ಮಾಜಿ ಶಾಸಕ ದೊಡ್ಡಮನಿ ಮರು ಸೇರ್ಪಡೆಗೆ ವಿರೋಧ !

| Published : Mar 20 2024, 01:20 AM IST

ಮಾಜಿ ಶಾಸಕ ದೊಡ್ಡಮನಿ ಮರು ಸೇರ್ಪಡೆಗೆ ವಿರೋಧ !
Share this Article
  • FB
  • TW
  • Linkdin
  • Email

ಸಾರಾಂಶ

ರಾಮಕೃಷ್ಣ ದೊಡ್ಡಮನಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರಿಂದಲೇ ಕಾಂಗ್ರೆಸ್ ಅಭ್ಯರ್ಥಿ ಸೋಲು ಕಾಣುವಂತಾಯಿತು ಎನ್ನುವ ಚರ್ಚೆ ಫಲಿತಾಂಶ ಬಂದ ದಿನದಿಂದಲೇ ಸಾರ್ವತ್ರಿಕವಾಗಿ ಕೇಳಿ ಬರುತ್ತಲೇ ಇತ್ತು

ಶಿವಕುಮಾರ ಕುಷ್ಟಗಿ ಗದಗ

ಚುನಾವಣೆ ಸಂದರ್ಭದಲ್ಲಿ ಘರ್‌ ವಾಪ್ಸಿ, ಪಕ್ಷಾಂತರಗಳು ಸಾಮಾನ್ಯ, ಆದರೆ ಜಿಲ್ಲೆಯ ಶಿರಹಟ್ಟಿ ಮೀಸಲು ಕ್ಷೇತ್ರದಲ್ಲಿ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಅವರ ಘರ್ ವಾಪಸ್ಸಿಗೆ ಕಾಂಗ್ರೆಸ್ ಕಾರ್ಯಕರ್ತರಲ್ಲಿಯೇ ವಿರೋಧ ವ್ಯಕ್ತವಾಗುತ್ತಿದೆ, ಪಕ್ಷದ ವಿವಿಧ ವೇದಿಕೆ, ಸಾಮಾಜಿಕ ಜಾಲತಾಣಗಳ ಮೂಲಕ ಯುವ ಕಾರ್ಯಕರ್ತರು ತೀವ್ರ ಅಸಮಾಧಾನ ಹೊರ ಹಾಕುತ್ತಿದ್ದಾರೆ.

ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿನ ಶಿರಹಟ್ಟಿ ಎಸ್ಸಿ ಮೀಸಲು ಕ್ಷೇತ್ರವಾಗಿದ್ದು, 2013 ರಿಂದ 2018ರ ಅವಧಿಯಲ್ಲಿ ರಾಮಕೃಷ್ಣ ದೊಡ್ಡಮನಿ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿ ಮುಖ್ಯಮಂತ್ರಿಗಳ ಕಾರ್ಯದರ್ಶಿಗಳಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. 2018ರಲ್ಲಿ ಸೋಲು ಕಂಡ ಅವರಿಗೆ 2023ರ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನೀಡದೇ ಸುಜಾತಾ ದೊಡ್ಡಮನಿ ಅವರಿಗೆ ಟಿಕೆಟ್ ನೀಡಿತ್ತು. ಇದರಿಂದ ಆಕ್ರೋಶಗೊಂಡಿದ್ದ ರಾಮಕೃಷ್ಣ ದೊಡ್ಡಮನಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಪಕ್ಷದ ವರಿಷ್ಠರ ಮನವೊಲಿಕೆಗೂ ಸೊಪ್ಪು ಹಾಕಿರಲಿಲ್ಲ, ಆಗ ಚುನಾವಣೆಯಲ್ಲಿ ಸೋತರು, ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸುಜಾತಾ ದೊಡ್ಡಮನಿ ಕೂಡಾ ಸೋಲು ಕಂಡು ಬಿಜೆಪಿಯ ಡಾ. ಚಂದ್ರು ಲಮಾಣಿ ಆಯ್ಕೆಯಾಗಿದ್ದಾರೆ.

ಸೋಲಿಗೆ ಕಾರಣವಾಗಿದ್ದ: ರಾಮಕೃಷ್ಣ ದೊಡ್ಡಮನಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರಿಂದಲೇ ಕಾಂಗ್ರೆಸ್ ಅಭ್ಯರ್ಥಿ ಸೋಲು ಕಾಣುವಂತಾಯಿತು ಎನ್ನುವ ಚರ್ಚೆ ಫಲಿತಾಂಶ ಬಂದ ದಿನದಿಂದಲೇ ಸಾರ್ವತ್ರಿಕವಾಗಿ ಕೇಳಿ ಬರುತ್ತಲೇ ಇತ್ತು. ಅವರು ಮರಳಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಾರೆ ಎನ್ನುವ ಚರ್ಚೆಗಳ ನಡುವೆಯೇ ಲೋಕಸಭೆ ಚುನಾವಣೆ ಘೋಷಣೆಯಾಗಿದೆ. ಈಗ ಅವರ ಘರ್ ವಾಪ್ಸಿ ಸಾಕಷ್ಟು ಮುನ್ನೆಲೆಗೆ ಬಂದಿದ್ದು, ಶಿರಹಟ್ಟಿ ಭಾಗದ ಕಾಂಗ್ರೆಸ್ ನಾಯಕರೊರ್ವರು ಅವರನ್ನು ಪಕ್ಷಕ್ಕೆ ಮರಳಿ ಕರೆ ತರುವ ಕೆಲಸ ಮಾಡುತ್ತಿದ್ದು, ಇದಕ್ಕೆ ಕಾಂಗ್ರೆಸ್ ಕಾರ್ಯಕರ್ತರಲ್ಲಿಯೇ ಆಕ್ರೋಶ ವ್ಯಕ್ತವಾಗುತ್ತಿದೆ.

