- ಹರಿಹರ ನಗರಸಭೆ ಅಧಿಕಾರಿಗಳ ನಿರ್ಧಾರ ಹಿಂಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ
- - -- ಹೊಸದಾಗಿ ಗುರುತಿಸಿರುವ ಎಪಿಎಂಸಿ ಜಾಗ ನಗರದಿಂದ 3 ಕಿ.ಮೀ. ದೂರ, ಸೌಕರ್ಯಗಳೂ ಇಲ್ಲ
- ಹರಿಹರ ನಗರದ ಶಿವಮೊಗ್ಗ ರಸ್ತೆಯಲ್ಲಿ ದಶಕಗಳಿಂದ ನಡೆಯುತ್ತಿದ್ದ ಸಂತೆ- ಕಾಂಗ್ರೆಸ್ ಮುಖಂಡರ ಮಧ್ಯ ಪ್ರವೇಶ: ಸ್ಥಳಾಂತರ ಪ್ರಕ್ರಿಯೆಗೆ ತಾತ್ಕಾಲಿಕ ತಡೆ - - -
ಕನ್ನಡಪ್ರಭ ವಾರ್ತೆ ಹರಿಹರ
ನಗರದ ಶಿವಮೊಗ್ಗ ರಸ್ತೆಯಲ್ಲಿ ದಶಕಗಳಿಂದ ಸಾಂಪ್ರದಾಯಿಕವಾಗಿ ನಡೆಯುತ್ತಿದ್ದ ವಾರದ ಸಂತೆಯನ್ನು ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸದೇ ಏಕಾಏಕಿ ಎಪಿಎಂಸಿ ಆವರಣಕ್ಕೆ ಸ್ಥಳಾಂತರಿಸಲು ಮುಂದಾದ ನಗರಸಭೆ ಅಧಿಕಾರಿಗಳ ಕ್ರಮವನ್ನು ಖಂಡಿಸಿ ಬೀದಿಬದಿ ವ್ಯಾಪಾರಸ್ಥರು ತೀವ್ರ ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆಯಿತು.
ಅಧಿಕಾರಿಗಳು ಹಾಗೂ ವ್ಯಾಪಾರಸ್ಥರ ನಡುವಿನ ಹೈಡ್ರಾಮಾದ ಬಳಿಕ, ಕಾಂಗ್ರೆಸ್ ಮುಖಂಡರ ಮಧ್ಯಪ್ರವೇಶದಿಂದಾಗಿ ಸ್ಥಳಾಂತರ ಪ್ರಕ್ರಿಯೆಗೆ ತಾತ್ಕಾಲಿಕ ತಡೆಬಿದ್ದಿದ್ದು, ಎಂದಿನಂತೆ ಹಳೇ ಜಾಗದಲ್ಲೇ ಸಂತೆ ಮುಂದುವರಿಯಿತು.ಮೇ 26ರಂದು ಶಾಸಕರ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಸಂತೆಯನ್ನು ಊರಮ್ಮ ದೇವಸ್ಥಾನದ ಮುಂಭಾಗದಿಂದ ಎಪಿಎಂಸಿ ಆವರಣಕ್ಕೆ ಸ್ಥಳಾಂತರಿಸಲು ತೀರ್ಮಾನಿಸಲಾಗಿತ್ತು. ಈ ನಿರ್ಧಾರದ ಬೆನ್ನಲ್ಲೇ ವ್ಯಾಪಾರಸ್ಥರಿಗೆ ಯಾವುದೇ ಮುನ್ಸೂಚನೆ ಅಥವಾ ಕಾಲಾವಕಾಶ ನೀಡದೇ ನಗರಸಭೆ ಅಧಿಕಾರಿಗಳು ಮಂಗಳವಾರ ಏಕಾಏಕಿ ಸ್ಥಳಾಂತರ ಕಾರ್ಯಾಚರಣೆಗೆ ಮುಂದಾಗಿದ್ದರು. ಅಧಿಕಾರಿಗಳ ದಿಢೀರ್ ನಡೆಯನ್ನು ತೀವ್ರವಾಗಿ ವಿರೋಧಿಸಿದ ವ್ಯಾಪಾರಸ್ಥರ ಸಂಘದ ಪದಾಧಿಕಾರಿಗಳು ಹಾಗೂ ನೂರಾರು ವ್ಯಾಪಾರಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ನಗರಸಭೆಯು ಹೊಸದಾಗಿ ಗುರುತಿಸಿರುವ ಎಪಿಎಂಸಿ ಜಾಗವು ನಗರದಿಂದ ಸುಮಾರು 3 ಕಿ.