ಕನ್ನಡಪ್ರಭ ವಾರ್ತೆ ಅರಸೀಕೆರೆ

ನಗರದ ಹಳೆ ತರಕಾರಿ ಮಾರುಕಟ್ಟೆಗೆ ಜೆಡಿಎಸ್ ಮುಖಂಡ ಹಾಗೂ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರು ದಿಢೀರ್‌ ಭೇಟಿ ನೀಡಿ, ತರಕಾರಿ ಮತ್ತು ಫುಟ್‌ಪಾತ್ ವ್ಯಾಪಾರಸ್ಥರ ಸಮಸ್ಯೆಗಳನ್ನು ಆಲಿಸಿ ಸ್ಥಳಾಂತರ ಯತ್ನದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಹಲವು ದಶಕಗಳಿಂದ ಈ ಮಾರುಕಟ್ಟೆಯನ್ನು ನಂಬಿಕೊಂಡು ಜೀವನ ಸಾಗಿಸುತ್ತಿರುವ ನೂರಾರು ಕುಟುಂಬಗಳನ್ನು ಬೇರೆಡೆಗೆ ಒತ್ತಾಯಿಸುವುದು ಅಸಂಗತ ಹಾಗೂ ಜನವಿರೋಧಿ ನಡೆ ಎಂದು ಅವರು ಆಕ್ಷೇಪಿಸಿದರು.ಮಾರುಕಟ್ಟೆ ಸ್ಥಳದಲ್ಲಿ ಫುಡ್‌ಕೋರ್ಟ್‌ ನಿರ್ಮಾಣ ಮಾಡುವ ಪ್ರಸ್ತಾವನೆಯನ್ನು ತೀವ್ರವಾಗಿ ವಿರೋಧಿಸಿದ ರೇವಣ್ಣ, “ಫುಡ್‌ಕೋರ್ಟ್ ಬೇಕಾದರೆ ಬೇರೆಡೆ ಮಾಡಲಿ. ಆದರೆ ಹತ್ತಾರು ವರ್ಷಗಳಿಂದ ವ್ಯಾಪಾರ ಮಾಡಿಕೊಂಡು ಬದುಕುತ್ತಿರುವವರನ್ನು ಬೀದಿಪಾಲು ಮಾಡುವುದು ಸರಿಯಲ್ಲ. ಅಧಿಕಾರ ಶಾಶ್ವತವಲ್ಲ; ಜನಪರ ಕೆಲಸಗಳೇ ಶಾಶ್ವತ ಎಂದು ಹೇಳಿದರು. ಅಗತ್ಯವಿದ್ದರೆ ವ್ಯಾಪಾರಸ್ಥರೊಂದಿಗೆ ನಾವೂ ಹೋರಾಟಕ್ಕೆ ಇಳಿಯುತ್ತೇವೆ ಎಂದು ಎಚ್ಚರಿಸಿದರು.ನಗರಸಭೆ ನಿರ್ಮಿಸಿರುವ ಸಂತೆ ಮೈದಾನದ ಮಳಿಗೆಗಳು ತರಕಾರಿ ವ್ಯಾಪಾರಕ್ಕೆ ಯೋಗ್ಯವಲ್ಲ. ಗಾಳಿ ಬೆಳಕು, ಅಗಲ ಜಾಗದ ಕೊರತೆಯಿಂದ ಅಲ್ಲಿ ವ್ಯಾಪಾರ ಸಾಧ್ಯವಾಗುತ್ತಿಲ್ಲ. ಸುಮಾರು 500ಕ್ಕೂ ಹೆಚ್ಚು ಕುಟುಂಬಗಳು 50 ವರ್ಷಗಳಿಂದ ಈ ಪ್ರದೇಶದಲ್ಲೇ ತರಕಾರಿ, ಸೊಪ್ಪು, ಹೂವು, ಕಂಕುಮ, ಮೊಬೈಲ್ ರಿಪೇರಿ ಸೇರಿದಂತೆ ವಿವಿಧ ವ್ಯಾಪಾರ ನಡೆಸಿಕೊಂಡು ಬರುತ್ತಿವೆ. ಇಂತಹವರ ಮೇಲೆ ಉದ್ದೇಶಪೂರ್ವಕ ಒತ್ತಡ ಹೇರಬಾರದು; ಹಳೆ ಮಾರುಕಟ್ಟೆಯ ಅಂಗಡಿಗಳನ್ನು