ಜಾಲತಾಣದಲ್ಲಿ ವ್ಯಾಪಕ ಚರ್ಚೆ: ರಾಮಕೃಷ್ಣ ದೊಡ್ಡಮನಿ ಕಾಂಗ್ರೆಸ್ ಮರಳುತ್ತಾರೆ ಎನ್ನುವ ಚರ್ಚೆಗಳ ಮಧ್ಯೆಯೇ ಕಳೆದರಡು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ..ಅವರು ಪಕ್ಷಕ್ಕೆ ಮರಳಿದ್ದಾರೆ.. ಎನ್ನುವ ಒಕ್ಕಣಿಕೆ ಹೊಂದಿರುವ ಪೋಸ್ಟ್ ಪ್ರಕಟವಾಗುತ್ತಿದ್ದಂತೆ ಸಂಚಲನ ಉಂಟಾಗಿದ್ದು, ಕಾಂಗ್ರೆಸ್ ಪಕ್ಷದ ಲಕ್ಷ್ಮೇಶ್ವರ, ಶಿರಹಟ್ಟಿ ಸೇರಿದಂತೆ ವಿವಿಧ ಭಾಗಗಳಲ್ಲಿನ ಪಕ್ಷದ ವಾಟ್ಸಪ್ ಗ್ರುಪ್ ಗಳಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ. ನಿಜವಾದ ಕಾರ್ಯಕರ್ತರಾದ ನಾವು ಪಕ್ಷಕ್ಕಾಗಿ ಕೆಲಸ ಮಾಡುತ್ತೇವೆ, ಪಕ್ಷ ವಿರೋಧಿಗಳನ್ನು ಮರಳಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದಕ್ಕೆ ನಮ್ಮ ತೀವ್ರ ವಿರೋಧವಿದೆ. ಪಕ್ಷದ ಹಿರಿಯರು ಇದನ್ನು ಗಮನಿಸಬೇಕು ಎನ್ನುವ ಪೋಸ್ಟ್ ಗಳು ಹೆಚ್ಚಾಗಿ ಕಂಡು ಬರುತ್ತಿವೆ.

ಕಾಂಗ್ರೆಸ್ ಅಭ್ಯರ್ಥಿಗೆ ತೊಂದರೆದಾಯಕ: ಲೋಕ ಸಮರಕ್ಕೆ ಕಾಂಗ್ರೆಸ್ ಪಕ್ಷ ಆನಂದಸ್ವಾಮಿ ಗಡ್ಡದೇವರಮಠ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ, ಈಗಷ್ಟೇ ಪ್ರಚಾರ ಕಾರ್ಯ ಪ್ರಾರಂಭವಾಗಿದೆ. ಇಂತಹ ಸಂದರ್ಭದಲ್ಲಿ ಮಾಜಿ ಶಾಸಕರ ಘರ್ ವಾಪ್ಸಿ ಮುನ್ನೆಲೆಗೆ ಬಂದಿರುವುದು ಅಭ್ಯರ್ಥಿಗೆ ನುಂಗಲಾರದ ತುತ್ತಾಗಲಿದೆ. ಅವರನ್ನು ಮರಳಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರೆ, ಪಕ್ಷದಲ್ಲಿರುವವರು ವಿರೋಧ ಮಾಡುತ್ತಾರೆ. ಅವರನ್ನು ಹಾಗೆಯೇ ಬಿಟ್ಟರೆ ಅವರಿಂದ ಬರಹುದಾದ ಮತಗಳು ಕೈ ತಪ್ಪುತ್ತವೆ ಎನ್ನುವ ಆತಂಕವಿದೆ, ಹಾಗಾಗಿ ಕಾಂಗ್ರೆಸ್ ವರಿಷ್ಠರು ಯಾವ ನಿರ್ಧಾರ ತೆಗೆದುಕೊಂಡರೂ ಹೊಡತೆ ಬೀಳುವುದು ಅಭ್ಯರ್ಥಿಗೆ.

ರಾಮಕೃಷ್ಣ ಅವರು ಮರಳಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ಕುರಿತು ಇದುವರೆಗೆ ಎಲ್ಲಿಯೂ ಚರ್ಚೆಯಾಗಿಲ್ಲ. ಪಕ್ಷದ ವರಿಷ್ಠರಾಗಲಿ, ಜಿಲ್ಲಾ ನಾಯಕರಾಗಲಿ ಇದರ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ, ಪಕ್ಷದ ಅಭ್ಯರ್ಥಿಯನ್ನೇ ಸೋಲಿಸಿದವರನ್ನು ಯಾವ ಆಧಾರದಲ್ಲಿ ಮರಳಿ ಸೇರ್ಪಡೆ ಮಾಡಿಕೊಳ್ಳುತ್ತಾರೆ? ಎಂದು ಕಾಂಗ್ರೆಸ್‌ ಪರಾಜಿತ ಅಭ್ಯರ್ಥಿ ಸುಜಾತಾ ದೊಡ್ಡಮನಿ ಹೇಳಿದರು.