ಫ್ಲೈಓವರ್‌ಗೆ ಲ್ಯಾಮಿಂಗ್ಟನ್‌ ರಸ್ತೆ ಭೂಸ್ವಾಧೀನಕ್ಕೆ ವಿರೋಧ

| Published : Aug 11 2024, 01:38 AM IST

ಸಾರಾಂಶ

ಸಿದ್ದಪ್ಪ ಕಂಬಳಿ ರಸ್ತೆಯಲ್ಲಿರುವ ಶಿವಕೃಷ್ಣ ಮಂದಿರದ ಜಾಗ ಸ್ವಾಧೀನ ಮಾಡಿಕೊಳ್ಳದಂತೆ ಈಚೆಗೆ ಧಾರವಾಡ ಹೈಕೋರ್ಟ್‌ ಪೀಠ ಆದೇಶಿಸಿದೆ. ಉಳಿದ ಆಸ್ತಿಗಳ ಮಾಲೀಕರು ಸಹ ಕಾನೂನು ಹೋರಾಟದ ನಡೆಸಲು ಕಾನೂನು ತಜ್ಞರ ಸಲಹೆ ಪಡೆಯುವುದರೊಂದಿಗೆ ಯೋಜನೆಯ ಅಧಿಸೂಚನೆಗೆ ತಡೆಯಾಜ್ಞೆ ನೀಡುವಂತೆ ನ್ಯಾಯಾಲಯದ ಮೊರೆ ಹೋಗಲು ಚಿಂತಿಸಿದ್ದಾರೆ.

ಹುಬ್ಬಳ್ಳಿ:

ಲ್ಯಾಮಿಂಗ್ಟನ್‌ ರಸ್ತೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮೇಲ್ಸೇತುವೆ ಕಾಮಗಾರಿಗೆ ಭೂಸ್ವಾಧೀನ ಪ್ರಕ್ರಿಯೆಗೆ ಮುಂದಾಗಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೊಡಿಸಿರುವ ಅಧಿಸೂಚನೆ ವಿರುದ್ಧ ಕೋರ್ಟ್‌ ಮೊರೆ ಹೋಗಲು ಈ ಭಾಗದ ಅಂಗಡಿ ಮಾಲೀಕರು ಚರ್ಚಿಸಿದ್ದಾರೆ.

ಇಲ್ಲಿನ ಶಿವಕೃಷ್ಣ ಮಂದಿರದಲ್ಲಿ ಶನಿವಾರ 2 ಗಂಟೆಗೂ ಹೆಚ್ಚು ಕಾಲ ಸಮಾಲೋಚನೆ ಸಭೆ ನಡೆಸಿದ ಅಂಗಡಿ ಮಾಲೀಕರು ಯಾವುದೇ ಕಾರಣಕ್ಕೂ ಭೂಸ್ವಾಧೀನಕ್ಕೆ ಅವಕಾಶ ನೀಡಬಾರದು ಎಂದು ಹೇಳಿದ್ದಾರೆ. ನಗರದ ಸಿದ್ದಪ್ಪ ಕಂಬಳಿ ರಸ್ತೆಯಲ್ಲಿರುವ ಶಿವಕೃಷ್ಣ ಮಂದಿರದ ಜಾಗ ಸ್ವಾಧೀನ ಮಾಡಿಕೊಳ್ಳದಂತೆ ಈಚೆಗೆ ಧಾರವಾಡ ಹೈಕೋರ್ಟ್‌ ಪೀಠ ಆದೇಶಿಸಿದೆ. ಉಳಿದ ಆಸ್ತಿಗಳ ಮಾಲೀಕರು ಸಹ ಕಾನೂನು ಹೋರಾಟದ ನಡೆಸಲು ಕಾನೂನು ತಜ್ಞರ ಸಲಹೆ ಪಡೆಯುವುದರೊಂದಿಗೆ ಯೋಜನೆಯ ಅಧಿಸೂಚನೆಗೆ ತಡೆಯಾಜ್ಞೆ ನೀಡುವಂತೆ ನ್ಯಾಯಾಲಯದ ಮೊರೆ ಹೋಗಲು ಚರ್ಚಿಸಿದ್ದಾರೆ.

ಅಭಿಪ್ರಾಯ ಸಂಗ್ರಹಿಸಿಲ್ಲ:

ಈ ವೇಳೆ ವಕೀಲ ಶ್ರೀಧರ ಪ್ರಭು ಮಾತನಾಡಿ, ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿಯನ್ನು ಈಗಾಗಲೇ ಪ್ರಗತಿಪರ ಯೋಜನೆ ಎಂದು ಬಿಂಬಿಸಲಾಗುತ್ತಿದೆ. ಆದರೆ, ಯೋಜನೆ ಅನುಷ್ಠಾನಕ್ಕೂ ಮುನ್ನ ನಗರ ಯೋಜನೆ ಪರಿಣಿತರ ಜತೆಗೆ ಎಂದಿಗೂ ಸಮಾಲೋಚನೆ ನಡೆಸಿಲ್ಲ. ಒಂದು ಬಾರಿಯೂ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿಲ್ಲ ಎಂದರು.

