ಆಟದ ಮೈದಾನ ವಸತಿ ಶಾಲೆಗೆ ನೀಡಲು ವಿರೋಧ

| Published : Mar 15 2024, 01:20 AM IST / Updated: Mar 16 2024, 03:20 PM IST

ಸಾರಾಂಶ

ಹಿಂದಿನ ಜಿಲ್ಲಾಧಿಕಾರಿ ಸೆಲ್ವಮಣಿ ಈ ಬಗ್ಗೆ ವರದಿ ನೀಡುವಂತೆ ತಹಸೀಲ್ದಾರಿಗೆ ಸೂಚಿಸಿದರು. ಅದರಂತೆ ಅಗಿನ ತಹಸೀಲ್ದಾರ ಪರಿಶೀಲನೆ ನಡೆಸಿ ಆಟದ ಮೈದಾನಕ್ಕೆ ನೀಡಬಹುದು ಎಂದು ವರದಿ ಕೊಟ್ಟಿದ್ದರು, ಆದರೆಈಗ ಶಾಲೆಗೆ ಜಾಗ ನೀಡಲು ಹೊರಟಿದ್ದಾರೆಂಬುದು ಗ್ರಾಮಸ್ಥರ ಆರೋಪ

ಕನ್ನಡಪ್ರಭ ವಾರ್ತೆ ಕೋಲಾರ

ಗ್ರಾಮಸ್ಥರು ನಲವತ್ತು ವರ್ಷದಿಂದ ಕ್ರೀಡಾ ಚಟುವಟಿಕೆಗಳಿಗೆ ಉಪಯೋಗಿಸುತ್ತಿರುವ ಗೋಮಾಳ ಜಮೀನಿಗೆ ಬೇಲಿ ಹಾಕಿ ವಸತಿ ಶಾಲೆಗೆ ನೀಡಲು ಬಂದಿದ್ದ ಅಧಿಕಾರಿಗಳನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ಕೋಲಾರ ತಾಲೂಕಿನ ಗಾಜಲದಿನ್ನೆ ಗ್ರಾಮದಲ್ಲಿ ನಡೆದಿದೆ.

ನಲವತ್ತು ವರ್ಷದಿಂದ ಗಾಜಲದಿನ್ನೆ ಗ್ರಾಮಸ್ಥರು ಪೇಟೆಚಾಮನಹಳ್ಳಿ ಸೇರಿದ ಸರ್ವೇ ನಂಬರ್ ೭೧ರಲ್ಲಿನ ಐದು ಎಕರೆ ಗೋಮಾಳ ಜಮೀನನ್ನು ಆಟದ ಮೈದಾನವಾಗಿ ಬಳಸಲಾಗುತ್ತಿದೆ. ಜಮೀನನ್ನು ಸಾರ್ವಜನಿಕ ಆಟದ ಮೈದಾನ ಎಂದು ಖಾತೆ ಮಾಡಿಕೊಳ್ಳಲು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ವಸತಿ ಶಾಲೆಗೆ ನೀಡಲು ವಿರೋಧ: ಇದೀಗ ಏಕಾಏಕಿ ಆಟದ ಮೈದಾನ ಜಮೀನನ್ನು ಡಾ.ಎ.ಪಿ.ಜಿ.ಅಬ್ದುಲ್ ಕಲಾಂ ವಸತಿ ಶಾಲೆಗೆ ಹಸ್ತಾಂತರ ಮಾಡಿ ಗುರುತು ಹಾಕಲು ಅಧಿಕಾರಿಗಳು ಗುತ್ತಿಗೆದಾರರು ಮುಂದಾಗಿದ್ದಾರೆ. ಇದನ್ನು ಪ್ರಶ್ನಿಸಿ ಗಾಜಲದಿನ್ನೆ ಗ್ರಾಮಸ್ಥರು ಫೆನ್ಸಿಂಗ್ ಹಾಕುವುದನ್ನು ತಡೆದು ಪ್ರತಿಭಟಿಸಿದರು.

