ಜೈ ಶ್ರೀರಾಮ ಹಾಡಿಗೆ ವಿರೋಧ, ವಿದ್ಯಾರ್ಥಿಗಳ ಮಧ್ಯ ಮಾರಾಮಾರಿ

| Published : May 30 2024, 12:49 AM IST

ಜೈ ಶ್ರೀರಾಮ ಹಾಡಿಗೆ ವಿರೋಧ, ವಿದ್ಯಾರ್ಥಿಗಳ ಮಧ್ಯ ಮಾರಾಮಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಜೈ ಶ್ರೀರಾಮ ಗೀತೆಗೆ ನೃತ್ಯ ಮಾಡುತ್ತಿರುವಾಗ ಇದನ್ನು ವಿರೋಧಿಸಿ ಅನ್ಯ ಕೋಮಿನ ವಿದ್ಯಾರ್ಥಿಗಳು ಸೇರಿ ಗಲಾಟೆ ನಡೆಸಿದ್ದು ವಿಕೋಪಕ್ಕೆ ಹೋಗಿದೆ

ಕನ್ನಡಪ್ರಭ ವಾರ್ತೆ ಬೀದರ್‌

ನಗರದ ಮೈಲೂರ್‌ ಮಾರ್ಗದಲ್ಲಿರುವ ಗುರುನಾನಕದೇವ್‌ ಎಂಜಿನಿಯರಿಂಗ್‌ ಕಾಲೇಜಿನ ಇ-ಫೆಸ್ಟ್‌ ಕಾರ್ಯಕ್ರಮದಲ್ಲಿ ಜೈಶ್ರೀರಾಮ್‌ ಹಾಡಿಗೆ ವಿರೋಧ ವ್ಯಕ್ತವಾಗಿ ವಿದ್ಯಾರ್ಥಿಗಳ ನಡುವೆ ಹೊಡೆದಾಟ ನಡೆದು ಎರಡೂ ಗುಂಪಿನ ವಿದ್ಯಾರ್ಥಿಗಳ ಪೈಕಿ ಪರ ವಿರೋಧದ ದೂರುಗಳು ದಾಖಲಾಗಿ ಓರ್ವ ಆರೋಪಿ ವಿದ್ಯಾರ್ಥಿಯನ್ನು ಪೊಲೀಸರು ದಸ್ತಗಿರಿ ಮಾಡಿ ಠಾಣಾ ಬಾಂಡ್‌ ಮೇಲೆ ಬಿಡುಗಡೆ ಮಾಡಿರುವ ಘಟನೆ ನಡೆದಿದೆ.

ಬುಧವಾರ ಕಾಲೇಜಿನ ಆವರಣದಲ್ಲಿ ಇದೇ ಮೇ 30 ಹಾಗೂ 31ರಂದು ಆಯೋಜಿಸಲಾಗಿರುವ ತಾಂತ್ರಿಕ ವಾರ್ಷಿಕೋತ್ಸವ ಇ-ಬಜ್‌ ನ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪೂರ್ವಭಾವಿ ತಯಾರಿ ನಡೆಸುತ್ತಿದ್ದಾಗ ಜೈ ಶ್ರೀರಾಮ ಗೀತೆಗೆ ನೃತ್ಯ ಮಾಡುತ್ತಿರುವಾಗ ಇದನ್ನು ವಿರೋಧಿಸಿ ಅನ್ಯ ಕೋಮಿನ ವಿದ್ಯಾರ್ಥಿಗಳು ಸೇರಿ ಗಲಾಟೆ ನಡೆಸಿದ್ದು ವಿಕೋಪಕ್ಕೆ ಹೋಗಿದೆ.

