ಸಾರಾಂಶ
ಕನ್ನಡಪ್ರಭ ವಾರ್ತೆ ಔರಾದ್‌ಸ್ವಗ್ರಾಮ ಔರಾದ್ ಕ್ಷೇತ್ರದ ಅಭಿವೃದ್ಧಿಯಲ್ಲಿಯೂ ಅಡ್ಡಗಾಲು ಹಾಕುವ ಮೂಲಕ ಕೇಂದ್ರದ ಸಚಿವ ಭಗವಂತ ಖೂಬಾ ಸ್ವಪಕ್ಷೀಯ ಶಾಸಕರ ವೈಮನಸ್ಸಿಗೆ ಗುರಿಯಾಗಿರುವದು ಔರಾದ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ 25ಸಾವಿರಕ್ಕೂ ಹೆಚ್ಚು ಮತಗಳ ಅಂತರದ ಮುನ್ನಡೆ ಸಾಧಿಸುವದರಲ್ಲಿ ಸಂದೇಹವೇ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭವಿಷ್ಯ ನುಡಿದರು.
ಅವರು ಭಾನುವಾರ ಪಟ್ಟಣದ ಗುರುಪಾದಪ್ಪ ನಾಗಮಾರಪಳ್ಳಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಪಕ್ಷದ ಮುಖಂಡರ ಹಾಗೂ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿ, ಒಂದ ದಶಕ ಕಾಲ ಸಂಸದರಾಗಿದ್ದ ಭಗವಂತ ಖೂಬಾ ಸಾಧನೆ ಶೂನ್ಯವಾಗಿದೆ ಎಂದರು.ಕೇಂದ್ರದ ಒಬ್ಬ ಸಚಿವರಾಗಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹಲವಾರು ಯೋಜನೆ ಮಂಜೂರಿಸಿಕೊಂಡು ಬರಬಹುದಿತ್ತು. ಅವುಗಳನ್ನು ಅವರ ಕಾರ್ಯಾವಧಿಯಲ್ಲಿ ಆರಂಭಿಸಿ ಇಲ್ಲಿನ ಅಭಿವೃದ್ಧಿಗೆ ಸಾಕ್ಷಿಯಾಗಬೇಕಿತ್ತು, ಆದರೆ ಬರೀ ಸುಳ್ಳು ಭರವಸೆಗಳು ಮತ್ತು ಸುಳ್ಳು ಯೋಜನೆಗಳ ಮೂಲಕ ಜನರ ದಿಕ್ಕು ತಪ್ಪಿಸಿದ್ದಾರೆ ಎಂದು ಆರೋಪಿಸಿದರು.
ನೌಬಾದ್ -ಭಾಲ್ಕಿ, ಔರಾದ್ - ಬೀದರ್ ಹೆದ್ದಾರಿ ಕಾಮಗಾರಿ ಕಳಪೆಯಾಗಿದೆ. ಜಿಲ್ಲೆಯ ಜನ ಖೂಬಾ ಅವರ ದುರಹಂಕಾರ, ದರ್ಪ ನೋಡುತ್ತಿದ್ದಾರೆ. ಯಾರ ಜೊತೆಗೂ ಅವರ ನಡುವಳಿಕೆ ಸರಿ ಇಲ್ಲ. ಜನ ಅವರಿಂದ ಬೇಸತ್ತು ಹೋಗಿದ್ದಾರೆ. ಹತ್ತು ವರ್ಷದ ಅವರ ಅಧಿಕಾರ ಅಂತ್ಯಗೊಳಿಸಲು ಜನ ಸಿದ್ಧರಾಗಿದ್ದಾರೆ ಎಂದರು.ಕಾಂಗ್ರೆಸ್ ಸರ್ಕಾರ ಭರವಸೆ ನೀಡಿದ ಎಲ್ಲಾ ಗ್ಯಾರಂಟಿ ಈಡೇರಿಸಿದೆ. ಅವುಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸುವ ಕೆಲಸ ಮಾಡಿದೆ. ಎಲ್ಲಾ ಗ್ಯಾರಂಟಿಗಳಿಂದಲೂ ಜನರಿಗೆ ಪ್ರಯೋಜನವಾಗಿದೆ. ಬಡತನ ರೇಖೆ ಕೆಳಗಿನ ಜನರನ್ನು ಆರ್ಥಿಕವಾಗಿ ಸಶಕ್ತಗೊಳಿಸುವುದು ಗ್ಯಾರಂಟಿ ಯೋಜನೆ ಮುಖ್ಯ ಉದ್ದೇಶವಾಗಿದೆ. ಜಿಲ್ಲೆಯ ಮತದಾರರ ಆಶೀರ್ವಾದ, ವಿಶ್ವಾಸದೊಂದಿಗೆ ಸಾಗರ್ ಖಂಡ್ರೆ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ ಅವರನ್ನು ಭಾರಿ ಬಹುಮತದಿಂದ ಗೆಲ್ಲಿಸುವಂತೆ ಮನವಿಸಿದರು.
