್ತು ಗೂಡ್ಸ್ ಶೆಡ್ ಲಾರಿ ಮಾಲೀಕರ ಸಂಘದ ನೇತೃತ್ವದಲ್ಲಿ ಗುರುವಾರ ಪ್ರಾದೇಶಿಕ ಸಾರಿಗೆ ಕಚೇರಿಯಿಂದ ಲಾರಿಗಳ ಮುಖಾಂತರ ಹೊರಟು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಡಿಸಿ ಮುಖಾಂತರ ಕೇಂದ್ರ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಲಾಯಿತು.ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಎಂ.ದಾದಾಪೀರ್, ಲಾರಿಗಳ ಎಫ್.ಸಿ(ಫಿಟನೆಸ್ ಸರ್ಟಿಫಿಕೇಟ್) ಮತ್ತು ಆರ್.ಆರ್.ಸಿ(ರಿಜಿಸ್ಟ್ರೇಷನ್ ರಿನೀವಲ್ ಸರ್ಟಿಫಿಕೇಟ್) ಶುಲ್ಕವನ್ನು ಹಿಂದೆ 1,400 ರು.ಗಳಿಂದ ಏಕಾಏಕಿ 28,000 ರು.ಗಳಿಗೆ ಹೆಚ್ಚಿಸಲಾಗಿದೆ. ಶುಲ್ಕ ಹೆಚ್ಚಳದಿಂದ ಬಡ ಲಾರಿ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದು ಬಡ ಮತ್ತು ಮಧ್ಯಮ ವರ್ಗದ ಮಾಲೀಕರ ಪಾಲಿಗೆ ದೊಡ್ಡ ಹೊರೆಯಾಗಿದೆ. ಈ ಹೆಚ್ಚಿದ ಮೊತ್ತ ಭರಿಸಲು ಸಾಧ್ಯವಾಗುವುದಿಲ್ಲ. ಕೂಡಲೇ ಸರ್ಕಾರ ಶುಲ್ಕ ಹೆಚ್ಚಳವನ್ನು ರದ್ದುಗೊಳಿಸಿ, ಹಳೆಯ ನೀತಿಯನ್ನೇ ಮುಂದುವರಿಸಬೇಕು ಎಂದು ಒತ್ತಾಯಿಸಿದರು.ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಇಡೀ ದೇಶವೇ ಲಾಕ್‌ಡೌನ್ ಆಗಿದ್ದಾಗಲೂ ಲಾರಿ ಮಾಲೀಕರು ಮತ್ತು ಚಾಲಕರು ತಮ್ಮ ಪ್ರಾಣ ಪಣಕ್ಕಿಟ್ಟು ಹಗಲು-ರಾತ್ರಿ ಎನ್ನದೆ 140 ಕೋಟಿ ಭಾರತೀಯರಿಗೆ ಸರಕು ಸೇವೆ ಕಲ್ಪಿಸಿದರು. ಇದೀಗ ಜಾರಿಗೆ ತಂದಿರುವ ಹೊಸ ಶುಲ್ಕ ನೀತಿಯು ನಮ್ಮನ್ನು ಮತ್ತಷ್ಟು ಸಾಲಗಾರರನ್ನಾಗಿ ಮಾಡುತ್ತದೆ. ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಆದಷ್ಟು ಬೇಗ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದಲ್ಲಿ ಡಿ.9ರಿಂದ ಲಾರಿಗಳ ಸರಕು ಸಾಗಣೆಯನ್ನು ಸಂಪೂರ್ಣವಾಗಿ ನಿಲ್ಲಿಸಿ, ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಗೌರವಾಧ್ಯಕ್ಷ ಅನ್ವರ್ ಸಾಬ್ ಸೇರಿದಂಥೆ ಸಂಘಟನೆ ಮುಖಂಡರು, ಲಾರಿ ಮಾಲೀಕರು ಮತ್ತು ಚಾಲಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.