ಚಿನಕುರಳಿ ಹೋಬಳಿ ಮಳೆಯಾಶ್ರಿತ ಪ್ರದೇಶವಾಗಿದೆ. ಇಲ್ಲಿ ಸೋಲಾರ್ ಪ್ಲಾಂಟ್ ನಿರ್ಮಿಸಿದರೆ ರೈತರ ಕೃಷಿಗೆ ಅನುಕೂಲವಾಗಿದೆ. ಅಧಿಕಾರಿಗಳು ಸ್ಥಳ ಪರಿಶೀಲಿಸಿ ಈ ಯೋಜನೆಗೆ ಸೂಕ್ತ ಜಾಗವೆಂದು ಗುರುತಿಸಿದ್ದಾರೆ. ಇದರಲ್ಲಿ ಶಾಸಕ ದರ್ಶನ್ ಪುಟ್ಟಣಯ್ಯ ಅವರ ಪಾತ್ರವಿಲ್ಲ.
ಪಾಂಡವಪುರ:
ತಾಲೂಕಿನ ಕನಗನಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ಸೋಲಾರ್ ಪವರ್ ಪ್ಲಾಂಟ್‌ನಿಂದ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ. ಈ ಯೋಜನೆಗೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ ಎಂದು ರೈತಸಂಘದ ತಾಲೂಕು ಅಧ್ಯಕ್ಷ ಕೆನ್ನಾಳು ವಿಜಯ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿನಕುರಳಿ ಹೋಬಳಿ ಮಳೆಯಾಶ್ರಿತ ಪ್ರದೇಶವಾಗಿದೆ. ಇಲ್ಲಿ ಸೋಲಾರ್ ಪ್ಲಾಂಟ್ ನಿರ್ಮಿಸಿದರೆ ರೈತರ ಕೃಷಿಗೆ ಅನುಕೂಲವಾಗಿದೆ. ಅಧಿಕಾರಿಗಳು ಸ್ಥಳ ಪರಿಶೀಲಿಸಿ ಈ ಯೋಜನೆಗೆ ಸೂಕ್ತ ಜಾಗವೆಂದು ಗುರುತಿಸಿದ್ದಾರೆ. ಇದರಲ್ಲಿ ಶಾಸಕ ದರ್ಶನ್ ಪುಟ್ಟಣಯ್ಯ ಅವರ ಪಾತ್ರವಿಲ್ಲ ಎಂದರು.
ಸ್ಥಳೀಯ ರೈತರು ಸಹ ಯೋಜನೆ ಮಾಡಿಸುವಂತೆ ಬೆಂಬಲಿಸಿ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ಪ್ಲಾಂಟ್ ನಿರ್ಮಾಣ ಮಾಡುತ್ತಿರುವ ಕನಗನಹಳ್ಳಿ ಗೋಮಾಳದಲ್ಲಿ ಕೆಲವರು ಮಣ್ಣು ತೆಗೆದು ಗುಂಡಿ ಮಾಡುತ್ತಿದ್ದಾರೆ ಎಂದು ಸಿ.ಎಸ್.ಪುಟ್ಟರಾಜು ವಿರುದ್ಧ ಆರೋಪಿಸಿದ ಅವರು, ಗೋಮಾಳ ಒತ್ತುವರಿ ಮಾಡಿಕೊಂಡಿದ್ದಾರೆ. ಹಳ್ಳ ಮುಚ್ಚಿದ್ದು, ಈ ಬಗ್ಗೆ ಮುಂದಿನ ದಿನಗಳಲ್ಲಿ ದಾಖಲೆ ಬಿಡುಗಡೆ ಮಾಡುತ್ತೇವೆ ಎಂದರು.ಚಿನಕುರಳಿ ಗ್ರಾಮಕ್ಕೆ ಮಂಜೂರಾಗಿದ್ದ ಪೊಲೀಸ್ ಠಾಣೆಯನ್ನು ಕ್ಯಾತನಹಳ್ಳಿ ಗ್ರಾಮಕ್ಕೆ ಸ್ಥಳಾಂತರ ಮಾಡಿಸಿಲ್ಲ. 2024ರಲ್ಲಿಯೇ ಶಾಸಕರು ಕ್ಯಾತನಹಳ್ಳಿ ಗ್ರಾಮಕ್ಕೆ ಮಂಜೂರು ಮಾಡಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದರು. ಅದರ ಆದೇಶದ ಮೇಲೆ ಕ್ಯಾತನಹಳ್ಳಿಯ ಪೊಲೀಸ್ ಠಾಣೆಯನ್ನು ಮೇಲ್ದರ್ಜೆಗೇರಿಸಿದ್ದಾರೆ ಎಂದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಂದ ಒತ್ತಡ ತಂದು ಚಿನಕುರಳಿಯ ಠಾಣೆಯನ್ನು ಮೇಲ್ದರ್ಜೆಗೇರಿಸಲಾಗಿದೆ ಎಂದು ಆದೇಶ ಹೊರಡಿಸಿದ್ದರು ಅಷ್ಟೇ. ಇದರಲ್ಲಿ ಶಾಸಕರ ಯಾವುದೇ ಪಾತ್ರವಿಲ್ಲ. ಮುಂದಿನ ದಿನಗಳಲ್ಲಿ ಚಿನಕುರಳಿ ಗ್ರಾಮದ ಪೊಲೀಸ್ ಠಾಣೆಯನ್ನು ಮೇಲ್ದರ್ಜೆಗೇರಿಸುವ ಪ್ರಾಮಾಣಿಕ ಪ್ರಯತ್ನವನ್ನು ಶಾಸಕರು ಮಾಡಲಿದ್ದಾರೆ ಎಂದರು.ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಎಣ್ಣೆಹೊಳೆಕೊಪ್ಪಲು ಮಂಜುನಾಥ್, ಟಿಎಪಿಸಿಎಂಎಸ್ ನಿರ್ದೇಶಕ ಹಾಳಯ್ಯ, ಪುರಸಭೆ ನಾಮಿನಿ ಸದಸ್ಯ ಮುರುಳೀಧರ್, ಹಿರೇಮರಳಿ ಶಿವಕುಮಾರ್, ಶ್ಯಾದನಹಳ್ಳಿ ಚಲುವರಾಜು, ಬಾಬು ಹಾಜರಿದ್ದರು.ರಾಷ್ಟ್ರೀಯ ನಾಡ ಹಬ್ಬಗಳಿಗೆ ಶಾಸಕರ ಗೈರು; ರೈತ ಸಂಘ ವಿರೋಧ
ಪಾಂಡವಪುರ:ರಾಷ್ಟ್ರೀಯ, ನಾಡಹಬ್ಬಗಳಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಗೈರಾಗುತ್ತಿರುವುದಕ್ಕೆ ರೈತಸಂಘ ವಿರೋಧಿಸುತ್ತದೆ ಎಂದು ತಾಲೂಕು ಅಧ್ಯಕ್ಷ ಕೆನ್ನಾಳು ವಿಜಯ್ ಕುಮಾರ್ ತಿಳಿಸಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರಿಗೆ ಈ ವಿಚಾರವಾಗಿ ಸಾಕಷ್ಟು ಸಲಹೆ ನೀಡಿದ್ದೇವೆ. ವಿದೇಶಕ್ಕೆ ತೆರಳಿದ್ದರಿಂದಾಗಿ ರಾಷ್ಟ್ರೀಯ ಹಾಗೂ ನಾಡಹಬ್ಬಗಳಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ ಅಷ್ಟೇ, ಉದ್ದೇಶಪೂರ್ವಕವಾಗಿ ಗೈರಾಗಿಲ್ಲ. ಮುಂದಿನ ರಾಷ್ಟ್ರೀಯ ಹಬ್ಬಗಳಲ್ಲಿ ಕಡ್ಡಾಯವಾಗಿ ಭಾಗವಹಿಸಲಿದ್ದಾರೆ ಎಂದರು.ಶಾಸಕರು ಪದೇ ಪದೇ ಅಮೆರಿಕಾಗೆ ತೆರಳವುದು ಸಹ ಕ್ಷೇತ್ರದ ಅಭಿವೃದ್ಧಿ ಪೂರಕವಾಗಿದೆ. ಅಲ್ಲಿನ ಹಲವು ಕಂಪನಿಗಳೊಂದಿಗೆ ಚರ್ಚಿಸಿ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ತರುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.