ಕಾಂಗ್ರೆಸ್ ಸರ್ಕಾರ ಬಡವರ, ದುರ್ಬಲ ವರ್ಗದವರ ಪರವಾಗಿದೆ. ಕಾರ್ಯಕರ್ತರು ವಿರೋಧ ಪಕ್ಷದವರ ಮಾತಿಗೆ ತಲೆ ಕೆಡಸಿಕೊಳ್ಳದೇ ಮನೆ ಮನೆಗೂ ಭೇಟಿ ನೀಡಿ ಕಾಂಗ್ರೆಸ್ ಸರ್ಕಾರದ ಸಾಧನೆ ಜನರಿಗೆ ಮುಟ್ಟಿಸಿ ಕಾಂಗ್ರೆಸ್ ಗೆಲುವಿಗೆ ಶ್ರಮಿಸಬೇಕು ಎಂದು ಕಾರ್ಯಕರ್ತರಿಗೆ ಹೇಳಿದರು.ಪೌರಾಡಳಿತ ಸಚಿವ ರಹೀಮ್ ಖಾನ್ ಹಾಗೂ ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್ ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರಯೋಜನ ದೊರಕುತ್ತಿದೆ. ಈ ಸಲ ಲೋಕಸಭೆ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಸಾಗರ್ ಖಂಡ್ರೆ ಅವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಲು ಎಲ್ಲರು ಕೈಜೋಡಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಬಿಡಿಎ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಭೀಮಸೇನರಾವ್ ಸಿಂಧೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಕುಮಾರ ಹಲಬುರ್ಗೆ, ಆನಂದ ಚವ್ಹಾಣ, ವಿಜಯಕುಮಾರ್ ಕೌಡಾಳೆ, ಮೀನಾಕ್ಷಿ ಸಂಗ್ರಾಮ, ಗೀತಾ ಪಂಡಿತ ಚಿದ್ರಿ, ಅಮೃತರಾವ್ ಚಿಮಕೋಡೆ, ಬಸವರಾಜ ದೇಶಮುಖ, ಮಾಳಪ್ಪ ಅಡಸಾರೆ, ಕುಮಾರ ದೇಶಮುಖ, ರಾಜಕುಮಾರ ಕಂದಗೂಳೆ, ರಾಮಣ್ಣ ವಡೆಯರ ರತ್ನಮ್ಮ ಪಾಟೀಲ್, ಶರಣಪ್ಪ ಪಾಟೀಲ್, ಬಂಟಿ ದರ್ಬಾರೇ, ವಿಶ್ವನಾಥ ದೀನೆ, ಸುಧಾಕರ ಕೊಳ್ಳುರ್, ದತ್ತಾತ್ರಿ ಬಾಪೂರೆ, ಶಾಂತಕುಮಾರ ಬಿರಾದರ್, ಪ್ರವೀಣ ಕದಂ, ಡಿಕೆ ಚಂದು ಇದ್ದರು.ನಾನು ಬೇರೊಬ್ಬರ ಹೆಸರಿನ ಮೇಲೆ ಮತ ಕೇಳುತ್ತಿಲ್ಲ, ಕ್ಷೇತ್ರದ ಜನರ ಸರ್ವಾಂಗೀಣ ಅಭಿವೃದ್ಧಿಯ ಚಿಂತನೆ ಹೊಂದಿ ಕಾಂಗ್ರೆಸ್ ಅಭ್ಯರ್ಥಿಯಾಗಿ, ಜಿಲ್ಲೆಯ ಪ್ರಗತಿಗೆ ದುಡಿಯಲು ಬದ್ಧನಾಗಿ ಮತದಾರರಲ್ಲಿ ಮತಯಾಚನೆ ಮಾಡುತ್ತಿದ್ದು, ಮತದಾರರು ನನ್ನನ್ನು ಗೆಲ್ಲಿಸುವ ಎಲ್ಲ ಭರವಸೆ ಇದೆ.
ಸಾಗರ ಖಂಡ್ರೆ, ಕಾಂಗ್ರೆಸ್ ಘೋಷಿತ ಅಭ್ಯರ್ಥಿ