ಚಿತ್ರಾವತಿ ಜಲಾಶಯಕ್ಕೆ ಎಸ್ಸೆಂಕೆ ಹೆಸರಿಡಲು ವಿರೋಧ

| Published : Jul 29 2025, 01:01 AM IST

ಸಾರಾಂಶ

ಮೇ 27ರಂದು ನಡೆದ ಪುರಸಭೆ ವಿಶೇಷ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹೆಸರನ್ನು ಚಿತ್ರಾವತಿ ಜಲಾಶಯಕ್ಕೆ ನಾಮಕರಣ ಮಾಡುವ ನಿರ್ಣಯ ಅಂಗೀಕರ ಮಾಡಿರುವುದು ಏಕ ಪಕ್ಷೀಯ. ಜಲಾಶಯಕ್ಕೆ ದಿವಂಗತ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಹೆಸರು ನಾಮಕರಣ ಮಾಡಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪುರಸಭೆ ಕಚೇರಿ ಮುಂದೆ ಹೋರಾಟಕ್ಕೆ ಸಿಪಿಎಂ ನಿರ್ಧಾರ.

ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ

ಚಿತ್ರಾವತಿ ಜಲಾಶಯಕ್ಕೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹೆಸರನ್ನು ನಾಮಕರಣ ಮಾಡಲು ಪುರಸಭೆಯು ಸಾರ್ವಜನಿಕ ಪ್ರಕಟಣೆ ಹೊರಡಿಸಿರುವುದನ್ನು ವಿರೋಧಿಸಿ ರೈತ ಸಂಘಟನೆಗಳು ಹಾಗೂ ಸಿಪಿಎಂ ಕಾರ್ಯಕರ್ತರು ಪುರಸಭೆ ಮುಖ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಸಿಪಿಎಂ ಹಾಗೂ ರೈತ ಸಂಘಟನೆಗಳ ಕಾರ್ಯಕರ್ತರು ಪುರಸಭೆ ಕಚೇರಿಗೆ ಭೇಟಿ ನೀಡಿ ಮೇ 27ರಂದು ನಡೆದ ಪುರಸಭೆ ವಿಶೇಷ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹೆಸರನ್ನು ಚಿತ್ರಾವತಿ ಜಲಾಶಯಕ್ಕೆ ನಾಮಕರಣ ಮಾಡುವ ನಿರ್ಣಯ ಅಂಗೀಕರ ಮಾಡಿರುವುದು ಏಕ ಪಕ್ಷೀಯ ಎಂದು ಖಂಡಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರ ಆದೇಶ

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರ ಆದೇಶದಂತೆ ಎಸ್.ಎಂ.ಕೃಷ್ಣ ಅವರ ಹೆಸರನ್ನು ಇಡಲು ಸೂಚಿಸಲಾಗಿದೆ. ಈ ಪ್ರಕಟಣೆಗೆ ತಾವು ಆಕ್ಷೇಪಣೆ ಸಲ್ಲಿಸಿದ್ದಲ್ಲಿ ನಾಮಕರಣ ವಿಷಯವನ್ನು ಮೂಂದೂಡಲಾಗುವುದು ಎಂದು ಭರವಸೆ ನೀಡಿದರು.

ಜಿ.ವಿ. ಶ್ರೀರಾಮರೆಡ್ಡಿ ಹೆಸರಿಡಿ

ಸಿಪಿಎಂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ, ಸಚಿವರು ಈ ತಾಲೂಕಿನವರೇ, ಬಾಗೇಪಲ್ಲಿ ತಾಲೂಕಿಗೂ ಅವರಿಗೇನಾದರೂ ಸಂಬಂಧ ಇದೆಯೇ, ಚಿತ್ರಾವತಿ ಜಲಾಶಯಕ್ಕೆ ದಿವಂಗತ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಹೆಸರು ನಾಮಕರಣ ಮಾಡಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪುರಸಭೆ ಕಚೇರಿ ಮುಂದೆ ಹೋರಾಟಕ್ಕೆ ಮುಂದಾಗುವುದಾಗಿ ಎಚ್ಚರಿಸಿದರು.

ಈ ಸಂದರ್ಭದಲ್ಲಿ ಸಿಪಿಎಂ ಮತ್ತು ರೈತ ಸಂಘಟನೆಗಳ ಮುಖಂಡರಾದ ರಾಮಕೃಷ್ಣಪ್ಪ, ಲಕ್ಷ್ಮೀನಾರಾಯಣರೆಡ್ಡಿ, ಚೆನ್ನರಾಯಪ್ಪ, ಮುನಿಸ್ವಾಮಿ, ಮುನಿವೆಂಕಟಪ್ಪ, ಮುಸ್ತಾಫ್, ಕೃಷ್ಣಪ್ಪ, ಮುನಿಯಪ್ಪ, ರವಣ ಮತ್ತಿತರರು ಇದ್ದರು.