ನಗರದಲ್ಲಿ ರಾಪಿಡೋ ಸೇವೆ ಆರಂಭ ಹಾಗೂ ರೆಂಟಲ್ ಬೈಕ್ ಸಂಚಾರ ಖಂಡಿಸಿ ಆಟೋ ಮಾಲೀಕ ಚಾಲಕರ ಸಂಘ ಮತ್ತು ಮಡಿಕೇರಿ ಪ್ರವಾಸಿ ಟ್ಯಾಕ್ಸಿ ಮಾಲೀಕರು ಹಾಗೂ ಚಾಲಕರ ಸಂಘದ ವತಿಯಿಂದ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ಶುಕ್ರವಾರ ನಡೆಸಿದರು.
ಮಡಿಕೇರಿ : ನಗರದಲ್ಲಿ ರಾಪಿಡೋ ಸೇವೆ ಆರಂಭ ಹಾಗೂ ರೆಂಟಲ್ ಬೈಕ್ ಸಂಚಾರ ಖಂಡಿಸಿ ಆಟೋ ಮಾಲೀಕ ಚಾಲಕರ ಸಂಘ ಮತ್ತು ಮಡಿಕೇರಿ ಪ್ರವಾಸಿ ಟ್ಯಾಕ್ಸಿ ಮಾಲೀಕರು ಹಾಗೂ ಚಾಲಕರ ಸಂಘದ ವತಿಯಿಂದ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ಶುಕ್ರವಾರ ನಡೆಸಿದರು. ನಗರದ ಎವಿ ಶಾಲೆಯಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ನಗರದ ಇಂಧಿರಾ ಗಾಂಧಿ ವೃತ್ತ, ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತ, ನಗರ ಪೊಲೀಸ್ ಠಾಣೆ, ಮಂಗೇರಿರ ಮುತ್ತಣ್ಣ ವೃತ್ತವಾಗಿ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಸಾಗಿದರು. ಮೆರವಣಿಗೆ ಸಂದರ್ಭ ರ್ಯಾಪಿಡೋ ಸ್ಥಗಿತಗೊಳಿಸಬೇಕು. ೧೦ಕ್ಕಿಂತ ಅಧಿಕ ಇಟ್ಟುಕೊಂಡಿರುವ ರೆಂಟಲ್ ಬೈಕ್ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಘೋಷಣೆ ಕೂಗಿ ಒತ್ತಾಯಿಸಿದರು.
ಆಟೋ ಮಾಲೀಕ ಚಾಲಕರ ಸಂಘದ ಜಿಲ್ಲಾಧ್ಯಕ್ಷ ಡಿ.ಎಚ್.ಮೇದಪ್ಪ ಮಾತನಾಡಿ, ರಾಜ್ಯದಲ್ಲಿ ಕೊಡಗು ಪುಟ್ಟ ಜಿಲ್ಲೆ. ಆದರೆ, ಜಿಲ್ಲೆಯಲ್ಲಿ ವಾಹನಗಳ ಸಂಖ್ಯೆಯಲ್ಲಿ ಮಾತ್ರ ಇತರ ಜಿಲ್ಲೆಗಳಿಗಿಂತ ಹೆಚ್ಚು. ಗುಡ್ಡಗಾಡು ಪ್ರದೇಶದಲ್ಲಿ ಸುಮಾರು ೧೨,೦೦೦ಕ್ಕೂ ಅಧಿಕ ಆಟೋ ಚಾಲನೆಯಾಗುತ್ತಿದೆ. ಜತೆಗೆ ೨೦೦೦ಕ್ಕೂ ಅಧಿಕ ಟ್ಯಾಕ್ಸಿ ಕಾರುಗಳು ಓಡಾಡುತ್ತಿವೆ. ಇಷ್ಟೆಲ್ಲ ಇರುವಾಗ ಮೊದಲ ಬಾರಿಗೆ ರೆಂಟಲ್ ಬೈಕ್ ಅನ್ನು ಜಿಲ್ಲೆಗೆ ತಂದು ನಮ್ಮ ಜೀವನ ಹಾಳು ಮಾಡಿದರು. ಈಗ ರ್ಯಾಪಿಡೋ ತಂದು ಬೀದಿಯಲ್ಲಿ ತಂದು ನಿಲ್ಲಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.