ದೊಡ್ಡಬಳ್ಳಾಪುರ: ಕರ್ನಾಟಕ ಸರ್ಕಾರವು ಪ್ರಸ್ತುತ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಹೊಂದಿರದ 11 ಜಿಲ್ಲೆಗಳಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ 11 ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲು ಯೋಜಿಸುತ್ತಿದೆ ಎಂದು ಸಾರ್ವತ್ರಿಕ ಆರೋಗ್ಯ ಆಂದೋಲನ ಕರ್ನಾಟಕದ ಡಾ.ಸ್ವಾತಿ ಆರೋಪಿಸಿದರು
ದೊಡ್ಡಬಳ್ಳಾಪುರ: ಕರ್ನಾಟಕ ಸರ್ಕಾರವು ಪ್ರಸ್ತುತ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಹೊಂದಿರದ 11 ಜಿಲ್ಲೆಗಳಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ 11 ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲು ಯೋಜಿಸುತ್ತಿದೆ ಎಂದು ಸಾರ್ವತ್ರಿಕ ಆರೋಗ್ಯ ಆಂದೋಲನ ಕರ್ನಾಟಕದ ಡಾ.ಸ್ವಾತಿ ಆರೋಪಿಸಿದರು.
ನಗರದಲ್ಲಿ ಸರ್ಕಾರಿ ಆಸ್ಪತ್ರೆಗಳ ಖಾಸಗೀಕರಣದ ವಿರುದ್ಧ ಕರ್ನಾಟಕ ಸಾರ್ವತ್ರಿಕ ಆರೋಗ್ಯ ಆಂದೋಲನ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಭೆಯಲ್ಲಿ ಮಾತನಾಡಿದ ಅವರು, ಈ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ತುಮಕೂರು, ದಾವಣಗೆರೆ, ಚಿತ್ರದುರ್ಗ, ಬಾಗಲಕೋಟೆ, ಕೋಲಾರ, ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ಗ್ರಾಮಾಂತರ, ವಿಜಯಪುರ, ವಿಜಯನಗರ ಮತ್ತು ರಾಮನಗರ ಜಿಲ್ಲೆಗಳು ಪಟ್ಟಿಯಲ್ಲಿವೆ. ಈ ಹಿಂದೆ 2022ರಲ್ಲಿ ರಾಜ್ಯದ 9 ಜಿಲ್ಲೆಗಳಲ್ಲಿ ಇದೇ ರೀತಿ ಮಾಡುವುದಾಗಿ ಉಲ್ಲೇಖಿಸಿತ್ತು. ಆಗ ಎಚ್ಚೆತ್ತ ಈ ಜಿಲ್ಲೆಗಳ ಜನ ಸಂಘಟನೆಗಳು ವಿರೋಧಿಸಿದ್ದರಿಂದ ಈ ನಿರ್ಧಾರವನ್ನು ಹಿಂದಕ್ಕೆ ಪಡೆದಿತ್ತು ಎಂದರು.ನೀತಿ ಆಯೋಗದ ಶಿಫಾರಿಸ್ಸಿನಂತೆ ಕರ್ನಾಟಕದ 8 ಜಿಲ್ಲೆಗಳಲ್ಲಿ ವೈದ್ಯಕೀಯ ಶಿಕ್ಷಣ ಸಚಿವರು ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುವ ನೆಪದಲ್ಲಿ ಜಿಲ್ಲಾಸ್ಪತ್ರೆಗಳನ್ನು ಖಾಸಗಿ ಸಂಸ್ಥೆಗಳಿಗೆ ಹಸ್ತಾಂತರಿಸುವುದಾಗಿ ಹೇಳಿದ್ದಾರೆ. ಈ ರೀತಿ ಖಾಸಗಿಯವರಿಗೆ ಕೊಟ್ಟರೆ, ಸರ್ಕಾರಿ ಆಸ್ಪತ್ರೆಗಳನ್ನು ಅವಲಂಬಿಸಿರುವ ಬಡವರ ಆರೋಗ್ಯ ಕಾಪಾಡುವ ಬದಲು ಕೊಂದಂತಾಗುತ್ತದೆ. ಆರೋಗ್ಯ ವ್ಯವಸ್ಥೆಯನ್ನು ಕಲ್ಪಿಸುವುದರಿಂದ ಸರ್ಕಾರ ಕೈ ತೊಳೆದುಕೊಳ್ಳುತ್ತಿದೆ. ಚಿಕಿತ್ಸೆ ನಿರಾಕರಣೆ, ಚಿಕಿತ್ಸೆ ದುಬಾರಿ ಆಗುವುದಕ್ಕೆ ದಾರಿ ಮಾಡಿಕೊಡುತ್ತದೆ. ಈ ಖಾಸಗೀಕರಣವನ್ನು ವಿಜಯಪುರದಲ್ಲಿ ಕೈಬಿಡುವುದಾಗಿ ಭರವಸೆ ನೀಡಿದ್ದಾರೆ. ಅದೇ ರೀತಿಯಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಖಾಸಗೀಕರಣ ಕೈ ಬಿಡಬೇಕು. ಆರೋಗ್ಯ ಸೇವೆ ಖಾಸಗೀಕರಣದ ಸರ್ಕಾರದ ನಿಲುವನ್ನು ಖಂಡಿಸಿ ರಾಜ್ಯದಾದ್ಯಂತ ಫೆಬ್ರವರಿ 7ರಿಂದ 17ರವರೆಗೆ ಆರೋಗ್ಯ ಹಕ್ಕಿನ ಜಾಥಾ ನಡೆಯಲಿದೆ ಎಂದರು.
