ಕೇಂದ್ರ ಯೋಜನೆಯ ವಿರುದ್ಧ ರಾಜ್ಯಪಾಲರಿಂದ ಕಾಂಗ್ರೆಸ್ ಹೇಳಿಸಲು ಹೊರಟಿತ್ತು. ಅದಕ್ಕೆ ರಾಜ್ಯಪಾಲರು ಒಪ್ಪಿಕೊಂಡಿಲ್ಲ. ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ಹೋರಾಟ ಸರಿಯಲ್ಲ

ಕೊಪ್ಪಳ: ರಾಜ್ಯ ಕಾಂಗ್ರೆಸ್‌ ಸರ್ಕಾರದಲ್ಲಿ ಖಜಾನೆ ಖಾಲಿಯಾಗಿದೆ. ಹೀಗಾಗಿ ಕೇಂದ್ರ ಸರ್ಕಾರದ ವಿಬಿ ಜಿ ರಾಮ್‌ ಜಿ ಯೋಜನೆ ವಿರೋಧಿಸುತ್ತಿದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ್‌ ಹೇಳಿದ್ದಾರೆ.

ಗವಿಮಠಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಸಿ. ಪಾಟೀಲ್‌, ಕಾಂಗ್ರೆಸ್ ಸರ್ಕಾರದಲ್ಲಿ ಖಜಾನೆ ಖಾಲಿಯಾಗಿದೆ. ಕೇಂದ್ರ ಸರ್ಕಾರದ ವಿಬಿ ಜಿ ರಾಮ್ ಜಿ ಯೋಜನೆಯಲ್ಲಿ ಶೇ. 40ರಷ್ಟು ಹಣ ಕೊಡಲು ಆಗುತ್ತಿಲ್ಲ. ಈ ಕಾರಣಕ್ಕಾಗಿ ಕಾಂಗ್ರೆಸ್ ವಿರೋಧಿಸುತ್ತಿದೆ. ನರೇಗಾ ಹೆಸರನ್ನು ಬದಲಾಯಿಸಿದ್ದೆ ಕಾಂಗ್ರೆಸ್. ನರೇಗಾದಲ್ಲಿ ಭ್ರಷ್ಟಾಚಾರವಿತ್ತು. ವಿಬಿ ರಾಮ್ ಜಿ ಯೋಜನೆಯಲ್ಲಿ ಪ್ರತಿ ವಾರ ಕೂಲಿ ಹಣ ಸಿಗಲಿದೆ. ಕೇಂದ್ರ ಯೋಜನೆಯ ವಿರುದ್ಧ ರಾಜ್ಯಪಾಲರಿಂದ ಕಾಂಗ್ರೆಸ್ ಹೇಳಿಸಲು ಹೊರಟಿತ್ತು. ಅದಕ್ಕೆ ರಾಜ್ಯಪಾಲರು ಒಪ್ಪಿಕೊಂಡಿಲ್ಲ. ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ಹೋರಾಟ ಸರಿಯಲ್ಲ ಎಂದರು. ಜಗತ್ತಿನ ದೊಡ್ಡ ಪಕ್ಷಕ್ಕೆ ಚಿಕ್ಕ ವಯಸ್ಸಿನ ಅಧ್ಯಕ್ಷರಾಗಿದ್ದಾರೆ. ಬಿಜೆಪಿಯಲ್ಲಿ ಹೊಸ ಸಂಪ್ರದಾಯ ಆರಂಭವಾಗಿದೆ. ರಾಜ್ಯದಲ್ಲಿ ಬಿ.ವೈ. ವಿಜಯೇಂದ್ರ ಉತ್ತಮವಾಗಿ ಕೆಲಸ ಮಾಡುತ್ತಾರೆ. ಅವರೇ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ. ಜೆಡಿಎಸ್, ಬಿಜೆಪಿ ಮೈತ್ರಿ ಕುರಿತು ಕುಮಾರಸ್ವಾಮಿ, ಹೈಕಮಾಂಡ್ ಮಾತನಾಡುತ್ತಿದೆ ಎಂದರು.

