ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ಗ್ರಾಮೀಣ ಪ್ರದೇಶದ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿಪಡಿಸಲು ರೂಪುರೇಷೆ ಸಿದ್ಧಪಡಿಸಲಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಜನರ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಕೆಲಸಗಳು ನಡೆಯಲಿವೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.ತಾಲೂಕಿನ ಬಿಂಡೇನಹಳ್ಳಿಯಿಂದ ಮಾಟನಕೊಪ್ಪಲು ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ಲೋಕೋಪಯೋಗಿ ಇಲಾಖೆ ವತಿಯಿಂದ 1 ಕೋಟಿ ರು. ವೆಚ್ಚದ ಡಾಂಬರು ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕಳೆದ 5 ವರ್ಷಗಳ ಹಿಂದೆ ತಾವು ಶಾಸಕರಾಗಿದ್ದ ಅವಧಿಯಲ್ಲಿ ಮಂಜೂರು ಮಾಡಿಸಿದ್ದ ಬಹುತೇಕ ರಸ್ತೆ ಕಾಮಗಾರಿಗಳು ಪೂರ್ಣಗೊಳ್ಳದೆ ಅರ್ಧಕ್ಕೆ ನಿಂತಿವೆ. ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ತಾಲೂಕಿನ ಗ್ರಾಮೀಣ ಪ್ರದೇಶದ ಬಹುತೇಕ ರಸ್ತೆಗಳು ಹಾಳಾಗಿವೆ ಎಂದರು.ಹಳ್ಳಿಗಾಡಿನ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಲು ಬಿಂಡೇನಹಳ್ಳಿಯಿಂದ ಮಾಟನಕೊಪ್ಪಲು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು 1 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಹೇಳಿದರು.
ಇದಲ್ಲದೆ ಬಿಂಡೇನಹಳ್ಳಿಯ ಶ್ರೀ ಕೃಷ್ಣ ದೇವಸ್ಥಾನದ ಪಕ್ಕದಿಂದ ಮತ್ತೊಂದು ಮಾರ್ಗವಾಗಿ ಮಾಟನಕೊಪ್ಪಲು ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ಮತ್ತು ಮಾಟನಕೊಪ್ಪಲು ಗ್ರಾಮದಿಂದ ಮಂಡ್ಯ ತಾಲೂಕಿನ ನರಗಲು ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ಹಾಗೂ ಹುಳ್ಳೇನಹಳ್ಳಿಯಿಂದ ಗಂಡುನಿಂಗಿಕೊಪ್ಪಲು, ಹೆಣ್ಣಿ ಚನ್ನನಕೊಪ್ಪಲು ಮಾರ್ಗವಾಗಿ ಮಾಟನಕೊಪ್ಪಲು ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು 5 ಕೋಟಿ ರು. ವೆಚ್ಚದ ಕ್ರಿಯಾಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.ಎರಡು ತಿಂಗಳಲ್ಲಿ ಕಾಮಗಾರಿಗೆ ಮಂಜೂರಾತಿ ಸಿಗಲಿದೆ. ಈ ಕಾಮಗಾರಿಗಳು ಪೂರ್ಣಗೊಂಡಲ್ಲಿ ಈ ಭಾಗದ ಜನರಿಗೆ ರಸ್ತೆ ಸಮಸ್ಯೆಗೆ ಪರಿಹಾರ ಸಿಕ್ಕಂತಾಗುತ್ತದೆ ಎಂದ ಹೇಳಿದರು.