ದಲಿತ ಮುಖಂಡ ಚಿನ್ನಸ್ವಾಮಿ ಮಾತನಾಡಿ, ಪಿಪಿಪಿ ವ್ಯವಸ್ಥೆಯು ಸಾರ್ವಜನಿಕ ವಲಯದ ಉದ್ಯಮಗಳನ್ನು ಸರ್ಕಾರ ಖಾಸಗೀಕರಣದ ಹೆಸರಿನಲ್ಲಿ ಹೂಡಿಕೆ ಹಿಂತೆಗೆದುಕೊಳ್ಳುವ ಮತ್ತೊಂದು ಅಪಾಯಕಾರಿ ರೂಪವಾಗಿದೆ. ಅಂತಿಮವಾಗಿ ಇದು ಪಾಲುದಾರಿಕೆ, ಸಹಭಾಗಿತ್ವ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಸರ್ಕಾರಿ ಸಬ್ಸಿಡಿಗಳನ್ನು ಕೊಟ್ಟು ಖಾಸಗಿ ಲಾಭಕ್ಕಾಗಿ ಸಾರ್ವಜನಿಕ ಆಸ್ತಿಗಳನ್ನು ಬಿಟ್ಟುಕೊಡುವುದಾಗಿದೆ ಎಂದು ಆರೋಪಿಸಿದರು.ಪ್ರಾಂತ ರೈತ ಸಂಘದ ಮುಖಂಡ ಚಂದ್ರತೇಜಸ್ವಿ, ಕಾರಹಳ್ಳಿ ಶ್ರೀನಿವಾಸ್, ಕನ್ನಡ ಪಕ್ಷದ ಮುಖಂಡ ಸಂಜೀವನಾಯಕ್ ,
ಕಾರ್ಮಿಕ ಮುಖಂಡ ಪಿ.ಎ.ವೆಂಕಟೇಶ್, ಸಂವಿಧಾನ ರಕ್ಷಣೆಗಾಗಿ ನಾಗರಿಕರ ವೇದಿಕೆಯ ಸಂಚಾಲಕ ರಾಜುಸಣ್ಣಕ್ಕಿ, ಯುವ ಸಂಚಲನದ ದಿವಾಕರ್ ನಾಗ್, ಸಿಐಟಿಯುನ ವೆಂಕಟೇಶ್, ಬಸವರಾಜು, ಅಂಜುಂಖಾನ್, ಸಾರ್ವತ್ರಿಕ ಆರೋಗ್ಯ ಆಂದೋಲನ ಕರ್ನಾಟಕದ ವೈಶಾಲಿ ಇತರರು ಉಪಸ್ಥಿತರಿದ್ದರು.22ಕೆಡಿಬಿಪಿ1- ದೊಡ್ಡಬಳ್ಳಾಪುರದಲ್ಲಿ ಸಾರ್ವತ್ರಿಕ ಆರೋಗ್ಯ ಆಂದೋಲನ ಕರ್ನಾಟಕದ ವತಿಯಿಂದ ನಡೆದ ಜಿಲ್ಲಾ ಮಟ್ಟದ ಸಭೆ ನಡೆಯಿತು.