ಕಾಂಗ್ರೆಸ್ ಸರ್ಕಾರದಲ್ಲಿ ಖಜಾನೆ ಖಾಲಿಯಾಗಿದೆ. ಹೀಗಾಗಿ ಅಧಿಕಾರ ಬದಲಾವಣೆಯ ಬಗ್ಗೆ ಮಾತನಾಡುತ್ತಾರೆ. ಇನ್ನು ಬಳ್ಳಾರಿ ಶಾಸಕರು ಗೂಂಡಾಗಳಂತೆ ವರ್ತಿಸಿದ್ದಾರೆ. ಒಬ್ಬ ಪೊಲೀಸ್ ಅಧಿಕಾರಿ ಒಂದು ಸ್ಥಳಕ್ಕೆ ಹೋದಾಗ ಆ ಪ್ರದೇಶದ ಬಗ್ಗೆ ತಿಳಿದುಕೊಳ್ಳಲು ಕನಿಷ್ಠ ೬ ತಿಂಗಳು ಸಮಯ ಬೇಕಾಗುತ್ತದೆ. ಬಳ್ಳಾರಿ ವಿಷಯದಲ್ಲಿ ಕೆಲಸಕ್ಕೆ ಹಾಜರಾದ ದಿನವೇ ಎಸ್ಪಿ ವಿರುದ್ಧ ಕ್ರಮ ಕೈಗೊಂಡಿದ್ದು ಸರಿಯಲ್ಲ. ಇನ್ನು ಡಿಐಜಿ ಡಾ. ರಾಮಚಂದ್ರರಾವ್ ಮಹಿಳೆಯೊಂದಿಗಿನ ವಿಡಿಯೋ ವೈರಲ್ ಆಗಿರುವ ಕುರಿತಂತೆ ಪ್ರತಿಕ್ರಿಯಿಸಿದ ಬಿ.ಸಿ. ಪಾಟೀಲ್‌, ಇದು ಎಐ ತಂತ್ರಜ್ಞಾನ ಬಳಕೆ ಅಲ್ಲ ಅನಿಸುತ್ತದೆ. ಹಿರಿಯ ಅಧಿಕಾರಿ ಕಚೇರಿಯಲ್ಲಿ ಈ ರೀತಿ ನಡೆದುಕೊಂಡಿದ್ದು ಸರಿಯಲ್ಲ ಎಂದರು.

ಹಿರೇಕೇರೂರಿಗೆ ಗವಿಮಠ ಶ್ರೀಗಳನ್ನು ಅಹ್ವಾನಿಸಿ ಬಿ.ಸಿ. ಪಾಟೀಲ್

ಕೊಪ್ಪಳ: ಕೊಪ್ಪಳ ಗವಿಮಠಕ್ಕೆ ಗುರುವಾರ ಭೇಟಿ ನೀಡಿದ ಮಾಜಿ ಸಚಿವ ಬಿ.ಸಿ. ಪಾಟೀಲ್‌ ಅವರು ಹಿರೇಕೇರೂರಿನಲ್ಲಿ ಪ್ರವಚನ ಕಾರ್ಯಕ್ರಮ ನೀಡುವಂತೆ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳನ್ನು ಆಹ್ವಾನಿಸಿದರು. 2027 ಜನವರಿ ತಿಂಗಳಲ್ಲಿ ಪ್ರವಚನಕ್ಕೆ ಬರುವುದಾಗಿ ಗವಿಶ್ರೀಗಳು ಹೇಳಿದ್ದಾರೆ ಎಂದು ಬಳಿಕ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ. ನಾಡಿನಲ್ಲಿ ಗವಿಶ್ರೀಗಳ ಪ್ರವಚನದಿಂದ ಅನೇಕರು ಉತ್ತಮ ಮಾರ್ಗದಲ್ಲಿ ಹೋಗಲು ಉತ್ತೇಜನ ಸಿಗುತ್ತದೆ ಎಂದ‌ರು. ಹೀಗಾಗಿ, ಶ್ರೀಗಳನ್ನು ಅಹ್ವಾನಿಸಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದಿದ್ದಾರೆ.