ನೂರಾರು ವಿದ್ಯಾರ್ಥಿಗಳು ಸ್ಥಳದಲ್ಲಿ ಜಮಾಯಿಸಿದ್ದಷ್ಟೇ ಅಲ್ಲ ಗಲಾಟೆ ಬಿಡಿಸಲು ಹೋದ ಇತರೆ ವಿದ್ಯಾರ್ಥಿಗಳ ಮೇಲೆಯು ಹಲ್ಲೆ ನಡೆದಿದ್ದು ವಿರೇಂದ್ರ ಪಾಟೀಲ್‌, ನಟರಾಜ ಎಂಬ ವಿದ್ಯಾರ್ಥಿ ಮೇಲೆ ಹಲ್ಲೆ ನಡೆದಿದ್ದು ಕಾರ್ಯಕ್ರಮದಲ್ಲಿ ಧರ್ಮವೊಂದಕ್ಕೆ ಸಂಬಂಧಿಸಿದ ಹಾಡು ಹಾಕಿದ್ದಕ್ಕೆ ಆರೋಪಿಗಳು ಕೈಯಲ್ಲಿದ್ದ ಕಡಗದಿಂದ ತೀವ್ರವಾಗಿ ರಕ್ತ ಬರುವಂತೆ ಹಲ್ಲೆ ಮಾಡಿದ್ದಲ್ಲದೆ ದೇಹದ ಇತರೆ ಭಾಗಗಳಲ್ಲಿ ಗುಪ್ತ ಗಾಯ ಮಾಡಿರುತ್ತಾರೆ ಎಂದು ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದು ನಂತರ ಗಾಂಧಿಗಂಜ್‌ ಪೊಲೀಸ್‌ ಠಾಣೆಗೆ ಬಂದು ಅನ್ಯ ಕೋಮಿನ 17 ಜನ ಹಾಗೂ ಇತರೆ ವಿದ್ಯಾರ್ಥಿಗಳ ವಿರುದ್ಧ ಪಿರ್ಯಾಧಿ ವಿದ್ಯಾರ್ಥಿ ನಟರಾಜ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಇನ್ನು ಮಾರಾಮಾರಿ ಘಟನೆ ನಡೆಯುತ್ತಿದ್ದಂತೆ ಕಾಲೇಜು ಆಡಳಿತ ಮಂಡಳಿ ತಕ್ಷಣ ಎಚ್ಚೆತ್ತುಕೊಂಡು ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ವಿದ್ಯಾರ್ಥಿಗಳಿಗೆ ತಿಳಿ ಹೇಳಿದ್ದಾರೆ. ಸ್ಥಳಕ್ಕೆ ಗಾಂಧಿಗಂಜ್‌ ಪೊಲೀಸ್‌ ಠಾಣೆ ಪೊಲೀಸರು ಭೇಟಿ ನೀಡಿ ಘಟನೆ ನಿಯಂತ್ರಿಸಿದ್ದಾರೆ. ಇದೇ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಪೌರಾಡಳಿತ ಸಚಿವ ರಹೀಮ್‌ ಖಾನ್‌, ಈಶಾನ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಚಂದ್ರಶೇಖರ ಪಾಟೀಲ್‌ ಸೇರಿ ಚುನಾವಣೆ ಮತಯಾಚನೆ ಅಂಗವಾಗಿ ಕಾಲೇಜಿಗೆ ತೆರಳಿದ್ದು ಸದರಿ ಮಾರಾ ಮಾರಿ ಘಟನೆ ಮಾಹಿತಿ ಪಡೆದಿದ್ದಾರೆ.

ನಗರಸಭೆ ಸದಸ್ಯ ಶಶಿಧರ ಹೊಸಳ್ಳಿ ಭೇಟಿ:

ಬೀದರ್‌ ನಗರಸಭೆ ಸದಸ್ಯರಾದ ಶಶಿಧರ ಹೊಸಳ್ಳಿ ಭೇಟಿ ನೀಡಿ ಕಾಲೇಜಿನ ಅಧ್ಯಕ್ಷರು ಹಾಗೂ ಪ್ರಾಂಶುಪಾಲರೊಂದಿಗೆ ಚರ್ಚಿಸಿ ಘಟನೆಯನ್ನು ಖಂಡಿಸಿ ತಕ್ಷಣ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಇಲ್ಲದಿದ್ದಲ್ಲಿ ತೀವ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಇದೇ ಪ್ರಕರಣದಲ್ಲಿ ಎರಡು ಗುಂಪಿನ ಯುವಕರು ಕೂಡ ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ದಾಖಲಾಗಿ ದೂರು ಪ್ರತಿ ದೂರು ನೀಡಿದ್ದು, ಮುಂಜಾಗ್ರತಾ ಕ್ರಮವಾಗಿ ಎರಡೂ ಗುಂಪಿನವರ ಮೇಲೆ ಶಾಂತಿ ಕಾಪಾಡಲು ಸಿಆರ್‌ಪಿಸಿ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುತ್ತಿದೆ. ಹಾಗೆಯೇ ಕಾಲೇಜಿನಲ್ಲಿ ನಡೆಯಬೇಕಿದ್ದ ಸಾಂಸ್ಕೃತಿಕ ಕಾರ್ಯಕ್ರಮ ರದ್ದುಪಡಿಸಿರುವದಾಗಿ ತಿಳಿಸಿರುತ್ತಾರೆ. ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಯಾವುದೇ ವದಂತಿಗಳಿಗೆ ಕಿವಿಗೊಡದೇ ಕಾಲೇಜಿನಲ್ಲಿ ಶಾಂತತೆ ಕಾಪಾಡಲು ಮನವಿಸಿದ್ದು ಜಿಎನ್‌ಡಿ ಕಾಲೇಜಿನ ಬಳಿ ಸೂಕ್ತ ಪೊಲೀಸ್‌ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿದ್ದು ಪ್ರಸ್ತುಕ ಕಾಲೇಜಿನಲ್ಲಿ ಶಾಂತ ಪರಿಸ್ಥಿತಿ ಇದೆ.

ಚನ್ನಬಸವಣ್ಣ ಎಸ್‌ಎಲ್‌, ಎಸ್‌ಪಿ ಬೀದರ್‌