2017 ರಲ್ಲಿ ತಾವು ಶಾಸಕರಾಗಿದ್ದ ಅವಧಿಯಲ್ಲಿ ಮಂಜೂರಾಗಿದ್ದ ನಾಗಮಂಗಲ ಮಂಡ್ಯ ಮುಖ್ಯರಸ್ತೆಯ ಹುಳ್ಳೇನಹಳ್ಳಿ ಗೇಟ್‌ನಿಂದ ಬಿಂಡೇನಹಳ್ಳಿ ಮಾರ್ಗವಾಗಿ ಭೀಮನಹಳ್ಳಿ ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿ ಅರ್ಧಕ್ಕೆ ನಿಂತು 5 ವರ್ಷ ಕಳೆದರೂ ಇದೊಂದು ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಯಾರ ಅವಧಿಯಲ್ಲಿ ಅಭಿವೃದ್ಧಿ ಕೆಲಸಗಳಾಗುತ್ತವೆ ಎಂಬುದನ್ನು ತಾಲೂಕಿನ ಜನರೇ ನಿರ್ಧರಿಸಬೇಕು ಎಂದು ಪರೋಕ್ಷವಾಗಿ ಮಾಜಿ ಶಾಸಕ ಸುರೇಶ್‌ಗೌಡರನ್ನು ಜರಿದರು.ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೆಗೌಡ (ಸ್ಟಾರ್‌ಚಂದ್ರು)ಅವರನ್ನು ಪಕ್ಷಾತೀತವಾಗಿ ಆಶೀರ್ವದಿಸುವರೆಂಬ ನಂಬಿಕೆ, ವಿಶ್ವಾಸವಿದೆ. ಜಿಲ್ಲೆ ಮತ್ತಷ್ಟುಅಭಿವೃದ್ಧಿ ಪಥದತ್ತ ಸಾಗಲು ಕಾಂಗ್ರೆಸ್‌ಗೆ ಶಕ್ತಿ ನೀಡಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಗೆ ಮತಹಾಕದಿದ್ದರೆ ನಿಮ್ಮೂರಿನ ಕೆಲಸವಿಲ್ಲ:ತಾಲೂಕಿನ ಬಿಂಡೇನಹಳ್ಳಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಚಿವರು ಗುದ್ದಲಿ ಪೂಜೆಗೆ ತೆರಳಿದ್ದ ವೇಳೆ ಗ್ರಾಮಸ್ಥನೊಬ್ಬ ಈಗ ಚಾಲನೆ ನೀಡುತ್ತಿರುವ ರಸ್ತೆ ಜೊತೆ ಮತ್ತೊಂದು ರಸ್ತೆಯನ್ನೂ ಅಭಿವೃದ್ಧಿ ಮಾಡಿ ಸ್ವಾಮಿ ಎಂದು ಸಚಿವರನ್ನು ಕೇಳಿದ್ದಾನೆ. ಲೋಕಸಭೆಯಲ್ಲಿ ಕಾಂಗ್ರೆಸ್ ಗೆ ಮತ ಹಾಕಿದರೆ ಮಾತ್ರ ಅಭಿವೃದ್ಧಿ ಕೆಲಸ. ನಮ್ಮ ಅಭ್ಯರ್ಥಿಗೆ ಮತ ಹಾಕಿದರೆ ಎಲ್ಲವೂ ಆಗುತ್ತದೆ. ಒಂದು ವೇಳೆ ಮತ ಹಾಕದಿದ್ದರೆ ನಿಮ್ಮೂರಿನ ಅಭಿವೃದ್ಧಿ ಕೆಲಸ ಆಗಲ್ಲ ಎಂದು ತಿಳಿಸಿದ್ದಾರೆ.
ಈ ವೇಳೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೆಗೌಡ (ಸ್ಟಾರ್‌ಚಂದ್ರು), ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಮನ್ಮುಲ್ ನಿರ್ದೇಶಕ ಮರಿಸ್ವಾಮಿ, ಮುಖಂಡರಾದ ಜಯರಾಮು, ಶಶಿಗೌಡ, ಆಟೋ ಶೇಖರ್, ಪುಟ್ಟಸ್ವಾಮಿ, ನಾಗರಾಜು, ಅಣ್ಣಯ್ಯ, ಬೋನಗೆರೆ ಸುರೇಶ್, ಲೋಕೋಪಯೋಗಿ ಇಲಾಖೆ ಎಇಇ ನಂದಕುಮಾರ್, ಎಇ ಇಮ್ರಾನ್ ಖಾನ್ ಸೇರಿ ಹಲವರಿದ್ದರು.