ಮೀ. ದೂರದಲ್ಲಿದೆ. ಅಲ್ಲಿ ಗ್ರಾಹಕರಿಗೆ ಬಂದುಹೋಗಲು ಸೂಕ್ತ ಸಾರಿಗೆ ವ್ಯವಸ್ಥೆಯಿಲ್ಲ. ಜೊತೆಗೆ ಬೆಳಗ್ಗೆಯಿಂದ ಸಂಜೆವರೆಗೆ ವ್ಯಾಪಾರ ಮಾಡುವರಿಗೆ ಅಥವಾ ಗಿರಾಕಿಗಳಿಗೆ ಕುಡಿಯುವ ನೀರು, ಶೌಚಾಲಯದಂತಹ ಕನಿಷ್ಠ ಮೂಲ ಸೌಕರ್ಯಗಳನ್ನೂ ಕಲ್ಪಿಸಿಲ್ಲ. ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿ ಸಂತೆಯನ್ನು ಸ್ಥಳಾಂತರಿಸಿದರೆ, ದೈನಂದಿನ ವ್ಯಾಪಾರ ಕುಸಿದು, ನೂರಾರು ಕುಟುಂಬಗಳು ಬೀದಿಗೆ ಬೀಳಲಿವೆ. ಹೀಗಾಗಿ, ಎಪಿಎಂಸಿಗೆ ಹೋಗುವುದಿಲ್ಲ ಎಂದು ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ನಿರ್ಧಾರವನ್ನು ಹಿಂಪಡೆಯುವಂತೆ ಆಗ್ರಹಿಸಿ ಪ್ರತಿಭಟಿಸಿದರು.ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಪ್ರತಿಭಟನಾಕಾರರ ಅಳಲನ್ನು ಆಲಿಸಿದರು. ಕೂಡಲೇ ಜಿಲ್ಲಾಧಿಕಾರಿಗೆ ಕರೆಮಾಡಿ ವಾಸ್ತವ ಸ್ಥಿತಿಗತಿ ಮನವರಿಕೆ ಮಾಡಿಕೊಟ್ಟರು. ಪರಿಸ್ಥಿತಿ ಗಂಭೀರತೆ ಅರಿತ ಜಿಲ್ಲಾಧಿಕಾರಿ ಅವರು ಪರ್ಯಾಯ ವ್ಯವಸ್ಥೆ ಕಲ್ಪಿಸುವವರೆಗೆ ತಾತ್ಕಾಲಿಕವಾಗಿ ಹಳೇ ಜಾಗದಲ್ಲೇ ಸಂತೆ ಮುಂದುವರಿಸಲು ಮೌಖಿಕ ಸೂಚನೆ ನೀಡಿದರು.
ನಂದಿಗಾವಿ ಶ್ರೀನಿವಾಸ್, ಶೀಘ್ರದಲ್ಲೇ ಬೀದಿಬದಿ ವ್ಯಾಪಾರಸ್ಥರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು, ಯಾರಿಗೂ ತೊಂದರೆ ಆಗದಂತೆ ಸರ್ವಸಮ್ಮತ ತೀರ್ಮಾನ ಕೈಗೊಳ್ಳೋಣ. ಅಲ್ಲಿಯವರೆಗೆ ನೀವು ಇಲ್ಲೇ ವ್ಯಾಪಾರ ಮುಂದುವರಿಸಿ ಎಂದು ತಿಳಿಸಿದರು. ಈ ಹಿನ್ನೆಲೆಯಲ್ಲಿ ವ್ಯಾಪಾರಸ್ಥರು ಪ್ರತಿಭಟನೆ ಕೈಬಿಟ್ಟರು. ಬಳಿಕ ವಾರದ ಸಂತೆ ಎಂದಿನಂತೆ ಯಾವುದೇ ತೊಂದರೆಯಿಲ್ಲದೇ ಶಿವಮೊಗ್ಗ ರಸ್ತೆಯಲ್ಲೇ ನಡೆಯಿತು.- - -