ಸೆಲ್ವಮಣಿ ಜಿಲ್ಲಾಧಿಕಾರಿಯಾಗಿದ್ದ ವೇಳೆ ದೊಡ್ದಹಸಾಳ ಗ್ರಾಪಂ ವ್ಯಾಪ್ತಿಗೆ ಸೇರಿದ ಗಾಜಲದಿನ್ನೆ ಗ್ರಾಮದ ಹೊರವಲಯದಲ್ಲಿರುವ ಸರ್ವೇ ೭೧ ರಲ್ಲಿನ ಗೋಮಾಳ ಜಮೀನನ್ನು ಆಟದ ಮೈದಾನಕ್ಕೆ ಮೀಸಲಿಡುವಂತೆ ಮನವಿ ಮಾಡಿದ್ದಿವಿ ಎಂದು ಗ್ರಾಪಂ ಸದಸ್ಯ ಮುನಿಸ್ವಾಮಪ್ಪ ಹಾಗೂ ಜಗದೀಶ್ ಹೇಳಿದರು.

ಆಟದ ಮೈದಾನಕ್ಕೆ ನೀಡಲು ಶಿಫಾರಸು: ಸೆಲ್ವಮಣಿ ಈ ಬಗ್ಗೆ ವರದಿ ನೀಡುವಂತೆ ತಹಸೀಲ್ದಾರಿಗೆ ಸೂಚಿಸಿದರು. ಅದರಂತೆ ಅಗಿನ ತಹಸೀಲ್ದಾರ ಪರಿಶೀಲನೆ ನಡೆಸಿ ಆಟದ ಮೈದಾನಕ್ಕೆ ನೀಡಬಹುದು ಎಂದು ವರದಿ ಕೊಟ್ಟಿದ್ದರು, ಆದರೆ ಇದೀಗ ಏಕಾಏಕಿ ಎರಡು ಮೂರು ದಿನದಲ್ಲಿ ಪಹಣಿ ಎಪಿಜಿ ಅಬ್ದುಲ್ ಕಲಾಂ ವಸತಿ ಶಾಲೆಗೆ ಮಾಡಿಕೊಂಡು ಗುರುತು ಹಾಕಿ ಫೆನ್ಸಿಂಗ್ ಹಾಕಲು ಬಂದಿದ್ದಾರೆ ಎಂದು ಆರೋಪಿಸಿ ಫೆನ್ಸಿಂಗ್ ಕಾರ್ಯಕ್ಕೆ ಗ್ರಾಮಸ್ಥರು ಅಡ್ಡಿಪಡಿಸಿದರು.

ವಿಷಯ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ ಹರ್ಷವರ್ಧನ, ಸಾರ್ವಜನಿಕ ಆಟದ ಮೈದಾನಕ್ಕೆ ಲೋಕಸಭಾ ಚುನಾವಣೆ ನಂತರ ಉಳಿದ ಗೋಮಾಳ ಜಮೀನಿನಲ್ಲಿ ಮಾಡಿಕೊಡವುದಾಗಿ ಭರವಸೆ ನೀಡಿ ಅಧಿಕಾರಿಗಳ ಕಾರ್ಯಕ್ಕೆ ಅಡ್ಡಿಪಡಿಸದಂತೆ ಗ್ರಾಮಸ್ಥರಿಗೆ ಸೂಚಿಸಿದರು.

4 ಎಕರೆ ಮೈದಾನಕ್ಕೆ ಮೀಸಲಿಡಿ: ಗ್ರಾಪಂ ಸದಸ್ಯ ಜಗದೀಶ್ ಮಾತನಾಡಿ, ಇರುವ ೧೫ ಸರ್ಕಾರಿ ಗೋಮಾಳ ಜಮೀನಿನಲ್ಲಿ ನಾಲ್ಕು ಎಕರೆ ಸಾರ್ವಜನಿಕ ಆಟದ ಮೈದಾನಕ್ಕೆ ಮೀಸಲಿಟ್ಟು ಕೊಡಲೇ ಖಾತೆ ಮಾಡಿಕೊಡವಂತೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ದೊಡ್ಡಹಸಾಳ ಗ್ರಾಪಂ ವ್ಯಾಪ್ತಿಯ ಸುತ್ತಮುತ್ತಲಿನ ಗ್ರಾಮಸ್ಥರು, ಗಾಜಲದಿನ್ನೆ ಗ್ರಾಮಸ್ಥರು ಸೇರಿದಂತೆ ನೂರಾರು ಯುವಕರು ಹಾಜರಿದ್ದರು.