ಅಧ್ಯಯನ ನಡೆಸಿಲ್ಲ:

ಯೋಜನೆ ಅನುಷ್ಠಾನಕ್ಕೂ ಮುನ್ನ 2013ರ ಭೂಸ್ವಾಧೀನ ಕಾಯ್ದೆ ಪ್ರಕಾರ ಸಾಮಾಜಿಕ ಪರಿಣಾಮಗಳ ಅಧ್ಯಯನ ನಡೆಸಬೇಕಿತ್ತು. ಒಟ್ಟಾರೆಯಾಗಿ ಈ ಯೋಜನೆ ಅನುಷ್ಠಾನಗೊಳಿಸಲು ಎಷ್ಟು ಖರ್ಚಾಗಲಿದೆ. ನಂತರ ಅದರಿಂದ ಎಷ್ಟು ಆದಾಯ ಬರುತ್ತದೆ, ಪರಿಸರ ಮತ್ತು ಧಾರ್ಮಿಕ ಕೇಂದ್ರಗಳ ಮೇಲೆ ಇದರಿಂದಾಗುವ ಪರಿಣಾಮದ ಬಗ್ಗೆ ಅರ್ಥವಾಗುತ್ತಿತ್ತು. ಆದರೆ, ಈ ಬಗ್ಗೆ ಯಾವುದೇ ಆಧ್ಯಯನ ನಡೆಸದೇ ಕಾಮಗಾರಿ ಆರಂಭಿಸಲಾಗಿದೆ ಎಂದು ಶ್ರೀಧರ ಪ್ರಭು ದೂರಿದರು.

ಮತ್ತೊಮ್ಮೆ ಅಧಿಸೂಚನೆ:

ಪ್ರಾಧಿಕಾರ ಹೊರಡಿಸಿದ್ದ ಮೊದಲ ಅಧಿಸೂಚನೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ರಾಷ್ಟ್ರೀಯ ಹೆದ್ದಾರಿ ಕಾಯ್ದೆಯಲ್ಲಿ ರಸ್ತೆ ವಿಸ್ತರಣೆಗೆ ಅವಕಾಶ ಇಲ್ಲ. ನಿರ್ಮಾಣಕ್ಕೆ ಮಾತ್ರ ಅವಕಾಶ ಇದೆ. ಇದರಲ್ಲಿ ಭೂಸ್ವಾಧೀನ ಕಾಯ್ದೆಯ ಸಂಪೂರ್ಣ ಉಲ್ಲಂಘನೆಯಾಗಿದೆ. ಈಗ ಪ್ರಾಥಮಿಕ ಅಧಿಸೂಚನೆ ಮಾತ್ರ ಹೊರಡಿಸಲಾಗಿದೆ. ಅಂತಿಮ ಅಧಿಸೂಚನೆಗೂ ಮುನ್ನ ಯೋಜನೆಯ ವಿನ್ಯಾಸ ಬದಲಿಸಿದರೆ ನಮ್ಮದು ಯಾವುದೇ ತಕರಾರು ಇರುವುದಿಲ್ಲ ಎಂದರು.

ಯೋಜನೆ ಕುರಿತು ಸಾಮಾಜಿಕ ಪರಿಣಾಮಗಳ ಅಧ್ಯಯನ ನಡೆಸಿಲ್ಲ. ಕೇವಲ ಸಂಚಾರ ದಟ್ಟಣೆ ಕುರಿತು ಮಾತ್ರ ಅಧ್ಯಯನ ನಡೆದಿರುವ ಕುರಿತು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಆಸ್ತಿಯ ಮಾಲೀಕರೊಬ್ಬರು ಕನ್ನಡಪ್ರಭಕ್ಕೆ ತಿಳಿಸಿದರು.

ಈ ಸಂದರ್ಭದಲ್ಲಿ ಶಿವಕೃಷ್ಣ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ನಂದನ ಬಳವಳ್ಳಿ, ವಕೀಲ ನಾಗಪ್ರಸಾದ ಕಿಣಿ, ಉದ್ಯಮಿ ವಿಕ್ರಂ ಶಿರೂರು, ಮಹೇಶ ಹಿರೇಮಠ, ಆನಂದ ಪಾಂಡುರಂಗಿ ಸೇರಿದಂತೆ ಹಲವರಿದ್ದರು.