ದುರಸ್ತಿ ಮಾಡಿ ಅಲ್ಲಿಯೇ ವ್ಯಾಪಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಕಠಿಣ ಟೀಕೆನಂತರ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೇವಣ್ಣ, “ದೇವೇಗೌಡರ ಮಾತು ಮೀರಿ ಈ ವ್ಯಕ್ತಿಯನ್ನು ಗೆಲ್ಲಿಸಿದ ತಪ್ಪಿಗೆ ಇಂದು ಪಶ್ಚಾತ್ತಾಪವಾಗುತ್ತಿದೆ ಎಂದು ಪರೋಕ್ಷವಾಗಿ ಶಾಸಕ ಕೆ.ಎಂ. ಶಿವಲಿಂಗೇಗೌಡರ ವಿರುದ್ಧ ವಾಗ್ದಾಳಿ ನಡೆಸಿದರು. ರಾಗಿ ಖರೀದಿ ಕೇಂದ್ರಗಳಲ್ಲಿ ತೂಕದಲ್ಲಿ ವ್ಯತ್ಯಾಸವಾಗುತ್ತಿದೆ ಎಂಬ ರೈತರ ದೂರುಗಳನ್ನೂ ಉಲ್ಲೇಖಿಸಿ, ರೈತರು ಹಾಗೂ ವ್ಯಾಪಾರಸ್ಥರ ವಿರೋಧಿಯಾಗಿ ನಡೆದುಕೊಳ್ಳುವವರಿಗೆ ಜನರೇ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.ಅರಸೀಕೆರೆಯ ಅಭಿವೃದ್ಧಿಗೆ ದೇವೇಗೌಡರು, ಕುಮಾರಸ್ವಾಮಿ ಹಾಗೂ ತಾವು ಮಾಡಿದ ಕೆಲಸಗಳನ್ನು ದಾಖಲೆ ಸಮೇತ ಜನತೆಗೆ ತಿಳಿಸುವುದಾಗಿ ಹೇಳಿದ ಅವರು, ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಜೆಡಿಎಸ್ ಸಿದ್ಧತೆ ಮಾಡಿಕೊಂಡಿದೆ ಎಂದರು. ಬಿಜೆಪಿ ಜೊತೆ ಮೈತ್ರಿ ಕುರಿತು ರಾಜ್ಯ ನಾಯಕರು ತೀರ್ಮಾನಿಸುವರು ಎಂದು ಸ್ಪಷ್ಟಪಡಿಸಿದರು.ಸುದ್ದಿಗೋಷ್ಟಿಯಲ್ಲಿ ಮಾಜಿ ಶಾಸಕ ಜಿ.ಎಸ್. ಪರಮೇಶ್ವರಪ್ಪ, ಜಿಪಂ ಮಾಜಿ ಸದಸ್ಯ ಬಾಣಾವರ ಅಶೋಕ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ರಾಂಪುರ ಶೇಖರಪ್ಪ, ಹಿರಿಯ ಮುಖಂಡ ವಿವೇಕ್, ಕೆಂಕೆರೆ ಕೇಶವಮೂರ್ತಿ, ನಗರಸಭೆ ಮಾಜಿ ಅಧ್ಯಕ್ಷ ಗಿರೀಶ್, ವಿದ್ಯಾಧರ್‌, ಹರ್ಷವರ್ಧನ್, ಲಾಳನಕೆರೆ ಯೋಗೇಶ್, ಬಂಡಿಗೌಡ್ರ ರಾಜಣ್ಣ ಸೇರಿದಂತೆ ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.