ರೆಂಟಲ್ ಬೈಕ್ಗೆ ಸಂಸ್ಥೆಗಳು ೨೫ ಬೈಕ್ಗೆ ಪ್ರಾದೇಶಿಕ ಸಾರಿಗೆ ಕಚೇರಿಯಿಂದ ಅನುಮತಿ ಪಡೆದಿದ್ದಾರೆ. ಆದರೆ, ಇಂದು ೧೦೦-೨೦೦ ಬೈಕ್ಗಳಿವೆ. ಸಂಸ್ಥೆಗಳಲ್ಲಿ ೨೫ ಬೈಕ್ ಮಾತ್ರ ಇಟ್ಟುಕೊಂಡು, ಖಾಲಿಯಾದಂತೆ ಬೈಕ್ಗಳನ್ನು ತಂದು ನಿಲ್ಲಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಈ ಬಗ್ಗೆ ಸಾರಿಗೆ ಇಲಾಖೆಗೆ ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳುತ್ತಾರೆ. ನಂತರ ಯಥಾಸ್ಥಿತಿ ನಿರ್ಮಾಣವಾಗುತ್ತಿದೆ. ಜತೆಗೆ ವೈಟ್ ಬೋರ್ಡ್ನ ರೆಂಟಲ್ ಬೈಕ್ ನಗರದಲ್ಲಿ ಹೆಚ್ಚಾಗಿ ಓಡಾಡುತ್ತಿವೆ. ಇದೇ ರೀತಿ ಮುಂದುವರೆದರೆ ನಮ್ಮಲ್ಲಿರುವ ಎಲ್ಲಾ ವಾಹನಗಳನ್ನು ವೈಟ್ ಬೋರ್ಡ್ ಮಾಡಿ ಓಡಿಸುತ್ತೇವೆ ಎಂದು ಎಚ್ಚರಿಸಿದರು.
ಸರ್ಕಾರಕ್ಕೆ ವಿಮೆ, ತೆರಿಗೆ ಇತ್ಯಾದಿಗಳನ್ನು ಪಾವತಿಸುವತ್ತಾ ಜೀವನ ಸಾಗಿಸುತ್ತಿದ್ದೇವೆ. ಆದರೆ, ರಾಜಾರೋಷವಾಗಿ ವೈಟ್ ಬೋರ್ಡ್ನಲ್ಲಿ ರ್ಯಾಪಿಡೋ ಮಾಡಿ ಓಡಿಸುತ್ತಿದ್ದಾರೆ. ಇದಕ್ಕೆ ಪೊಲೀಸ್ ಇಲಾಖೆ ಮತ್ತು ಪ್ರಾದೇಶಿಕ ಸಾರಿಗೆ ಇಲಾಖೆ ಕಾರ್ಯಚರಣೆ ನಡೆಸಿ ವಾಹನಗಳನ್ನು ಸೀಜ್ಹ್ ಮಾಡುವುದ ಮೂಲಕ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.ಮಡಿಕೇರಿ ಪ್ರವಾಸಿ ಟ್ಯಾಕ್ಸಿ ಮಾಲೀಕರು ಹಾಗೂ ಚಾಲಕರ ಸಂಘದ ಗೌರವಾಧ್ಯಕ್ಷ ಸಂತೋಷ್ ಕಾರ್ಯಪ್ಪ ಮಾತನಾಡಿ, ಗುಡ್ಡಗಾಡು ಪ್ರದೇಶವಾದ್ದರಿಂದ ರ್ಯಾಪಿಡೋ ಅವಶ್ಯಕತೆ ಇಲ್ಲ. ರೆಂಟಲ್ ಬೈಕ್ ಹಾವಳಿ ಮಿತಿಮೀರಿದೆ. ಲೈಸೆನ್ಸ್ ಇಬ್ಬರಿಗೆ ನೀಡಿದರೆ, ಮೂರದಿಂದ ನಾಲ್ಕು ಜನ ಬೈಕ್ನಲ್ಲಿ ತುಂಬಿಕೊಂಡು ಹೋಗುತ್ತಿದ್ದಾರೆ. ಲೈಸೆನ್ಸ್ ಇಲ್ಲ. ಎಮಿಷನ್ ಟೆಸ್ಟ್ ಇರಲ್ಲ. ಇದಕ್ಕೆ ಕಡಿವಾಣ ಹಾಕುವಂತಾಗಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾ ನಿರತರು ಅಪರ ಜಿಲ್ಲಾಧಿಕಾರಿ ಜಯಲಕ್ಷ್ಮಿ ರಾಯಕೋಡ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರವನ್ನು ಸಲ್ಲಿಸಿದರು. ಮನವಿ ಆಲಿಸಿದ ಜಯಲಕ್ಷ್ಮಿ ರಾಯಕೋಡ ಅವರು ಸಮಸ್ಯೆಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು. ವೈಟ್ ಬೋರ್ಡ್ ಬೈಕ್ ಸಂಚಾರ ಸಂಬಂಧ ಪ್ರಾದೇಶಿಕ ಸಾರಿಗೆ ಇಲಾಖೆ ಸೂಚಿಸಿ ಪರಿಶೀಲನೆ ನಡೆಸಲಾಗುವುದು ಎಂದು ಭರವಸೆ ನೀಡಿದರು.ಆಟೋ ಮಾಲೀಕ ಚಾಲಕರ ಸಂಘ ನಗರಾಧ್ಯಕ್ಷ ಎ.ಸಮ್ಮದ್, ಉಪಾಧ್ಯಕ್ಷ ದಿನೇಶ್ ಶೆಟ್ಟಿ, ಕಾರ್ಯದರ್ಶಿ ಬಾರನ ದಿನೇಶ್, ಮಡಿಕೇರಿ ಪ್ರವಾಸಿ ಟ್ಯಾಕ್ಸಿ ಮಾಲೀಕರು ಹಾಗೂ ಚಾಲಕರ ಸಂಘದ ಅಧ್ಯಕ್ಷ ವೀರೇಂದ್ರ ಗೌಡ, ಉಪಾಧ್ಯಕ್ಷ ಟಿ.ಕೆ.ಮದುಮಂದಣ್ಣ, ಕಾರ್ಯದರ್ಶಿ ಗಣೇಶ್ ತೆಕ್ಕಡ, ಖಜಾಂಚಿ ನಾಯಕಂಡ ಕುಟ್ಟಪ್ಪ ಹಾಗೂ ಆಟೋ ಚಾಲಕರು, ಟ್ಯಾಕ್ಸಿ ಚಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಪ್ರಯಾಣಿಕರ ಪರದಾಟಮಡಿಕೇರಿಯಲ್ಲಿ ಶುಕ್ರವಾರ ಆಟೋ ಹಾಗೂ ಪ್ರವಾಸಿ ಟ್ಯಾಕ್ಸಿ ವಾಹನಗಳ ಮಾಲೀಕರು ತಮ್ಮ ವಾಹನಗಳ ಸಂಚಾರ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಇದರಿಂದ ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಸಂಚಾರಿಸಲು ಪರದಾಟ ನಡೆಸಿದ ದೃಶ್ಯ ಕಂಡುಬಂತು. ಮಡಿಕೇರಿ ನಗರದಲ್ಲಿ ಶುಕ್ರವಾರ ಸಂತೆ ದಿನವಾದ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ತೆರಳಲು ಕೂಡ ಸಾರ್ವಜನಿಕರು ಸಮಸ್ಯೆ ಅನುಭವಿಸುವಂತಾಯಿತು. ಆಟೋಗಳ ಸಂಚಾರ ಇಲ್ಲದ ಹಿನ್ನೆಲೆಯಲ್ಲಿ ಮಡಿಕೇರಿ ನಗರ ಬಿಕೋ ಎನ್ನುವಂತಿತ್ತು.